ಕುಂದಾಪುರ: ಪದವಿ ಕಾಲೇಜುಗಳು ಸೋಮವಾರದಿಂದ ಆರಂಭಗೊಂಡಿದ್ದು, ಆದರೆ ಮೊದಲ ದಿನವೇ ಕುಂದಾಪುರದ ಬೇರೆ ಬೇರೆ ಕಡೆಗಳಿಂದ ಕಾಲೇಜಿಗೆ ಬರಲು ಬಸ್ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಕೋವಿಡ್ ಎರಡನೇ ಅಲೆ, ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡ ಬಸ್‌ಗಳು ಮತ್ತೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಸಹ ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ.
ಕುಂದಾಪುರದ ಅಮಾಸೆಬೈಲು, ಹಾಲಾಡಿ, ಹೊಸಂಗಡಿ, ಹಳ್ಳಿಹೊಳೆ, ಸಿದ್ದಾಪುರ, ಕೊಲ್ಲೂರು, ವಂಡ್ಸೆ, ನೇರಳಕಟ್ಟೆ, ಹಟ್ಟಿಯಂಗಡಿ, ತ್ರಾಸಿ, ಮುಳ್ಳಿಕಟ್ಟೆ, ಹೆಮ್ಮಾಡಿ, ತಲ್ಲೂರು ಸೇರಿದಂತೆ ಬಹುತೇಕ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಟ ನಡೆಸಿದ್ದು ಕಂಡು ಬಂತು.
ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಸಾರ್ವಜನಿಕರು ಬಸ್ ಇಲ್ಲದೆ ನಿಲ್ದಾಣಗಳಲ್ಲಿ ಗಂಟೆ ಗಟ್ಟಲೆ ಕಾಯುವ ಸ್ಥಿತಿಯಿದೆ. ಬಸ್ ಬಂದರೂ ಆಗಲೇ ಭರ್ತಿ ಆಗಿದ್ದರಿಂದ ಅದಕ್ಕೆ ಹತ್ತಲು ಸಾಧ್ಯವಾಗದೆ ಬೇರೆ ಬಸ್‌ಗೆ ಕಾಯುವ ಅಥವಾ ಇನ್ನಿತರ ವಾಹನ ಬಾಡಿಗೆ ಮಾಡಿಕೊಂಡು ತೆರಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಕೆಲವು ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಡ್ರಾಪ್ ಪಡೆದುಕೊಂಡರೆ, ಇನ್ನು ಕೆಲವು ವಿದ್ಯಾರ್ಥಿಗಳು ಜತೆಗೂಡಿ ಆಟೋ ರಿûಾ ಬಾಡಿಗೆ ಮಾಡಿಕೊಂಡು ತೆರಳಿದ ಪ್ರಸಂಗ ನಡೆಯಿತು. ಕೇವಲ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಸ್ಥಿತಿಯಾದರೆ, ಇನ್ನೂ ಪಿಯುಸಿ, ಪ್ರೌಢಶಾಲೆಗಳೆಲ್ಲ ಆರಂಭವಾದರೆ ಆಗ ಈ ಸಮಸ್ಯೆ ಇನ್ನಷ್ಟು ಉಲ½ಣಗೊಳ್ಳುವ ಸಾಧ್ಯತೆಗಳಿವೆ.
ಎಲ್ಲ ಬಸ್‌ಗಳು ರಸ್ತೆಗಿಳಿದಿಲ್ಲ :
ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರವು ಜೂನ್ ಕೊನೆ ಹಾಗೂ ಜುಲೈ ಮೊದಲ ವಾರದಲ್ಲಿ ಆರಂಭಗೊಂಡಿತ್ತು. ಆದರೆ ಇನ್ನೂ ಕೂಡ ಲಾಕ್‌ಡೌನ್‌ಗಿಂತ ಮುಂಚೆ ಸಂಚರಿಸುತ್ತಿದ್ದ ಎಲ್ಲ ಬಸ್‌ಗಳು ರಸ್ತೆಗಿಳಿದಿಲ್ಲ. ಕೆಲವು ನಿಲ್ಲಿಸಿದ್ದ ಬಸ್‌ಗಳು ಅಲ್ಲಿಯೇ ಇವೆ. ಕುಂದಾಪುರ ಡಿಪೋ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ಗಿಂತ ಮುಂಚೆ ಸಿದ್ದಾಪುರ, ಬೈಂದೂರು, ಗಂಗೊಳ್ಳಿ, ಹಾಲಾಡಿ, ಉಡುಪಿ ಕಡೆಗೆ ಸೇರಿದಂತೆ 33 ಬಸ್‌ಗಳು ಸಂಚರಿಸುತ್ತಿದ್ದವು. ಈಗ 20 ಬಸ್‌ಗಳಷ್ಟೇ ಸಂಚರಿಸುತ್ತಿವೆ. ಇನ್ನೂ ಖಾಸಗಿ ಸಹ ಕೆಲವು ಬಸ್‌ಗಳು ಮಾತ್ರ ಸಂಚರಿಸುತ್ತಿವೆ.
ಗ್ರಾಮೀಣ ಭಾಗಗಳಿಂದ ಕುಂದಾಪುರಕ್ಕೆ ಬೆಳಗ್ಗೆ ಬರುವ ಬಹುತೇಕ ಎಲ್ಲ ಬಸ್‌ಗಳು ಜನರಿಂದ ತುಂಬಿರುತ್ತವೆ. ಇದರಿಂದ ನಾವು ಬೇರೆ ಬಸ್ ಇಲ್ಲದೆ ನೇತಾಡಿಕೊಂಡು ಬರುವಂತಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪಿಯುಸಿ, ಪ್ರೌಢಶಾಲೆ ತರಗತಿಗಳು ಆರಂಭವಾಗುವುದರಿಂದ ನಮಗೆಲ್ಲ ಸಮಸ್ಯೆಯಾಗಲಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಹೆಚ್ಚುವರಿ ಬಸ್‌ಗಳು ಸಂಚರಿಸಲು ಆದಷ್ಟು ಶೀಘ್ರದಲ್ಲಿ ವ್ಯವಸ್ಥೆ ಮಾಡಲಿ.
-ನೊಂದ ಕಾಲೇಜು ವಿದ್ಯಾರ್ಥಿಗಳು
ಈಗಾಗಲೇ ಕುಂದಾಪುರ ಭಾಗದಲ್ಲಿ ಬಹುತೇಕ ಎಲ್ಲ ಕಡೆಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಎಲ್ಲೆಲ್ಲ ಬಸ್‌ಗೆ ಬೇಡಿಕೆ ಇದೆ ಆ ಬಗ್ಗೆ ಗಮನಕ್ಕೆ ತರಲಿ. ಮುಂದಿನ ದಿನಗಳಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಶಾಲಾ- ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ತೆರೆದುಕೊಂಡ ಅನಂತರ ಪರಿಸ್ಥಿತಿ ನೋಡಿಕೊಂಡು ಹೆಚ್ಚುವರಿ ಬಸ್‌ಗಳನ್ನು ಆರಂಭಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು.
– ರಾಜೇಶ್, ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್