ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಕನಿಷ್ಠ ದಾಖಲೆ ಪ್ರಮಾಣದ ಆದಾಯ ಗಳಿಕೆಗೆ ಸಾಕ್ಷಿಯಾಗಿದೆ. ಪ್ರತಿ ವರ್ಷ ಗೌರಿ-ಗಣೇಶ ಹಬ್ಬದಲ್ಲಿ ನಿಗಮಕ್ಕೆ ಬಂಪರ್ ಆದಾಯ ಹರಿದುಬರುತ್ತಿತ್ತು. ಒಂದೇ ದಿನದಲ್ಲಿ ಕೆಲವು ಸಲ 10-12 ಕೋಟಿ ರೂ. ಹರಿದುಬಂದ ಉದಾಹರಣೆಗಳೂ ಇವೆ. ಆದರೆ, ಈ ಬಾರಿ ಕೇವಲ 3ರಿಂದ 3.5 ಕೋಟಿ ಆದಾಯ ಸಂಗ್ರಹವಾಗಿದೆ. ಇದು ನಿಗಮದ ಇತಿಹಾಸದಲ್ಲೇ ಹಬ್ಬದ ಸೀಜನ್‌ನಲ್ಲಿ ಅತ್ಯಂತ ಕಳಪೆ ಸಾಧನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ರೈಲು ಸೇವೆ ಇರುತ್ತಿತ್ತು. ಕೆಲವೊಮ್ಮೆ ವಾರದ ಮಧ್ಯೆ ಹಬ್ಬ ಬಂದರೂ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಯಾವುದೇ ಕೊರತೆ ಇರುತ್ತಿರಲಿಲ್ಲ. ಆದರೆ, ಈ ಬಾರಿ ರೈಲು ಸೇವೆ ಲಭ್ಯವಿಲ್ಲ. ವಾರಾಂತ್ಯದಲ್ಲಿ ಗೌರಿ-ಗಣೇಶ ಹಬ್ಬ ಇದೆ. ಬೆನ್ನಲ್ಲೇ ಓಣಂ ಕೂಡ ಬಂದಿದೆ. ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಕೂಡ ಖಾಲಿ ಆಗಿದೆ. ಆದಾಗ್ಯೂ ಕೆಎಸ್ ಆರ್‌ಟಿಸಿ ಬಸ್‌ಗಳು ಅದರಲ್ಲೂ ವಿಶೇಷವಾಗಿ ಬಹುತೇಕ ಪ್ರಿಮಿಯರ್ ಸೇವೆಗಳು ಡಿಪೋದಿಂದ ಹೊರಗೆ ಕೂಡ ಬಂದಿಲ್ಲ. ಇದಕ್ಕೆ ಕಾರಣ ಕೋವಿಡ್ ಸೋಂಕಿನ ಹಾವಳಿ.
ಕೆಂಪು ಬಸ್‌ಗಳಿಗೆ ಭಾರಿ ಬೇಡಿಕೆ: “ಗಣೇಶ ಹಬ್ಬವೂ ಸೇರಿದಂತೆ ಒಟ್ಟಾರೆ ಶುಕ್ರವಾರ 1,300 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಪೈಕಿ 1,100-1,200 ಕರ್ನಾಟಕ ಸಾರಿಗೆ (ಕೆಂಪು ಬಸ್) ಸೇವೆಗಳಿವೆ. ಉಳಿದ 100-200 ಬಸ್‌ಗಳು ಮಾತ್ರ ಪ್ರೀಮಿಯರ್ ಬಸ್‌ಗಳು ರಸ್ತೆಗಿಳಿಯುತ್ತಿವೆ. ಪ್ರಯಾಣ ದರ ಕಡಿಮೆ ಹಾಗೂ ಬಸ್ ಸಾಮರ್ಥ್ಯದ ಶೇ. 