Advertisement
ಪ್ರಸ್ತುತ ವಾಯವ್ಯ ಸಾರಿಗೆಯಲ್ಲಿ ಬಹುತೇಕ ಅನುಷ್ಠಾನ ಹಂತ ತಲುಪಿದೆ. ಆದರೆ ಅತ್ಯಧಿಕ ಬಸ್‌ಗಳನ್ನು ಹೊಂದಿರುವ ಕೆಎಸ್ಸಾರ್ಟಿಸಿ, ಕಲ್ಯಾಣ ಸಾರಿಗೆ ಇತ್ಯಾದಿ ವಿಭಾಗಗಳಲ್ಲಿ ಇನ್ನೂ ಈ ಹೊಸ ಕ್ರಮ ಜಾರಿಯಾಗಿಲ್ಲ.
ಹುಬ್ಬಳ್ಳಿ ಭಾಗದಿಂದ ಮಂಗಳೂರು ಕಡೆಗೆ ಬರುವ ವಾಯವ್ಯ ಸಾರಿಗೆ ಕಂಡಕ್ಟರ್‌ಗಳನ್ನು ಗಮನಿಸಿದರೆ, ಕ್ಯುಆರ್ ಕೋಡ್ ಇರುವ ಪಟ್ಟಿಯನ್ನು ಐಡಿ ಕಾರ್ಡ್‌ನಂತೆ ಕೊರಳಿಗೆ ನೇತು ಹಾಕಿಕೊಂಡಿರುತ್ತಾರೆ. ಇದರಲ್ಲಿ ನಿರ್ವಾಹಕನ ಹೆಸರು, ದೂರವಾಣಿ ಸಂಖ್ಯೆ, ಹುದ್ದೆ ಸಂಖ್ಯೆ ವಿವರ ಹಾಗೂ ಕ್ಯುಆರ್ ಕೋಡ್ ಇರುತ್ತದೆ. ಪ್ರಯಾಣಿಕರು ಇದನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿ ಟಿಕೆಟ್ ಪಡೆಯಬಹುದು. ಫೋನ್ ಪೇ ಆ್ಯಪ್ ಮೂಲಕ ಹಣ ಖಾತೆಗೆ ಜಮೆಯಾದ ಕುರಿತು ನಿರ್ವಾಹಕನ ಮೊಬೈಲ್‌ಗೆ ಅಕ್ಷರ ಸಂದೇಶ ಹಾಗೂ ಧ್ವನಿ ಸಂದೇಶ ಬರುತ್ತದೆ.
ಯಶಸ್ವಿ ಪ್ರಯೋಗ: ಸತತ ಮೂರು ತಿಂಗಳ ಕಾಲ ವಾಯವ್ಯ ಸಾರಿಗೆಯ 415 ಬಸ್‌ಗಳಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ದೀರ್ಘ ಮಾರ್ಗದಲ್ಲಿ ಚಲಿಸುವ ಬಸ್‌ಗಳನ್ನು ಗುರುತಿಸಿ 5 ಡಿಪೋಗಳ ಮೂಲಕ ಇದನ್ನು ಜಾರಿಗೊಳಿಸಲಾಗಿತ್ತು. ಸೆಪ್ಟಂಬರ್‌ನಲ್ಲಿ ಪ್ರಾಯೋಗಿಕವಾಗಿ ವಾಯುವ್ಯ ಸಾರಿಗೆ ಆರಂಭಿಸಿತ್ತು. ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ನವೆಂಬರ್‌ನಲ್ಲಿ ಇನ್ನಷ್ಟು ಡಿಪೋಗಳಿಗೆ ವಿಸ್ತರಿಸಲಾಗಿತ್ತು. ಇಲ್ಲಿನ ಬಸ್‌ಗಳಲ್ಲಿ ಸುಮಾರು 1.2 ಲಕ್ಷ ವಹಿವಾಟುಗಳು ಡಿಜಿಟಲ್ ಮೂಲಕ ಆಗಿ ಒಟ್ಟು 2.3 ಕೋ.ರೂ. ನೇರವಾಗಿ ವಾಯವ್ಯ ಸಾರಿಗೆ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಈಗ ಕಿತ್ತೂರು ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ವಿಸ್ತರಿಸಿ 4,581 ಬಸ್‌ಗಳಲ್ಲೂ ಸದ್ಯದಲ್ಲೇ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಬರಲಿದೆ. ಎಲ್ಲೆಲ್ಲಿ?: ಹುಬ್ಬಳ್ಳಿಯಲ್ಲಿ ಫೆ. 