ಗದಗ: ಕೋವಿಡ್ ಲಾಕ್‌ಡೌನ್ ಸಡಿಲಿಕೆ ನಂತರ ಎರಡನೇ ದಿನ ಬುಧವಾರವೂ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಬಸ್ ಸಂಚಾರ ಸಾಮಾನ್ಯವಾಗಿತ್ತು. ಆದರೆ, ನಗರದ ಹೊಸ ಬಸ್ ನಿಲ್ದಾಣಕ್ಕೆ ಬುಧವಾರ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಸಾಮಾಜಿಕ ಅಂತರ ಮಾಯವಾಗಿತ್ತು.
ಜೊತೆಗೆ ಸಾರಿಗೆ ಅಧಿಕಾರಿಗಳ ಅಲಕ್ಷ್ಯದಿಂದಾಗಿ ಸಣ್ಣ-ಪುಟ್ಟ ಲೋಪಗಳು ಕಂಡು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಲಾಕ್‌ಡೌನ್ 4.0ದಲ್ಲಿ ಕೆಲ ಸಡಿಲಿಕೆ ಮಾಡಿ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ದೊರಕಿದೆ. ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಗದಗ ವಿಭಾಗದಿಂದ ಜಿಲ್ಲಾ ವ್ಯಾಪ್ತಿ ಹಾಗೂ ಅಂತರ್ ಜಿಲ್ಲೆಗಳಿಗೆ ಸಾರಿಗೆ ಬಸ್ ಗಳ ಸಂಚಾರ ಆರಂಭಗೊಂಡಿದೆ. ಮೊದಲ ದಿನಕ್ಕಿಂತ ಬುಧವಾರ ಮಧ್ಯಾಹ್ನದವರೆಗೆ ಪ್ರಯಣಿಕರ ಸಂಖ್ಯೆ ತುಸು ಹೆಚ್ಚಿತ್ತು.
ಅವರಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ಕಡೆಗೆ ಸಂಚರಿಸುವವರ ಸಂಖ್ಯೆ ಹೆಚ್ಚಿತ್ತು. ಆದರೆ, ಮಧ್ಯಾಹ್ನ 2 ಗಂಟೆ ಬಳಿಕ ವಿವಿಧ ಮಾರ್ಗಗಳಲ್ಲಿ ಸಂಚರಿಸಿದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.
ಚಾಲಕ, ನಿರ್ವಾಹಕರಿಗೆ ತರಾಟೆ: ವಿವಿಧ ಕೆಲಸ ಕಾರ್ಯಗಳ ನಿಮಿತ್ತ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಕೆಲವರು ಬೆಳಗ್ಗೆ 6 ಗಂಟೆ ವೇಳೆಗೆ ಇಲ್ಲಿನ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿ, ಬಸ್‌ಗಾಗಿ ಕಾದು ಕುಳಿತಿದ್ದರು. ಆದರೆ, ಬೆಳಗ್ಗೆ 8 ಗಂಟೆ ಸುಮಾರಿಗೆ ಗದಗ- ಬೆಂಗಳೂರಿಗೆ ಹೊರಡಬೇಕಿದ್ದ ಬಸ್‌ನ್ನು ನಿಗದಿತ ಸ್ಥಳ ಬಿಟ್ಟು, ಬೇರೆಲ್ಲೋ ನಿಲ್ಲಿಸಲಾಗಿತ್ತು. ಈ ಬಗ್ಗೆ ತಿಳಿಯುತ್ತಿದ್ದಂತೆ ಪ್ರಯಾಣಿಕರು ಮಕ್ಕಳು, ಮರಿ ಹಾಗೂ ಗಂಟು, ಮೂಟೆಗಳನ್ನು ಹೊತ್ತುಕೊಂಡು ಬಸ್‌ನತ್ತ ಓಡಿದರು.
ಬಸ್‌ನಲ್ಲಿ ಗರಿಷ್ಠ 30 ಜನರಿಗೆ ಅವಕಾಶ ಇದ್ದಿದ್ದರಿಂದ ಇನ್ನುಳಿದವರು ಬಸ್ ಚಾಲಕ ಹಾಗೂ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಪ್ಲಾಟ್‌ಫಾರಂಗೆ ಬರುತ್ತದೆ ಎಂದು ಎಲ್ಲರೂ ಸರದಿ ಸಾಲಿನಲ್ಲಿ ನಿಂತಿದ್ದೆವು. ಆದರೆ, ನಿಮಗೆ ತಿಳಿದಲ್ಲಿ ಬಸ್ ನಿಲ್ಲಿಸಿದರೆ, ಬೆಳಗ್ಗೆಯಿಂದ ಬಸ್‌ಗಾಗಿ ಕಾದು ಕುಳಿತವರ ಗತಿ ಏನು ಎಂದು ಪ್ರಯಾಣಿಕರು ಏರು ಧ್ವನಿಯಲ್ಲೇ ಚಾಲಕ, ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರಯಾಣಿಕರು ಹಾಗೂ ನಿರ್ವಾಹಕರ ಮಧ್ಯೆ ವಾಗ್ವಾದ ನಡೆಯಿತು. ಬಸ್ ನಿಲ್ದಾಣದ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ವಿವಾದಕ್ಕೆ ತೆರೆ ಎಳೆದರು.
ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಎಲ್ಲ ಇಲಾಖೆಗಳ ಮುಖಸ್ಥರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಕೆಳ ಸ್ತರದಲ್ಲಿರುವ ಸಿಬ್ಬಂದಿ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ನಿಗದಿಯಂತೆ ಬಸ್‌ಗಳು ಬಸ್ ನಿಲ್ದಾಣಕ್ಕೆ ಆಗಮಿಸದಿರುವುದು, ವಿಳಂಬವಾಗಿ ಪ್ರಯಾಣಿಕರ ಸ್ಕ್ರೀನಿಂಗ್ ಆರಂಭಗೊಂಡಿತ್ತು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ವಿಭಾಗೀಯ ಸಾರಿಗೆ ಅಧಿಕಾರಿ ಎಫ್.ಸಿ.ಹಿರೇಮಠ ಅವರು ಸ್ಥಳಕ್ಕೆ ಆಗಮಿಸಿದ ಬಳಿಕ ಎಲ್ಲವೂ ಸರಿಯಾದವು.