50 ಆಸನಗಳನ್ನು ಮಾತ್ರ ಭರ್ತಿ ಮಾಡಲು ಅವಕಾಶ ಇರುವುದರಿಂದ ಆದಾಯ ಮತ್ತಷ್ಟು ಕುಸಿತ ಕಂಡಿದೆ’ ಎಂದು ಕೆಎಸ್‌ಆರ್‌ಟಿಸಿ ಬುಕಿಂಗ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಜಾಗತಿಕ ಮಹಾಮಾರಿಯ ಆತಂಕ ಜನರಲ್ಲಿ ಈಗಲೂ ಮನೆ ಮಾಡಿದೆ. ಹಾಗಾಗಿ ಸಾಮಾಜಿಕ ಅಂತರ, ಜ್ವರ ತಪಾಸಣೆ ಸೇರಿದಂತೆ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೆಎಸ್‌ಆರ್‌ಟಿಸಿ ಕೈಗೊಂಡಿದ್ದರೂ ಬಸ್ ಗಳತ್ತ ಜನ ಮುಖಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕರು ಸ್ವಂತ ವಾಹನಗಳು ಅಥವಾ ಖಾಸಗಿ ವಾಹನಗಳನ್ನು ಬುಕಿಂಗ್ ಮಾಡಿಕೊಂಡು ಊರುಗಳಿಗೆ ತೆರಳಿದ್ದಾರೆ. ಮುಂಬರುವ ನಾಡಹಬ್ಬ ದಸರಾ, ದೀಪಾವಳಿಗೂ ಇದೇ ನಿರುತ್ಸಾಹ ಕಂಡುಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಹಬ್ಬದ ಸೀಜನ್, ನಿಗಮದ ಪಾಲಿಗೂ ಮಂಕಾಗಿ ಇರಲಿದೆ. ಖಾಸಗಿ ಬಸ್‌ಗಳಲ್ಲೂ ಪ್ರಯಾಣಿಕರ ಬರ: “ಗೌರಿ-ಗಣೇಶೋತ್ಸವ ಸೇರಿದಂತೆ ಹಬ್ಬದ ಸೀಜನ್‌ನಲ್ಲಿ ದಾಖಲೆ ಆದಾಯ ಬಂದಿದ್ದರಿಂದ ಸಿಬ್ಬಂದಿಗೆ ಎಷ್ಟೋ ಸಲ ಸಿಹಿ ಮತ್ತು ಬೋನಸ್ ನೀಡಿದ್ದೂ ಇದೆ. ಆದರೆ, ಈ ವರ್ಷ ಪರಿಸ್ಥಿತಿ ತದ್ವಿರುದ್ಧವಾಗಿದೆ. ಶನಿವಾರ ಗಣೇಶಚತುರ್ಥಿ. ಭಾನುವಾರ ವಾರಾಂತ್ಯದ ರಜೆ. ಆಗಸ್ಟ್ 22ರ ನಂತರದಿಂದ ಓಣಂ ಕೂಡ ಶುರುವಾಗಲಿದೆ.
ಸಾಲು ರಜೆ ಇದ್ದಾಗ್ಯೂ ಕೋವಿಡ್ ಹಾವಳಿಯಿಂದ ಜನ ಬಸ್‌ಗಳಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ’ ಎಂದು ನಿಗಮದ ಮತ್ತೂಬ್ಬ ಅಧಿಕಾರಿ ತಿಳಿಸಿದರು. ಖಾಸಗಿ ಟ್ರಾವೆಲ್ಸ್ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ಬೇಡಿಕೆ ಇರುವ ಮಾರ್ಗ ಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿತ್ತು. ಆದರೆ, ಪ್ರಯಾಣಿಕರು ಸ್ವಂತ ವಾಹನಗಳ ಮೊರೆಹೋಗಿದ್ದರಿಂದ ಬೇಡಿಕೆಯೇ ಇಲ್ಲವಾಗಿದೆ.
