Advertisement

ಉತ್ಸಾಹಿ ಯುವಕರಿಂದ‌ ಬಸ್‌ ತಂಗುದಾಣ

07:40 AM May 04, 2018 | Team Udayavani |

ಬದಿಯಡ್ಕ: ಜನರಿಂದ, ಜನರಿಗಾಗಿ, ಜನರು ಆಯ್ದ ಸರಕಾರವು ಕೆಲವೊಮ್ಮೆ ಬೇಡಿಕೆಗಳಿಗೆ ಕಿವಿಗೊಡದೇ ಹೋದಾಗ ಜನರು ಒಟ್ಟಾಗಿ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಲು ಮುಂದಾಗುತ್ತಿರುವುದು ಅಪರೂಪಕ್ಕೆ ಕೆಲವೆಡೆಗಳಲ್ಲಿ ಕಂಡು ಬರುವುದಿದೆ. ಇದಕ್ಕೊಂದು ಉದಾಹರಣೆಯಾಗಿ ಮಲೆತ್ತಡ್ಕದಲ್ಲೊಂದು ಬಸ್ಸು ನಿಲ್ದಾಣ ಸ್ಥಾಪನೆ. ಯುವಮನಸು ಗಳ ಕಲ್ಪನೆಯ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾಗಿ ಪ್ರಯಾಣಿಕರಿಗೆ ನೆರಳಾಗಿದೆ.

Advertisement

ಇತ್ತೀಚೆಗೆ ನವನಿರ್ಮಾಣದೊಂದಿಗೆ ಬ್ರಹ್ಮಕಲಶೋತ್ಸವ ನಡೆದ ಸ್ವರ್ಗ ಮಲೆತ್ತಡ್ಕ ಜಟಾಧಾರಿ ಮೂಲಸ್ಥಾನಕ್ಕೆ ತಿರುಗುವ ರಸ್ತೆ ಬದಿಯಲ್ಲಿ ಶಾಸ್ತಾ ಯೂತ್‌ ಕ್ಲಬ್‌ ಎಂಬ ಯುವ ಸಂಘಟನೆಯು ಪ್ರಕೃತಿಯ ಸೊಬಗಿನಲ್ಲಿ ಕಂಗೊಳಿಸುತ್ತಿರುವ ಪ್ರದೇಶದಲ್ಲಿ ನಯನ ಮನೋಹರ ಚಿತ್ತಾರದೊಂದಿಗೆ ಬಸ್‌ ತಂಗುದಾಣವನ್ನು ನಿರ್ಮಿಸಿ ಮಲೆತ್ತಡ್ಕ, ಪೆರಿಕ್ಕಾನ, ದುಗ್ಗಜಮೂಲೆ ಪ್ರದೇಶಗಳ ಬಸ್‌ ಅಥವಾ ಇತರ ವಾಹನಗಳನ್ನು ಕಾಯುವ ಜನರಿಗೆ ಮಳೆ ಬಿಸಿಲಿನಿಂದ ಮುಕ್ತಿಯನ್ನು ನೀಡಿದೆ ಮಾತ್ರವಲ್ಲದೆ ಈ ನಿಲ್ದಾಣ ಸಂಪೂರ್ಣ ವರ್ಣರಂಜಿತ ಚಿತ್ತಾರದಿಂದ ಕೂಡಿದ್ದು ಸೇವ್‌ ವಾಟರ್‌ ಎಂಬ ಚಿತ್ರ ಸಂದೇಶ ಶಾಸ್ತಾ ಯೂತ್‌ ಕ್ಲಬ್‌ನ ಸದಸ್ಯರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ. 

ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಆಲಂಕಾರಿಕವಾಗಿ ನಿರ್ಮಾಣಗೊಂಡ ಈ ಬಸ್ಸು ನಿಲ್ದಾಣ ರೂವಾರಿಗಳು ಬಿ.ಎ. ಪದವೀಧರ ಸದ್ಯ ಪಿ.ಎಸ್‌.ಸಿ. ಕೋಚಿಂಗ್‌ ಪಡೆಯುತ್ತಿರುವ ಉದಯರಾಜ್‌,  ಬೆಂಗಳೂರಲ್ಲಿ ಟೂಲ್‌ ಆ್ಯಂಡ್‌ ಡೈ ತರಬೇತಿ ಮುಗಿಸಿ ಕೆಲಸ ಹುಡುಕುತ್ತಿರುವ ಮಹೇಶ್‌, ಮಂಗಳೂರು ಖಾಸಗಿ ಸಂಸ್ಥೆಯೊಂದರ  ಧ್ವನಿ ಬೆಳಕು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ರಮೇಶ್‌ ಒಟ್ಟು ಹತ್ತು ಮಂದಿ ಜತೆಸೇರಿ ನಿರ್ಮಿಸಿದ ಈ ತಂಗುದಾಣಕ್ಕೆ ಚಿತ್ತಾರ ಬಿಡಿಸಿದವರು ಮಹಾಲಸ ವಿಶ್ವಲ್‌ ಆರ್ಟ್ಸ್ ವಿದ್ಯಾರ್ಥಿ ಸುನಿಲ್‌ ಭರಣ್ಯ. 

