Advertisement

ಪೌರಕಾರ್ಮಿಕರಿಗೆ ಬಸ್‌ ಸೌಲಭ್ಯ; ಸಾರಿಗೆ ಗೋಳಿಗೆ ಮುಕ್ತಿ

10:30 AM Apr 30, 2020 | Suhan S |

ಹುಬ್ಬಳ್ಳಿ: ಹೆಮ್ಮಾರಿ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಪೌರಕಾರ್ಮಿಕರು ಸಾರಿಗೆ ಸೌಲಭ್ಯವಿಲ್ಲದೆ ನಿತ್ಯವೂ ಆರೇಳು ಕಿಮೀ ನಡೆದುಕೊಂಡು ಸ್ವಚ್ಛತಾ ಕಾರ್ಯ ನಿರ್ವಹಿಸಬೇಕಿತ್ತು. ಇಲ್ಲವೆ ಕಸ ತುಂಬಿದ ಟ್ರ್ಯಾಕ್ಟರ್‌, ಆಟೋ ಟಿಪ್ಪರ್‌ ಅನಿವಾರ್ಯವಾಗಿತ್ತು. ಈ ಅವ್ಯವಸ್ಥೆಗೆ ಬ್ರೇಕ್‌ ಹಾಕುವ ಹಿನ್ನೆಲೆಯಲ್ಲಿ ಪಾಲಿಕೆಯೇ ಬಸ್‌ ವ್ಯವಸ್ಥೆ ಕಲ್ಪಿಸಿದೆ.

Advertisement

ಪೌರಕಾರ್ಮಿಕರು ಬೆಳಗ್ಗೆ 6 ಗಂಟೆಗೆ ಕರ್ತವ್ಯ ನಿರ್ವಹಿಸುವ ಪ್ರದೇಶದಲ್ಲಿ ಇರಬೇಕು. ತಾವು ವಾಸವಿರುವ ಪ್ರದೇಶದಲ್ಲೇ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಲಾಕ್‌ಡೌನ್‌ನಿಂದ ಸಮಸ್ಯೆಯಾಗಿರಲಿಲ್ಲ. ಆದರೆ ದೂರ ದೂರಕ್ಕೆ ಹೋಗುವವರಿಗೆ ಸಾರ್ವಜನಿಕ ಸಾರಿಗೆಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಯುಂಟಾಗಿತ್ತು. ಇಂದಿರಾ ನಗರ, ಕರ್ಕಿ ಬಸವೇಶ್ವರ, ಗಂಗಾಧರ ನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ವಾಸವಿರುವ ಪೌರಕಾರ್ಮಿಕರಿಗೆ ನಿತ್ಯ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದು ಸಾಧ್ಯವಾಗುತ್ತಿರಲಿಲ್ಲ.

ಸಾಮಾನ್ಯ ದಿನಗಳಲ್ಲಿ ಒಂದಿಷ್ಟು ಪೌರಕಾರ್ಮಿಕರು ಸೇರಿ ಆಟೋ ರಿಕ್ಷಾ ಸೇರಿದಂತೆ ಇನ್ನಿತರೆ ಸಾರಿಗೆ ವ್ಯವಸ್ಥೆ ಬಳಸಿ ಕೆಲಸಕ್ಕೆ ಆಗಮಿಸುತ್ತಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ನಿರ್ಬಂಧ ಹೇರಿದ್ದರಿಂದ ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕಾದರೆ 5 ಗಂಟೆಗೆ ಮನೆ ಬಿಡಬೇಕಾದ ಅನಿವಾರ್ಯತೆ ಇತ್ತು. ಕಾಲ್ನಡಿಗೆಯಲ್ಲೇ ನವನಗರ, ಬೆಂಗೇರಿ, ಹೊಸೂರು ಸೇರಿದಂತೆ ವಿವಿಧೆಡೆ ತೆರಳಬೇಕಾಗಿತ್ತು. ಕೆಲವೊಮ್ಮೆ ಆಯಾ ಭಾಗದಲ್ಲಿ ಬರುವ ಆಟೋ ಟಿಪ್ಪರ್‌ಗಳ ನೆರವು ಪಡೆದುಕೊಳ್ಳುತ್ತಿದ್ದರು. ಈ ಅವ್ಯವಸ್ಥೆಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಲಾಕ್‌ ಡೌನ್‌ ಮುಗಿಯುವವರೆಗೂ ಆ ಭಾಗದ ಪೌರಕಾರ್ಮಿಕರಿಗೆ ಬಸ್‌ ಸೌಲಭ್ಯ ಕಲ್ಪಿಸಿದೆ.

ಕಸದ ಟ್ರ್ಯಾಕ್ಟರ್‌ ಗತಿಯಾಗಿತ್ತು! :  ಬೆಳಗ್ಗೆ ಕಾಲ್ನಡಿಗೆಯಾದರೆ ಕೆಲಸ ಮುಗಿದ ನಂತರ ತಮ್ಮ ಮನೆಗಳಿಗೆ ತೆರಳಬೇಕಾದರೆ ಅಂಚಟಗೇರಿ ಕಸಮಡ್ಡಿಗೆ ತೆರಳುವ ಕಸ ತುಂಬಿದ ಟ್ರಾಕ್ಟರ್‌ ಮೇಲೆ ಕುಳಿತು ಹೋಗಬೇಕಾಗಿತ್ತು. ಇಲ್ಲವೇ ಪುನಃ ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲೇ ಮನೆಗಳಿಗೆ ತೆರಳಬೇಕಾಗಿತ್ತು. ನಾಲ್ಕೈದು ಗಂಟೆ ಕೆಲಸ ಮಾಡಿ ನಂತರವೂ ಕಸದ ತುಂಬಿದ ವಾಹನಗಳಲ್ಲಿ ಸಂಚರಿಸಬೇಕಾಗಿತ್ತು. ಕೆಲವೆಡೆ ಆಟೋ ರಿಕ್ಷಾಗಳ ಮೂಲಕ ಬರುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಆಟೋ ರಿಕ್ಷಾ ಚಾಲಕರು ಕೂಡ ಹೊರಬರಲು ಹಿಂದೇಟು ಹಾಕುತ್ತಿದ್ದರು.