ಕನಿಷ್ಠ ಆದಾಯ ಹರಿವು : “ಹಿಂದಿನ ಉಳಿದೆಲ್ಲ ಹಬ್ಬದ ಸೀಜನ್‌ಗಳಿಗೆ ಹೋಲಿಸಿದರೆ, ನಿಗಮಕ್ಕೆ ಈ ಬಾರಿ ಗಣೇಶೋತ್ಸವಕ್ಕೆ ಅತ್ಯಂತ ಕನಿಷ್ಠ ಆದಾಯ ಹರಿದುಬಂದಿದೆ. ಸಾಮಾನ್ಯವಾಗಿ ನಿತ್ಯ ಸರಾಸರಿ ಕೆಎಸ್‌ಆರ್‌ಟಿಸಿಗೆ 22 ಸಾವಿರ ಟಿಕೆಟ್ ಬುಕಿಂಗ್ ಆಗುತ್ತಿತ್ತು. ಇದರಿಂದ 8.5 ಕೋಟಿ ರೂ. ಆದಾಯ ಬರುತ್ತದೆ. ಕನಿಷ್ಠವೆಂದರೂ (ಸಾಮಾನ್ಯವಾಗಿ ಜುಲೈ-ಆಗಸ್ಟ್‌ನಲ್ಲಿ) 16-17 ಸಾವಿರ ಟಿಕೆಟ್ ಬುಕಿಂಗ್ ಇರುತ್ತಿತ್ತು. ಗಣೇಶೋತ್ಸವದ ವೇಳೆ ಇದು ಬಹುತೇಕ ದುಪ್ಪಟ್ಟು ಅಂದರೆ 35 ಸಾವಿರ ಆಸನಗಳು ಮುಂಗಡ ಕಾಯ್ದಿರಿಸಿರುತ್ತಿದ್ದವು. ಆದರೆ, ಈ ಸಲ ಶುಕ್ರವಾರ ಸಂಜೆವರೆಗೆ ಐದು ಸಾವಿರ ಆಸನಗಳು ಮಾತ್ರ ಬುಕಿಂಗ್ ಆಗಿವೆ. ಆದಾಯ ಪ್ರಮಾಣ 3 ಕೋಟಿ ರೂ. ಕೂಡ ದಾಟುವುದಿಲ್ಲ’ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ “ಉದಯವಾಣಿ’ಗೆ ಬೇಸರ ವ್ಯಕ್ತಪಡಿಸಿದರು.
ರಾಜಹಂಸದಲ್ಲಿ ಆಸನಗಳ ಮರುವಿನ್ಯಾಸ : ಕೋವಿಡ್ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಸಮೂಹ ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಸಂಬಂಧ ಕೆಎಸ್‌ಆರ್‌ಟಿಸಿಯ ರಾಜಹಂಸ ಬಸ್ ವೊಂದರ ಆಸನಗಳ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸ ಲಾಗಿದೆ. ಹರಿತಾ ಸೀಟಿಂಗ್ ಸಿಸ್ಟಮ್ಸ್ ನೆರವಿನೊಂದಿಗೆ ಉಚಿತ ಮತ್ತು ಪ್ರಾಯೋಗಿಕವಾಗಿ ವಾಹನ ಸಂಖ್ಯೆ ಕೆಎ 57 ಎಫ್ 1803 ರಾಜಹಂಸದಲ್ಲಿದ್ದ 39 ಆಸನಗಳನ್ನು 29ಕ್ಕೆ ಸೀಮಿತಗೊಳಿಸಿ ಮರುವಿನ್ಯಾಸಗೊಳಿಸಿದೆ. ಸಾಮಾನ್ಯವಾಗಿ ಬಸ್ ಒಳಗೆ ಪ್ರತಿ ಸಾಲಿನಲ್ಲಿ ಎರಡೂ ಬದಿಯಲ್ಲಿ ತಲಾ ಎರಡರಂತೆ ನಾಲ್ಕು ಆಸನಗಳಿರುತ್ತವೆ. ಈ ಬಸ್‌ನಲ್ಲಿ ಪ್ರತಿ ಸಾಲಿನಲ್ಲಿ ಮೂರು ಆಸನಗಳನ್ನು ಅಳವಡಿಸಲಾಗಿದೆ. ಮರುವಿನ್ಯಾಸಗೊಂಡ ಈ ಬಸ್ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಮಾಡಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.