Advertisement

ಪರಿಸರ ಪ್ರೇಮಿ ಹುಡುಗಿಯ ನೆನಪಿಗೆ ಚಿಟ್ಟೆ ಪಾರ್ಕ್‌ !

08:15 AM Sep 04, 2017 | Harsha Rao |

ಮಂಗಳೂರು: ಎಸೆಸೆಲ್ಸಿ ಓದುತ್ತಲೇ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದ ಹುಡುಗಿ ದೀಕ್ಷಾ ಜೈನ್‌ ಇಹಲೋಕದಿಂದ ಮರೆಯಾಗಿದ್ದಾಳೆ. ಆಕೆಯ ನೆನಪಿನಲ್ಲಿ ಪರಿಸರ ಪ್ರೇಮಿಗಳು ಮಂಗಳೂರಿನಲ್ಲಿ ಸುಂದರ ಚಿಟ್ಟೆ ಪಾರ್ಕ್‌ ನಿರ್ಮಿಸಲು ಮುಂದಾಗಿದ್ದಾರೆ.

Advertisement

ಮಂಗಳೂರಿನ ಬಲ್ಲಾಳ್‌ಬಾಗ್‌ ಸಮೀಪದ ರಾಜೇಶ್‌ ಮತ್ತು ಶ್ವೇತಾ ದಂಪತಿ ಪುತ್ರಿಯಾದ ದೀಕ್ಷಾ ಜೈನ್‌ ತುಂಟ ಹುಡುಗಿಯಾಗಿದ್ದಳು. ಏಳನೇ ತರಗತಿಯಲ್ಲಿರುವಾಗ ನಗರದ ಖಾಸಗಿ ಶಾಲೆಯೊಂದು ಅವಳನ್ನು ಕೈಬಿಟ್ಟಿತ್ತು.

ಮಂಗಳೂರಿನ ರಥಬೀದಿಯಲ್ಲಿರುವ “ಸ್ವರೂಪ ಅಧ್ಯಯನ ಕೇಂದ್ರ’ದಲ್ಲಿ ದೀಕ್ಷಾ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಏನಾದರೂ ಸಾಧಿಸಬೇಕೆಂಬ ಹಂಬಲ ಅವಳಲ್ಲಿತ್ತು, ಪ್ರಾಯೋಗಿಕ ಕಲಿಕೆಯೂ ಆಕೆಗೆ ಸ್ಫೂರ್ತಿಯಾಗಿತ್ತು.

ಹಲವು ಹೋರಾಟ
“ಹಸಿರೇ ನನ್ನ ಉಸಿರು’ ಎಂಬಂತೆ ಬದುಕಿದ್ದವಳು ಕಳೆದ ವಾರ ಆರೋಗ್ಯ ಸಮಸ್ಯೆ ಉಂಟಾಗಿ ಇಹಲೋಕ ತ್ಯಜಿಸಿದ್ದಾಳೆ. ಆದರೆ, ಪರಿಸರ ರಕ್ಷಣೆಗಾಗಿ ನೇತ್ರಾವತಿ ನದಿ ಉಳಿಸಿ, ಪಶ್ಚಿಮ ಘಟ್ಟಗಳ ಸ್ವತ್ಛತಾ ಆಂದೋಲನ, ಹುಲಿ ಯೋಜನೆ, ಗಾಡ್ಗಿàಳ್‌ ವರದಿಯನ್ನು ಜಾರಿಗೆ ತರುವಂತೆ ಹೋರಾಟ, ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರ ವಿರೋಧಿ ಹೋರಾಟಗಳಲ್ಲಿ ಸದಾ ಚುರುಕಿನಿಂದ ತೊಡಗಿದ್ದ ದೀಕ್ಷಾ ನೆನಪನ್ನು ಚಿರಸ್ಥಾಯಿಯಾಗಿಸಲು ಪರಿಸರಪ್ರೇಮಿಗಳೀಗ ಮುಂದಾಗಿದ್ದಾರೆ.

ದೀಕ್ಷಾ ಕುಂಚ ಹಿಡಿದರೆ ಪಶ್ಚಿಮ ಘಟ್ಟದ ರಮಣೀಯ ದೃಶ್ಯಗಳು ಕಲಾಕೃತಿಯಾಗಿ ಒಡಮೂಡುತ್ತಿದ್ದವು. ಸಂಗೀತವನ್ನೂ ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನೂ ಮೋಡಿ ಮಾಡುವ ಪ್ರತಿಭೆಯಿತ್ತು. ನಾಟ್ಯದಲ್ಲೂ ಪ್ರವೀಣೆ. ಜ್ಞಾಪಕ ಶಕ್ತಿಯಂತೂ ಎಲ್ಲರನ್ನೂ ಮೀರಿಸುವಂತಿತ್ತು. ಇಷ್ಟೆಲ್ಲ ಪ್ರತಿಭೆಯಿದ್ದ ಆಕೆ ಇನ್ನು ನೆನಪು ಮಾತ್ರ ಎಂದರೆ ನಂಬಲಾಗುತ್ತಿಲ್ಲ ಎನ್ನುತ್ತಾರೆ ಸ್ವರೂಪ ಶಿಕ್ಷಣ ಸಂಸ್ಥೆ ನಿರ್ದೇಶಕ ಗೋಪಾಡ್ಕರ್‌.

