ಜೋಯಿಡಾ: ತಾಲೂಕು ಕೇಂದ್ರ ಜೋಯಿಡಾ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣಗೊಂಡಿದ್ದು, ಹಲವು ಬಗೆಯ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಪ್ರವಾಸಿಗರ ಮನಸೆಳೆಯುತ್ತಿದೆ.
ಜೋಯಿಡಾ ವಲಯ ಅರಣ್ಯ ಇಲಾಖೆ ವತಿಯಿಂದ ಕಳೆದ ಒಂದು ವರ್ಷದ ಹಿಂದೆ ಈ ಚಿಟ್ಟೆಪಾರ್ಕ್ ನಿರ್ಮಿಸಲಾಗಿದ್ದು, ಪತಂಗ(ಚಿಟ್ಟೆ) ಗಳಿಗಾಗಿಯೇ ವಿವಿಧ ಜಾತಿಯ ಹೂವಿನಗಿಡ ನೆಡಲಾಗಿದೆ. ಇಲ್ಲಿ ಈಗಾಗಲೆ 102 ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದ್ದು, ಇವುಗಳ ಜೀವನ ಕ್ರಮ ಆಧರಿಸಿ ಸಂತಾನೋತ್ಪತ್ತಿ, ಮರಿಗಳ ಬೆಳೆವಣಿಗೆಗೆ ಸಹಕಾರಿ ಆಗುವಂತೆ ಹೋಸ್ಟ್ ಪ್ಲಾಂಟ್‌ಗಳನ್ನು ಬೆಳೆಯಲಾಗಿದೆ.
ವಿವಿಧ ಜಾತಿಯ ಚಿಟ್ಟೆಗಳು: ಜೋಯಿಡಾ ಚಿಟ್ಟೆ ಪಾರ್ಕ್ ನಲ್ಲಿ ಎಂಗಲ್ಡ್ ಪಿರೋಟ್ ಗ್ರೇ ಕೌಂಟ್, ಪಿಕೋಕ್ ಫೆನ್ಸಿ, ಗ್ರೇ ಫೆನ್ಸಿ, ಪೇರಿಸ್ ಪಿಕೋಕ್, ಕಮಾಂಡರ್, ಡಾರ್ಕ್‌ಬ್ಲೂ ಟೈಗರ್, ಲೈಮ ಬಟರ್ ಫ್ಲಾಯ್, ಪ್ಲೇನ್ ಟೈಗರ್ ಮುಂತಾದ ಹಲವಾರಿ ಜಾತಿಯ ಚಿಟ್ಟೆಗಳು ಜೋಯಿಡಾ ಚಿಟ್ಟೆ ಪಾರ್ಕ್‌ನಲಿ ಕಂಡುಬಂದಿದೆ.
ಚಿಟ್ಟೆಗಳಿಗಾಗಿ ಹೋಸ್ಟ್ ಪ್ಲಾಂಟ್: ಚಿಟ್ಟೆಗಳ ಜೀವನ ಚಕ್ರವನ್ನಾಧರಿಸಿ ಅವುಗಳ ಸಂತಾನೋತ್ಪತ್ತಿ ಹಾಗೂ ಮರಿಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಈಶ್ವರಿ ಬಳ್ಳಿ, ಮಿಲ್ಕ್ ವೀಡ್, ಲಿಂಬೆ, ಜುಮ್ಮನಕಾಯಿ, ರಾಮಪಳ, ಪಾಲ್ಸ್ ಅಶೋಕಾ, ದಾಲಿcನಿ, ಗುಳಮಾವು, ಕಲಮ್ಮ, ಕದಂಬ(ಆಪತ್ತಿ) ಅತ್ತಿ, ಕಣಗಿಲೆ, ಮಾವು, ಔಡಲ ಗಿಡ, ಹೊಂಗೆ, ಕವಲು(ಕುಬೆ) ಮುಂತಾದ 80 ಜಾತಿಯ ಹೋಸ್ಟ್ ಪ್ಲಾಂಟ್‌ಗಳನ್ನು ನೆಡಲಾಗಿದೆ.
ನೆಕ್ಟರ್ ಪ್ಲಾಟ್: ಚಿಟ್ಟೆಗಳಿಗೆ ಆಹಾರಕ್ಕಾಗಿ ಅವುಗಳ ಅಚ್ಚುಮೆಚ್ಚಿನ ನೆಕ್ಟರ್ ಪ್ಲಾಂಟ್‌ಗಳಾದ ತೇರಿನ ಹೂ, ಇಗ್ಜೋರ್, ಪೆಂಟಾಸ್, ಕರಿ ಉತರಾಣಿ, ಮಿಲ್ಕ್ ಪೀಡ್, ಗೊಂಡೆ ಹೂ ಮುಂತಾದ 30 ಕ್ಕೂ ಹೆಚ್ಚಿನ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ವಲಯ ಅರಣ್ಯಾಧಿಕಾರಿ ಸಿ.ಆರ್. ನಾಯ್ಕ ಹಾಗೂ ಉಪವಲಯ ಅರಣ್ಯಾಧಿಕಾರಿ ಸಂತೋಷ ಗಾವಸ ಅವರ ಆಸಕ್ತಿ ಹಾಗೂ ಕಾಳಜಿಯಲ್ಲಿ ಚಿಟ್ಟೆಪಾರ್ಕ್ ತಾಲೂಕು ಕೇಂದ್ರದಲ್ಲಿ ಪ್ರವಾಸಿಗರ ವಿಶೇಷ ಆಕರ್ಷಣೀಯ ತಾಣವಾಗಿ ಬೆಳೆಯುತ್ತಿದೆ. ಚಿಟ್ಟೆ ಪಾರ್ಕ್ ಸುಂದರ ಹೂಗಿಡಗಳ ನಡುವೆ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಸೊಗಸಾಗಿ ಕಂಗೊಳಿಸುತ್ತಿದ್ದು, ತಿಮ್ಮಕ್ಕನ ಉದ್ಯಾನವನಕ್ಕೆ ವಿಶೇಷ ಮೆರಗು ನೀಡುತ್ತಿದೆ.
ಚಿಟ್ಟೆ ಪಾರ್ಕ್‌ನಲ್ಲಿ ಇನ್ನು ಅನೇಕ ಸಸಿಗಳನ್ನು ನೆಡುವ ಮೂಲಕ ಹೆಚ್ಚಿನ ಚಿಟ್ಟೆ ಆಕರ್ಷಣೆಗೆ ಪ್ರಯತ್ನಿಸುವ ಜೊತೆಗೆ ಹೋಮ್ ಸ್ಟೇಗಳಿಗೆ ಬರುವ ಪ್ರವಾಸಿಗರಿಗೆ ಚಿಟ್ಟೆ ಪಾರ್ಕ್ ಪರಿಚಯಿಸಲು ಪ್ರಯತ್ನಿಸಲಾಗುವುದು.
– ಸಿ.ಆರ್. ನಾಯ್ಕ. ವಲಯ ಅರಣ್ಯಾಧಿಕಾರಿಗಳು