ವಿಧಾನಸಭೆ: ಬೆಂಬಲ ಬೆಲೆಯಡಿ ತೊಗರಿ ಖರೀದಿ ಮತ್ತೆ ಪ್ರಾರಂಭಿಸಲಾಗುವುದು. ಖರೀದಿ ಮಿತಿ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಸಹ ಮಾಡಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶುಕ್ರವಾರ ಬಿ.ಆರ್.ಪಾಟೀಲ್ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ 17.7 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. 3.15 ಲಕ್ಷ ರೈತರು ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಒಂದೆರಡು ದಿನಗಳಲ್ಲಿ ಖರೀದಿ ಆರಂಭಿಸಿ ಇನ್ನೂ 10 ಲಕ್ಷ ಕ್ವಿಂಟಾಲ್ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 60 ಲಕ್ಷ ಕ್ವಿಂಟಾಲ್ ತೊಗರಿ ಬೆಳೆಯಲಾಗಿದ್ದು 16.5 ಲಕ್ಷ ಕ್ವಿಂಟಾಲ್ ಖರೀದಿಗೆ ಮಾತ್ರ ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ. ಕೇಂದ್ರ ಸರ್ಕಾರ 5450 ರೂ. ದರ ನಿಗದಿ ಮಾಡಿದ್ದು ರಾಜ್ಯ ಸರ್ಕಾರ 550 ರೂ. ಸೇರಿಸಿ 6 ಸಾವಿರ ರೂ.ಗೆ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ತೊಗರಿ ಖರೀದಿ ಮಿತಿ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಸಚಿವರ ಭೇಟಿಗೆ ಸಮಯ ನಿಗದಿಯಾದ ತಕ್ಷಣ ನಾನು ಹಾಗೂ ಕೃಷಿ ಮಾರುಕಟ್ಟೆ ಸಚಿವರು ದೆಹಲಿಗೆ ಹೋಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ತಾಂತ್ರಿಕ ಸಮಸ್ಯೆಗಳಿಂದ ತೊಗರಿ ಖರೀದಿ ನಿಂತಿದೆ. ಆದರೆ, ಒಂದೆರಡು ದಿನಗಳಲ್ಲಿ ಮತ್ತೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಿ.ಆರ್.ಪಾಟೀಲ್, ತೊಗರಿ ಮಾರಾಟಕ್ಕೆ ಖರೀದಿ ಕೇಂದ್ರಗಳ ಬಳಿ ರೈತರು ರಾತ್ರಿ ಹಗಲು ಕಾಯುವಂತಾಗಿದೆ. ಅಲ್ಲೇ ತಿಂಡಿ-ಊಟ-ನಿದ್ದೆ ಮಾಡುತ್ತಿದ್ದಾರೆ. ಖರೀದಿ ನಿಲ್ಲಿಸಿರುವುದರಿಂದ ಬೇರೆ ದಾರಿ ಕಾಣದಂತಾಗಿದೆ. ರಾಜ್ಯ ಸರ್ಕಾರ ತಕ್ಷಣ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.