“ಅವರಿಗೇನ್ರೀ, ಸ್ವಂತ ಬೇಕರಿ ಇದೆ. ತಿಂಗಳಿಗೆ ಇಪ್ಪತ್ ಸಾವ್ರ ಸಿಗುತ್ತೆ. ಆರಾಮ್ ಅಂದ್ರೆ ಆರಾಮ್ ಲೈಫ್ ಅವರದ್ದು…’ ಮತ್ತೂಬ್ಬರನ್ನು ಕುರಿತು ಹೀಗೆ ಕಾಮೆಂಟ್ ಮಾಡುವ ಬಹಳಷ್ಟು ಜನ ನಮ್ಮ ಮಧ್ಯೆ ಇದ್ದಾರೆ. ಒಂದು ಬೇಕರಿ ಬ್ಯುಸಿನೆಸ್‌ನಿಂದ ತಿಂಗಳಿಗೆ ಇಪ್ಪತ್ ಸಾವ್ರ ಸಿಗುತ್ತೆ ಅನ್ನುವುದಾದ್ರೆ ನಿಜವಾಗಿ ಅದು ಲಾಭದಾಯಕ ಉದ್ಯಮವೇ. ಆದರೆ, ಇಷ್ಟು ಹಣ ಸಂಪಾದಿಸಬೇಕು ಅಂದರೆ, ಆ ಬಿಸಿನೆಸ್‌ಗೆ ಇಳಿದವರು, 60 ಸಾವಿರ ಮೊತ್ತದ ಉತ್ಪನ್ನಗಳನ್ನು ಮಾರಿರಬೇಕು! ಅದರಲ್ಲಿ ಕರೆಂಟ್ ಬಿಲ್, ನೌಕರರ ಸಂಬಳ, ಅಗತ್ಯ ವಸ್ತುಗಳ ಖರೀದಿ, ಏಜೆಂಟ್‌ಗಳು ಇದ್ದರೆ ಅವರಿಗೆ ಕೊಡಬೇಕಾದ ಕಮೀಷನ್… ಹೀಗೆ ಹತ್ತು ಹಲವು ಕಟ್‌ಗಳು ಇದ್ದೇ ಇರುತ್ತವೆ. ಇದೆಲ್ಲಾ ಆದಮೇಲೆ ಉಳಿಯುತ್ತದೆ ನೋಡಿ, ಅದು ಲಾಭದ ರೂಪದಲ್ಲಿ, ಸಂಪಾದನೆಯ ರೂಪದಲ್ಲಿ ಕೈ ಸೇರುವ ಹಣ.
ಬ್ಯುಸಿನೆಸ್‌ನಲ್ಲಿ ಲಾಭ ಮಾಡಬೇಕು ಅಂದರೆ, ಮಾರ್ಕೆಟಿಂಗ್ ಮಾಡುವ ಕಲೆ ಗೊತ್ತಿರಬೇಕು. ಈಗಾಗಲೇ ನಾಲ್ಕು ಬೇಕರಿ ಇರುವ ರಸ್ತೆಯಲ್ಲೇ ನೀವು ಹೊಸದೊಂದು ಬೇಕರಿ ಆರಂಭಿಸಲು ಹೊರಟರೆ, ಆ ನಾಲ್ಕು ಬೇಕರಿಯಲ್ಲಿ ಸಿಗುತ್ತದಲ್ಲ, ಅದಕ್ಕಿಂತ ಒಳ್ಳೆಯ ಕ್ವಾಲಿಟಿಯ ತಿನಿಸುಗಳನ್ನು, ಉಳಿದವರಿಗಿಂತ ಒಂದು ರೂಪಾಯಿ ಕಡಿಮೆ ಬೆಲೆಗೆ ಕೊಡಬೇಕು. ಹೀಗೆ ಮಾಡಿದರೆ, ಕ್ವಾಲಿಟಿ ಕೂಡ ಚೆನ್ನಾಗಿದೆ, ಬೆಲೆ ಕೂಡ ಕಡಿಮೆ ಎಂಬ ವಿಷಯ ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ ಮಾರ್ಕೆಟ್ ಸಿಗುತ್ತದೆ. ಹೀಗೆ ಮಾಡದೆ, ಬೇರೆ ಕಡೆಗಳಲ್ಲಿ ಇರುವಷ್ಟೇ ಬೆಲೆ ಇಟ್ಟರೆ, ಎಲ್ಲಾ ಕಡೆ
ಒಂದೇ ರೇಟ್. ಎಲ್ಲೋ ಒಂದು ಕಡೆ ತಗೊಂಡ ರಾಯ್ತು ಎಂಬ ನಿರ್ಧಾರಕ್ಕೆ ಜನ ಬಂದುಬಿಡುತ್ತಾರೆ. ಹೀಗೆ ಆದಾಗ, ಲಾಭದ ಮಾತು ಹಾಗಿರಲಿ, ಬಂಡವಾಳ ವಾಪಸ್ ಬರುವುದೂ ಕಷ್ಟ
ಆಗುತ್ತದೆ. ಏನೆಲ್ಲ ಪ್ಲಾನ್ ಮಾಡಿಕೊಂಡು ಬ್ಯುಸಿನೆಸ್ ಶುರು ಮಾಡಿದರೂ ಕೆಲವೊಮ್ಮೆ ನಿರೀಕ್ಷಿತ ಮಟ್ಟದ ಲಾಭ ಸಿಗದೇ ಹೋಗಬಹುದು. ಅಷ್ಟಕ್ಕೇ ಗಾಬರಿಯಾಗಿ, ಹೋ, ಇಲ್ಲಿ ನಮಗೆ ಏನೂ ಗಿಟ್ಟೋದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡಬಾರದು.
