ಆರಕಲಗೂಡು: ದೇವೇಗೌಡರ ಕುಟುಂಬದವರು ಶಾಸಕ ಎ.ಟಿ. ರಾಮಸ್ವಾಮಿ ಅವರ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿರುವುದನ್ನ ಗಮನಿಸಿದರೆ ಇವರ ನಡುವೆ ಅಂತಹ ಗಂಭೀರ ವಿಷಯ ಏನಿದೆ ಎಂಬುವುದನ್ನ ಸಾರ್ವ ಜನಿಕವಾಗಿ ಬಹಿರಂಗ ಪಡಿಸಲಿ ಎಂದು ಹಾಸನ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎಚ್.ಯೋಗಾರಮೇಶ ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‌ನಿಂದ ಒಂದು ಕಾಲು ಹೊರ ತೆಗೆದು ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ. ಇದರ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕು ಮಾರಸ್ವಾಮಿ, ದೇವೇಗೌಡರು ಮೌನವಾಗಿದ್ದಾರೆ. ಇದು ಹಲವು ಶಂಕೆಗೆ ಎಡೆಮಾಡಿದೆ. ಶಾಸಕ ಶಿವಲಿಂಗೇಗೌಡ ವಿರುದ್ಧ ಸಿಡುಕಿದ ಜೆಡಿಎಸ್ ವರಿಷ್ಠರು, ಶಾಸಕ ಎ.ಟಿ.ರಾಮಸ್ವಾಮಿ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಬಹುಶಃ ಶಾಸಕ ಎ.ಟಿ.ರಾಮಸ್ವಾಮಿ ಸದನ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ದೇವೇಗೌಡರ ಕುಟುಂಬದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು. ನಂತರ ನಡೆದ ಒಡಂಬಡಿಕೆಯಿಂದ ಪ್ರಕರಣ ಮುಚ್ಚಿಹಾಕಿದರು ಎಂಬುದು ಸಾರ್ವಜನಿಕ ವಲಯದಲ್ಲಿ ಗುಸುಗುಸು ಎದ್ದಿತ್ತು. ಹಾಗಾಗಿ ಎಟಿಆರ್ ವಿರುದ್ಧ ಮೃದು ಧೋರಣೆ ತಾಳಿದ್ದಾರಾ ಎಂಬ ಪ್ರಶ್ನೆ ಹುಟ್ಟಿದೆ. ಮಾನ್ಯ ಶಾಸಕರು ಈಗಲಾದರೂ ಸತ್ಯ ಸತ್ಯತೆ ಹೊರಹಾಕಲಿ ಎಂದು ಆಗ್ರಹಿಸಿದರು.
ಎಚ್‌ಡಿಕೆಗೆ ಟಾಂಗ್: ಹಾಸನ ಜಿಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಅವರು ಕೊಣನೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಪಕ್ಷದ ಆಂತರಿಕ ಗೊಂದಲದಿಂದ ಹೊರಬಂದ ಅವರು ಮತ್ತು ಅವರ ಸಹೋದರ ನಿವೃತ್ತ ವೃತ್ತ ನಿರೀಕ್ಷಕ ಶ್ರೀಧರ್‌ಗೌಡ ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿ ಕಾರ್ಯಕ್ರಮ ನಡೆಸಿದರೆ, ಆಗ ಅವರು ಭ್ರಷ್ಟಾಚಾರದ ಹಣ ತಂದು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಆರೋಪ ಎಚ್‌ಡಿಕೆ
ಮಾಡಿದ್ದು ಎಷ್ಟು ಸರಿ? ಇದೇ ವ್ಯಕ್ತಿಗಳು ಅವರ ಪಕ್ಷದಲ್ಲಿದ್ದಾಗ ಅವರು ಮಾತ್ರ ಭ್ರಷ್ಟರಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಹಿನ್ನಡೆ : ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಮಾಜಿ ಸಚಿವ ಎ.ಮಂಜು ಅವರು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ 33 ವರ್ಷಗಳಿಂದ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಭಿವೃದ್ಧಿಯಲ್ಲಿ ತಾರತಮ್ಯ: ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಅವರ ಪರವಿಲ್ಲ ಎಂಬ ಕಾರಣಕ್ಕೆ ಅನುಧಾನ ನೀಡದೆ ಅನ್ಯಾಯವೆಸಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಪಟ್ಟಣದ ವಾರ್ಡ ನಂ 3ರ ಸಾಲಗೇರಿ ರಸ್ತೆ, ರಾಮನಾಥಪುರ ಹೋಬಳಿಯ ಗರುಡನಹಳ್ಳಿ ರಸ್ತೆಗಳ ಅಭಿವೃದ್ಧಿಯಾಗಿಲ್ಲ. ಇಂತಹ ಪಕ್ಷಪಾತ ಮನೋಭಾವ ಕೈಬಿಡುವಂತೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅರಕಲಗೂಡು ತಾಲೂಕು ಮಂಡಲದ ಅಧ್ಯಕ್ಷ ವಿಶ್ವನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೇಶವೇಗೌಡ, ಮುಖಂಡರಾದ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.