ಸುಮಾರು 320 ಸ್ವಚ್ಛತಾ ಯೋಧರ ಸಮಸ್ಯೆ ನಿವಾರಣೆ :  ಕೋವಿಡ್ 19 ವಿರುದ್ಧ ಹೋರಾಟ ಮಾಡುತ್ತಿರುವ ಪೌರಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆ ಕುರಿತು ವಿವಿಧ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಗಮನಕ್ಕೆ ತರುತ್ತಿದ್ದಂತೆ ಅವರ ಶಾಲೆ ಬಸ್‌ಗಳನ್ನು ಬಳಕೆಗೆ ನೀಡಿದ್ದಾರೆ. ರೋಟರಿ ಶಿಕ್ಷಣ ಸಂಸ್ಥೆ-5, ಗುರುಕುಲ ಶಿಕ್ಷಣ ಸಂಸ್ಥೆ-5, ಜೆಎಸ್ಸೆಸ್‌-3 ಹಾಗೂ ಜೆಕೆ ಶಿಕ್ಷಣ ಸಂಸ್ಥೆ-2 ಬಸ್‌ ನೀಡಿದೆ. ವಾಹನಗಳಿಗೆ ಬೇಕಾದ ಇಂಧನವನ್ನು ಪಾಲಿಕೆ ಭರಿಸುತ್ತಿದೆ. ಇದರಿಂದ ಸುಮಾರು 320 ಪೌರಕಾರ್ಮಿಕರ ಸಾರಿಗೆ ಸಮಸ್ಯೆ ನೀಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ನಿಗದಿತ ಕಾರ್ಮಿಕರನ್ನು ನಿರ್ದಿಷ್ಟ ಮೂರ್‍ನಾಲ್ಕು ಸ್ಥಳದಿಂದ ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳಿಗೆ ತಲುಪಿಸುವ, ನಂತರ ಮನೆಗಳಿಗೆ ಬಿಡುವ ಕೆಲಸ ಮಾಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಿತ್ಯವೂ ಇಡೀ ಬಸ್‌ ಅನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಬಸ್‌ ಚಾಲಕರಿಗೂ ಅಗತ್ಯ ಸುರಕ್ಷತಾ ಸಾಮಗ್ರಿ ಹಾಗೂ ಪಾಸ್‌ ನೀಡಲಾಗಿದೆ.

Advertisement

ಸಾರಿಗೆ ವ್ಯವಸ್ಥೆ ಇರದ ಕಾರಣ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪೌರಕಾರ್ಮಿಕರಿಗೆ ಬಸ್‌ ಸೌಲಭ್ಯ ಕಲ್ಪಿಸುವ ನಿರ್ಧಾರಕ್ಕೆ ಬರಲಾಗಿತ್ತು. ವಿವಿಧ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯವರು ಮನವಿಗೆ ಸ್ಪಂದಿಸಿ ಶಾಲಾ ಬಸ್‌ಗಳನ್ನು ನೀಡಿದ್ದಾರೆ. ಪೌರಕಾರ್ಮಿಕರು ವಾಸವಿರುವ ಪ್ರದೇಶಗಳಿಗೆ ತೆರಳಿ ಕೆಲಸ ಮುಗಿದ ನಂತರ ಅವರ ಪ್ರದೇಶಗಳಿಗೆ ತಲುಪಿಸಲಾಗುತ್ತಿದೆ. ಸಾಮಾಜಿಕ ಅಂತರ, ನಿತ್ಯವೂ ವಾಹನಗಳನ್ನು ಸ್ಯಾನಿಟೈಸ್‌ ಮಾಡಲಾಗುವುದು. – ಡಾ| ಸುರೇಶ ಇಟ್ನಾಳ, ಆಯುಕ್ತ, ಮಹಾನಗರ ಪಾಲಿಕೆ

ಲಾಕ್‌ಡೌನ್‌ ಆರಂಭವಾದ ದಿನದಿಂದ ಕೆಲಸಕ್ಕೆ ಹೋಗುವುದು ದೊಡ್ಡ ಸಮಸ್ಯೆಯಾಗಿತ್ತು. ಮನೆಯಲ್ಲಿ ಮಕ್ಕಳು ಬೈಕ್‌ನಲ್ಲಿ ಬಿಟ್ಟು ಬರುತ್ತಿದ್ದರು. ಆದರೆ ಅಲ್ಲಲ್ಲಿ ಪೊಲೀಸರು ಇರುವ ಕಾರಣಕ್ಕೆ ಮಕ್ಕಳು ಕೂಡ ಹೊರಗೆ ಬರಲು ಹೆದರುತ್ತಿದ್ದು, ಅನಿವಾರ್ಯವಾಗಿ ನಡೆದುಕೊಂಡು ಹೋಗಿದ್ದೆವು. ಇದೀಗ ಪಾಲಿಕೆಯಿಂದ ವಾಹನದ ವ್ಯವಸ್ಥೆ ಮಾಡಿರುವುದು ಅನುಕೂಲವಾಗಿದೆ. – ಚಂದ್ರಮ್ಮ, ಮಹಿಳಾ ಪೌರಕಾರ್ಮಿಕ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next