Advertisement

ಬಸ್ ಟಿಕೆಟ್ ದರ ಏರಿಕೆ; ಸರಕಾರದ ನಿರ್ಧಾರವನ್ನು ಖಂಡಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್  

05:06 PM Jun 26, 2021 | Team Udayavani |

ಉಡುಪಿ: ಕೋವಿಡ್-19 ಲಾಕ್‌ಡೌನ್ ಮೊದಲು ಖಾಸಗಿ ಬಸ್ ಟಿಕೇಟು ದರ 13 ರೂಪಾಯಿ ಇದ್ದದ್ದು ಮೊದಲ ಅಲೆ ನಂತರ 50% ಪ್ರಯಾಣಿಕರಿಗೆ ಅವಕಾಶ ನೀಡಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಬಸ್ ಓಡಿಸಿದಾಗ 20 ರೂಪಾಯಿಯಾಯಿತು. ಲಾಕ್‌ಡೌನ್ ಸಡಿಲ ಆದಾಗಲೂ ಇಂಧನ ಬೆಲೆ ಏರಿಕೆಯ ನೆಪವೊಡ್ಡಿ ಯಾವುದೇ ಬಸ್‌ನವರೂ ಟಿಕೇಟು ದರವನ್ನು ಪೂರ್ವದರಕ್ಕೆ ಇಳಿಸಲಿಲ್ಲ.

Advertisement

ಈಗ ಕೋವಿಡ್ 19 ಎರಡನೇ ಅಲೆಯ ಲಾಕ್‌ಡೌನ್ ಸಡಿಲಿಕೆ ಆದಾಗ ಪುನಃ 50% ಪ್ರಯಾಣಿಕರಿಗೆ ಬಸ್‌ನಲ್ಲಿ ಅವಕಾಶ ನೀಡುವ ಮಾರ್ಗಸೂಚಿ ಅನುಸರಿಸುವಾಗ ಶೇ.25 ಟಿಕೇಟು ದರ ಹೆಚ್ಚಿಸುವ ಸರಕಾರದ ನಿರ್ಧಾರವನ್ನು ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಜನಸಾಮಾನ್ಯರ ಸುಲಿಗೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡಿಸಿದೆ.

ಕೆಲವೇ ತಿಂಗಳುಗಳಲ್ಲಿ 2 ಬಾರಿ ಬಸ್ ಟಿಕೇಟು ದರ ಏರಿಸುವುದು ಕಾನೂನು ಪ್ರಕಾರ ಸರಿಯೇ ? ಕಳೆದೆರಡು ವರ್ಷದಿಂದ ಖಾಸಗಿ ಬಸ್‌ಗಳ ದರ ಸುಮಾರು 100% ಜಾಸ್ತಿಯಾದ ಹಾಗಾಗುತ್ತದೆ. 13 ರೂಪಾಯಿ ಇದ್ದ ದರ ರೂ. 20 ಆಗಿ ಈಗ ರೂ. 25 ಆಗುವ ಸಾಧ್ಯತೆ ಇದೆ. ಬಸ್‌ನ ಮಾಲಿಕರಿಂದ ತೆರಿಗೆ ಪಡೆಯುವಾಗ ಅದರಲ್ಲಿ ನಿರ್ದಿಷ್ಟ ಮೊಬಲಗನ್ನು ಕಾದಿರಿಸಿ ಪ್ರಕೃತಿ ವಿಕೋಪ ಯಾ ಇಂಧನ ಬೆಲೆ ಮಿತಿ ಮೀರಿದಾಗ ಬಳಸುವ ಡೀಸೆಲ್‌ಗೆ ಸಬ್ಸಿಡಿ ನೀಡಿ, ಸರಕಾರ ಸಹಾಯ ಮಾಡಬೇಕು. ಅಲ್ಲದೆ 2 ಲಾಕ್‌ಡೌನ್ ಅವಧಿಯಲ್ಲಿ ಕಟ್ಟಬೇಕಾದ ತೆರಿಗೆಯನ್ನು ಸರಕಾರ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಲಾಕ್‌ಡೌನ್ ಅವಧಿಯ ಬಸ್‌ನ ಸಾಲದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಬಸ್‌ನ ಚಾಲಕರು ಹಾಗೂ ನಿರ್ವಾಹಕರು ಸಂಕಷ್ಟದಲ್ಲಿರುವ ಅವರ ಖಾತೆಗೆ ಕನಿಷ್ಠ 10,000 ರೂಪಾಯಿಯನ್ನು ಸರಕಾರ ವರ್ಗಾಯಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಬಸ್ ಮಾಲಕರಿಗೆ, ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸರಕಾರ ಯಾವುದೇ ಆರ್ಥಿಕ ನೆರವು ನೀಡದೇ 2 ಲಾಕ್‌ಡೌನ್ ಮುಕ್ತಾಯದ ಸಂದರ್ಭದಲ್ಲಿಯೂ ಬಸ್ ದರ ಏರಿಸುವ ಮೂಲಕ ಪೆಟ್ರೋಲ್ ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರ ಸುಲಿಗೆ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಉಪಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್, ನಗರಸಭಾ ಸದಸ್ಯರಾದ ವಿಜಯ ಪೂಜಾರಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಭಂಡಾರ್ಕಾರ್, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ, ಮಾಜಿ ನಗರಸಭಾ ಸದಸ್ಯರುಗಳಾದ ಶಶಿರಾಜ್ ಕುಂದರ್, ಸುಕೇಶ್ ಕುಂದರ್ ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next