Advertisement

ಬೆಂಗಳೂರಿನಲ್ಲಿ ನೆಲೆಸಿರುವ ತಂದೆಯನ್ನು ನೋಡಿ ಬರಲೆಂದು ಕಳೆದ ವಾರ ದೀಕ್ಷಾ ತೆರಳಿದ್ದಳು. ಬಸ್‌ನಲ್ಲಿ ವಾಪಸ್‌ ಬರುವಾಗ ವಾಂತಿ ಆರಂಭವಾಗಿದೆ. ಮನೆಗೆ ತಲುಪಿದ ಮೇಲೂ ಒಂದೆರಡು ಬಾರಿ ವಾಂತಿಯಾಗಿತ್ತು. 

ಮೂರು ದಿನ ಮನೆಯಲ್ಲಿಲ್ಲ ಎಂಬ ಕಾರಣಕ್ಕೆ ವಾಪಸ್‌ ಬಂದ ಕೂಡಲೇ ಕೆಲಸದಾಕೆಯನ್ನು ಕೇಳಿದ್ದು ಒಂದೇ ಪ್ರಶ್ನೆ: “ಮನೆಯಲ್ಲಿದ್ದ ಅಕ್ವೇರಿಯಂ, ಗಿಡಗಳಿಗೆ ನೀರು ಹಾಕಿದ್ದೀರಲ್ಲ’ ಎಂದು. ಹುಷಾರಿಲ್ಲದಿದ್ದರೂ ಹೂಗಿಡಗಳನ್ನು ನೋಡಿಕೊಂಡು ಬಂದಿದ್ದಳು. ಆಮೇಲೆ, ಸ್ವಲ್ಪ ತಲೆ ಸುತ್ತುತ್ತಿದೆ, ಸುಸ್ತಾಗಿದೆ ಎಂದು ಹೇಳಿ, ವಿಶ್ರಾಂತಿಗೆ ತೆರಳಿದ್ದಳು.

ಕೆಲ ಗಂಟೆಗಳ ಬಳಿಕ ಅಮ್ಮ ಈಕೆಯನ್ನು ಎಬ್ಬಿಸಲು ಹೋದಾಗ ಉಸಿರು ನಿಂತಿತ್ತು. ಈಕೆಯ ಸಾವಿಗೆ ಕಾರಣವೇನು ಎಂಬುದು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಪೋಷಕರು ಕಾಯುತ್ತಿದ್ದಾರೆ.

ದೀಕ್ಷಾ ನೆನಪಿಗೆ ಚಿಟ್ಟೆ ಪಾರ್ಕ್‌
ದೀಕ್ಷಾ ಜೈನ್‌ಗೆ ಚಿಟ್ಟೆ ಅಂದರೆ ಬಹಳ ಪ್ರೀತಿ. ಕಾಡಿನಲ್ಲಿ ಸುತ್ತಾಡುವಾಗ ಚಿಟ್ಟೆಗಳನ್ನು ಕಂಡರೆ, ವರ್ಣಿಸುತ್ತ ತಲ್ಲೀನಳಾಗುತ್ತಿದ್ದಳು. ಆಕೆಯ ಪರಿಸರ ಪ್ರೀತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಪ್ರೇಮಿಗಳೆಲ್ಲ ಸೇರಿ ಸ್ವರೂಪ ಅಧ್ಯಯನ ಕೇಂದ್ರದ ಜತೆಗೂಡಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ದೀಕ್ಷಾ ಹೆಸರಿನಲ್ಲಿ ಒಂದು ಸುಂದರ ಚಿಟ್ಟೆ ಪಾರ್ಕ್‌ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜಾಗ ಹುಡುಕುವ ಪ್ರಯತ್ನವೂ ನಡೆದಿದೆ.

ದೀಕ್ಷಾ ಜೈನ್‌ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ. ಐಪಿಎಸ್‌ ಅಧಿಕಾರಿಯಾಗಿ ಪರಿಸರದ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲಸ ನಿರ್ವಹಿಸಬೇಕು ಎಂಬುವುದು ಅವಳ ಕನಸಾಗಿತ್ತು.
– ಗೋಪಾಡ್ಕರ್‌, ಸ್ವರೂಪ ಅಧ್ಯಯನ ಕೇಂದ್ರ ನಿರ್ದೇಶಕ

ದೀಕ್ಷಾ ಸೃಜನಶೀಲ ಹುಡುಗಿಯಾಗಿ ದ್ದಳು. ಸಾಹಿತ್ಯ, ಸಂಗೀತ, ಚಿಟ್ಟೆಗಳ ಬಗ್ಗೆ ಅವಳಿಗೆ ಅಪಾರ ಆಸಕ್ತಿ. ಇದೀಗ ಆಕೆಯ ನೆನಪಿಗೆಂದು ನಗರದಲ್ಲಿ ಚಿಟ್ಟೆಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದೇವೆ.
– ದಿನೇಶ್‌ ಹೊಳ್ಳ, ಪರಿಸರ ಪ್ರೇಮಿ

ಕ್ಷಣ ಕ್ಷಣಕ್ಕೆ ನನ್ನ ಮಗಳು ನೆನಪಾ ಗುತ್ತಿದ್ದಾಳೆ. ಯಕ್ಷಗಾನದಲ್ಲಿನ ಅವಳ ನಟನೆ, ಪ್ರಕೃತಿ ಬಗೆಗಿನ ಪ್ರೇಮ, ಚಿತ್ರಕಲೆ, ಪ್ರಾಣಿಗಳ ಜೊತೆಗಿನ ಪ್ರೀತಿ ನನ್ನನ್ನು ಸದಾ ಕಾಡುತ್ತಿದೆ.
– ಶ್ವೇತಾ, ದೀಕ್ಷಾಳ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next