ನಮ್ಮ ಲೆಕ್ಕಾಚಾರ ಎಲ್ಲಿ ತಪ್ಪಾಗಿದೆ ಅಂತ ಸಾವಧಾನವಾಗಿ ಯೋಚಿಸಬೇಕು. ಸೋಲುಗಳಿಗೆ ಹೆದರುವವರು ಬ್ಯುಸಿನೆಸ್ ಗೆ ಕೈ ಹಾಕಲೇಬಾರದು. ಇಂಗ್ಲಿಷ್ ನಲ್ಲಿ ಒಂದು ಮಾತಿದೆ: : Winners don’t quit, quitters don’t win ಅಂತ. ಗೆಲ್ಲುವವನಿಗೂ ಸೋಲುವವನಿಗೂ ಒಂದೇ ವ್ಯತ್ಯಾಸ. ಸೋಲುವವನು ನದಿಯಲ್ಲಿ 4 ಸಲ ಮುಳುಗಿ 3 ಸಲ ಏಳ್ತಾನೆ. ಗೆಲ್ಲುವವನು, ನಾಲ್ಕು ಬಾರಿ ಮುಳುಗಿ, ನಾಲ್ಕು ಬಾರಿಯೂ ಏಳಬೇಕು!
ಸೋಮವಾರದಿಂದ ಶನಿವಾರದ ವರೆಗೆ ದಿನಕ್ಕೆ ಸಾವಿರ ರೂಪಾಯಿ ಹಾಗೂ ಭಾನುವಾರ ಕೇವಲ 400 ರೂಪಾಯಿ ಸಂಪಾದನೆ ಆಗ್ತಾ ಇರ್ತದೆ ಅಂದುಕೊಳ್ಳಿ. ಅಂಥ ಸಂದರ್ಭದಲ್ಲಿ ಭಾನುವಾರ ಅಂಗಡಿಗೆ ರಜಾ ಮಾಡಬೇಕು. ಇಲ್ಲವಾದರೆ, ಮೊನ್ನೆ ಅಷ್ಟು ಸಂಪಾದನೆ ಆಗಿತ್ತು, ನಿನ್ನೆ ಇಷ್ಟು ಸಂಪಾದನೆ ಆಗಿತ್ತು, ಇವತ್ತು ತುಂಬಾ ಲಾಸ್ ಆಗಿಹೋಯ್ತು ಎಂಬ
ಯೋಚನೆ ಶುರುವಾಗಿ, ಆ ಯೋಚನೆಯ ಕಾರಣಕ್ಕೇ ಬಿ.ಪಿ. ಜೊತೆಯಾಗಿ… ಆ ನಂತರದ ಕಥೆಯನ್ನು ಹೇಳುವ ಅಗತ್ಯವಿಲ್ಲ. ತೆಪ್ಪಗೆ ಭಾನುವಾರ ಅಂಗಡಿ ಮುಚ್ಚಿ ಆರಾಮಾಗಿ ಮನೆಯಲ್ಲಿದ್ದರೆ, ಅವತ್ತು ಚಿಂತೆಯೇ ಇಲ್ಲವಾಗಿ, ಒಳ್ಳೆಯ ನಿದ್ರೆಬರುತ್ತದೆ. ಅದೇ ಕಾರಣಕ್ಕೆ ಆರೋಗ್ಯವೂ ಚೆನ್ನಾಗಿರುತ್ತದೆ. ಅದಕ್ಕೆ ಬೆಲೆಕಟ್ಟಲು ಸಾಧ್ಯವಾ?