ಬಿದಿರು, ಕಂಗಿನ ಸಲಾಕೆ, ಸೋಗೆ, ಮಡಲುಗಳನ್ನು ಉಪಯೋಗಿಸಿ ನಿರ್ಮಿಸಿದ ಈ ಬಸ್‌ ತಂಗುದಾಣವು ಮಳೆನೀರು ಒಳಗೆ ನುಸುಳದಂತೆ ಟರ್ಪಾಲ್‌ ಅಳವಡಿಸಲಾಗಿದ್ದು ಬಿಸಿಲು ಮಳೆಗಳೆರಡರಿಂದಲೂ ರಕ್ಷಣೆ ನೀಡುತ್ತಿದೆ.

ಅಗತ್ಯವಾದ ಕಂಗು, ಬಿದಿರು ಮೊದಲಾದ ವಸ್ತುಗಳನ್ನು ಸ್ಥಳೀಯರಾದ ಸ್ವರ್ಗ ಶಾಲಾ ವ್ಯವಸ್ಥಾಪಕ ಹಾಗೂ ಜಟಾಧಾರಿ ಮೂಲಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಹೃಷಿಕೇಶ್‌ ವಿ.ಎಸ್‌., ಗೋವಿಂದ ಭಟ್‌ ಮೊಳಕ್ಕಾಲು ಹಾಗೂ ವಿವೇಕಾನಂದ ಬಿ.ಕೆ. ಅವರು ನೀಡಿದ್ದು ಮೇಲ್ಚಾವಣಿಗೆ  ಹೊದಿಸಲಾದ ಟರ್ಪಾಲನ್ನು ನವೀನ್‌ ವಿ.ಎಸ್‌. ಅವರು ನೀಡಿರುತ್ತಾರೆ. 

Advertisement

ಬಿಡುವಿನ ವೇಳೆಯಲ್ಲಿ ಶಾಸ್ತಾ ನಾಸಿಕ್‌ ಬೇಂಡ್‌ ಟ್ರೂಪ್‌ ಹೆಸರಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಆಟೋಟ ಕಲಾ ಮೇಳಗಳಲ್ಲಿ ಚೆಂಡೆ ಮೇಳೈಸುವುದರಲ್ಲಿ ಸಕ್ರಿಯರಾಗಿರುತ್ತಾರೆ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಹಿಂದುಳಿದ ವಿಭಾಗಕ್ಕೊಳಪ್ಪಟ್ಟ ಈ ಸಂಘದ ಸದಸ್ಯರು. 

ಒಟ್ಟಿನಲ್ಲಿ ಪ್ರಯಾಣಿಕರನ್ನು ಒಂದು ಕ್ಷಣ ಆಗಮಿಸಿ ದಣಿವಾರಿಸಿ ತೆರಳಿ ಎಂಬ ಮೌನ ಆಹ್ವಾನದೊಂದಿಗೆ ಕೈಬೀಸಿ ಕರೆಯುವಂತಿದೆ ಈ ಬಸ್ಸು ತಂಗುದಾಣ.

10 ದಿನ, ಜಸ್ಟ್‌ 1,500 ರೂ.
ಮಳೆ ಬಿಸಿಲಿನಿಂದ ರಕ್ಷಣೆಗೆ ಬಸ್ಸು ತಂಗುದಾಣಕ್ಕಾಗಿ ನಿರಂತರ ಮೌಖೀಕ ಮನವಿ ನೀಡಿದ್ದರೂ ಮೌನವೇ ಉತ್ತರ ವಾದಾಗ ಅದನ್ನೇ ಸವಾಲಾಗಿ ಸ್ವೀಕರಿಸಿ ಕೇವಲ ಹತ್ತು ದಿನಗಳಲ್ಲಿ ಬಿಡುವಿನ ವೇಳೆಯಲ್ಲಿ ನಿರ್ಮಾಣಗೊಂಡ ಈ ಬಸ್‌ ನಿಲ್ದಾಣಕ್ಕೆ ಕೇವಲ ಸಾವಿರದ ಐದುನೂರು ರೂಪಾಯಿಗಳಷ್ಟೇ ವ್ಯಯವಾಗಿರುವುದಾಗಿ ನಿರ್ಮಾಣ ತಂಡದ ರೂವಾರಿಯಲ್ಲೊಬ್ಬರಾದ ಉದಯರಾಜ್‌ ಹೇಳುತ್ತಾರೆ. 

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next