3ರಂದು ಸಚಿವರಿಂದ ಹೊಸ ಪದ್ಧತಿ ಉದ್ಘಾಟನೆಯಾಯಿತು. ಬಳಿಕ ಹುಬ್ಬಳ್ಳಿ ಗ್ರಾಮಾಂತರದ 5 ಡಿಪೋಗಳಲ್ಲೂ ಆರಂಭಿಸಲಾಗಿದೆ. ಬೆಳಗಾವಿಯ 1 ಮತ್ತು 3ನೆ ಡಿಪೋ, ಬೈಲಹೊಂಗಲ, ಧಾರವಾಡ, ಹಳಿಯಾಳ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ಗದಗ, ಶಿರಸಿ ಡಿಪೋಗಳ ಬಸ್‌ಗಳಲ್ಲಿ ಅಳವಡಿಸಿದ್ದು, ಭಟ್ಕಳ, ಕುಮಟಾ ಡಿಪೋದಲ್ಲೂ ಜಾರಿಯಾಗಲಿದೆ. ಡಿಜಿಟಲ್ ಪಾವತಿಗೆ ಪ್ರಯಾಣಿಕರಿಂದ ಈವರೆಗೂ ಒಳ್ಳೆಯ ಸ್ಪಂದನೆ ಇದೆ ಎನ್ನುತ್ತಾರೆ ವಾಯುವ್ಯ ಸಾರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕ ಮಹಂತೇಶ್.
ಬಿಎಂಟಿಸಿ: ಡಿಜಿಟಲ್ ವ್ಯವಸ್ಥೆಯಲ್ಲಿ ಬಿಎಂಟಿಸಿ ಮುಂಚೂಣಿಯಲ್ಲಿದೆ. ಅಲ್ಲಿ ಹೆಚ್ಚಿನ ಪ್ರಯಾಣಿ ಕರು ಈ ವ್ಯವಸ್ಥೆಯನ್ನು ಬಳಸಿ ಕೊಳ್ಳುತ್ತಿದ್ದು, ಪ್ರತೀ ತಿಂಗಳು 4.5 ಕೋಟಿ ರೂ. ಡಿಜಿಟಿಲ್ ಪೇಮೆಂಟ್ ಮೂಲಕ ಬಂದರೆ, 13ರಿಂದ 18 ಕೋಟಿ ರೂ. ನೇರ ಪಾವತಿ ಆಗುತ್ತಿದೆ. ಸಾಮಾನ್ಯ ಟಿಕೆಟ್ ಜತೆಗೆ ಪಾಸ್‌ಗಳನ್ನು ಹೊಸ ವ್ಯವಸ್ಥೆ ಮೂಲಕ ಖರೀದಿಸಲಾಗುತ್ತಿದೆ.
Related Articles
Advertisement
ಬಸ್ಗಳುಕೆಎಸ್ಸಾರ್ಟಿಸಿ – 8,343
ಬಿಎಂಟಿಸಿ-6,222
ವಾಯವ್ಯ ಸಾರಿಗೆ- 4,857
ಕಲ್ಯಾಣ ಸಾರಿಗೆ- 4,854
ಒಟ್ಟು-24,276
(ಫೆ. 10ರ ವರೆಗಿನ ಅಂಕಿಅಂಶ) ಕೆಎಸ್ಸಾರ್ಟಿಸಿಯಲ್ಲಿ ಡಿಜಿಟಲ್ ಪಾವತಿ ಇನ್ನೂ ಆರಂಭವಾಗಿಲ್ಲ. ಸದ್ಯದಲ್ಲಿಯೇ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.
– ಜೆ. ಆಂಟನಿ ಜಾರ್ಜ್
ಮುಖ್ಯ ಸಂಚಾರ ವ್ಯವಸ್ಥಾಪಕರು, ಕೆಎಸ್ಸಾರ್ಟಿಸಿ, ಬೆಂಗಳೂರು – ಲಕ್ಷ್ಮೀ ಮಚ್ಚಿನ