ಧಾರವಾಡ: ಕೃಷಿ ಮೇಳದಲ್ಲಿ ಕೃಷಿ ಉಪಕರಣ, ಖಾಸಗಿ ಬೀಜ ಮಾರಾಟ, ಸಾವಯವ ಉತ್ಪನ್ನಗಳ ಮಾರಾಟ, ಆಹಾರ ಪದಾರ್ಥಗಳ ಮಾರಾಟ ಸೇರಿದಂತೆ ಒಟ್ಟಾರೆ ವಹಿವಾಟು ಕೆಲವರಿಗೆ ಸಿಹಿಯಾದರೆ ಇನ್ನು ಕೆಲವರಿಗೆ ಕಹಿಯಾಗಿದೆ. ನಾಲ್ಕೂ ದಿನ ವ್ಯಾಪಾರ ವಹಿವಾಟು ಭರ್ಜರಿ ಆಗಿದ್ದು, 3 ಹಾಗೂ 4ನೇ ದಿನ ಸುರಿದ ಮಳೆ ಕೆಲ ವ್ಯಾಪಾರಿಗಳಿಗೆ ಹೊಡೆತ ಕೊಟ್ಟಿತು.
ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಯವ ಕೃಷಿ ಉತ್ಪನ್ನ ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಕೆಲ ಮಾರಾಟ ಮಳಿಗೆಗಳಲ್ಲಿ ಈ ವರ್ಷವೂ ಸಾಧಾರಣ ವ್ಯಾಪಾರವಾಗಿದ್ದು ಕಂಡುಬಂತು. ಕೃಷಿಗೆ ಸಂಬಂಧಿಸಿದ ಪ್ಲಾಸ್ಟಿಕ್ ಉಪಕರಣಗಳು ಮತ್ತು ಗೃಹೋಪಯೋಗಿ ಪ್ಲಾಸ್ಟಿಕ್ ಉಪಕರಣಗಳ ವ್ಯಾಪಾರ ಜೋರಾಗಿತ್ತು.
ಕೊಡ, ಪ್ಲಾಸ್ಟಿಕ್ ಬುಟ್ಟಿ,ಪ್ಲಾಸ್ಟಿಕ್ ಹಗ್ಗ, ಕೊಡಲಿ, ಕುಡಗೋಲು, ಹಣ್ಣು ಕತ್ತರಿಸುವ, ಎಳೆನೀರು ತೆಗೆಯಲು ಬಳಕೆಯಾಗುವ ಉಪಕರಣಗಳ ಮಾರಾಟ ಚೆನ್ನಾಗಿತ್ತು. ಇನ್ನು ಕೃಷಿ ಉಪಕರಣಗಳ ಸಾಲಿನ ಮಳಿಗೆಗಳಲ್ಲೂ ಉತ್ತಮ ವ್ಯಾಪಾರವಾಗಿದ್ದು, ನಗರ ಪ್ರದೇಶದ ಮನೆಯ ಕೈತೋಟಗಳಿಗೆ ಬಳಕೆಯಾಗುವ ವಸ್ತುಗಳು ಭರ್ಜರಿಯಾಗಿ ಬಿಕರಿಯಾಗಿವೆ.
ದೊಡ್ಡವರಿಗೆ ಲಾಭ: 30-40 ಸಾವಿರ ರೂ. ನೀಡಿ ಮಳಿಗೆ ಪಡೆದಿದ್ದ ದೊಡ್ಡ ದೊಡ್ಡ ಕಂಪನಿ ವ್ಯಾಪಾರಸ್ಥರಿಗೆ ಒಳ್ಳೆಯ ಸ್ಪಂದನೆ ಲಭಿಸಿದೆ. ಟ್ರಾಕ್ಟರ್, ಜೆಸಿಬಿ, ಬೆಳೆಕೂಯ್ಲು ಯಂತ್ರಗಳು, ಬಿತ್ತುವ ಕೂರಿಗೆ, ಹದ ಮಾಡುವ ಕೃಷಿ ಉಪಕರಣಗಳ ಮಾರಾಟ ಈ ವರ್ಷ ಚೇತರಿಕೆ ಕಂಡಿದೆ.
ಮಧ್ಯಮ ವರ್ಗದ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಮಾರಾಟ ಮಾಡಲು ವ್ಯಾಪಾರಸ್ಥರು ತಿಣುಕಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವರುಣನ ಕಾಟದಿಂದ ಸಣ್ಣ ವ್ಯಾಪಾರಸ್ಥರಿಗೆ ಹೊಡೆತ ಬಿದ್ದಿದ್ದು ಸತ್ಯ. ಉತ್ತಮ ವ್ಯಾಪಾರ ನಿರೀಕ್ಷೆ ಇತ್ತು.
ಮಳೆ ಸುರಿದ ಪರಿಣಾಮ ವ್ಯಾಪಾರಕ್ಕೆ ಸಾಕಷ್ಟು ಹೊಡೆತ ಬಿತ್ತು ಎಂದು ಊದುಬತ್ತಿ ವ್ಯಾಪಾರಿ ಕೃಷ್ಣಪ್ಪ “ಉದಯವಾಣಿ’ಗೆ ತಿಳಿಸಿದರು. ವೇದಿಕೆ ಪಕ್ಕದಲ್ಲಿದ್ದ ಆಹಾರ ಮಳಿಗೆಗಳಲ್ಲಿ ಉತ್ತಮ ವ್ಯಾಪಾರವಿತ್ತು. ಕೃಷಿ ಮೇಳದ ಆಹಾರ ಸಮಿತಿ ಮಳಿಗೆಗಳಲ್ಲೂ ತಿಂಡಿ, ತಿನಿಸುಗಳ ವ್ಯಾಪಾರ ಜೋರಾಗಿತ್ತು. ಇದಕ್ಕೂ ಮಳೆಯ ಹೊಡೆತ ತಪ್ಪಲಿಲ್ಲ.