ಪಡುಬಿದ್ರಿ: ಸರ್ವಿಸ್ ರಸ್ತೆಗಿಳಿಯದೇ ಹೆದ್ದಾರಿಯನ್ನೇ ಬಳಸಿ ಸಾಗುವ ಚಾಳಿ ಬಸ್‌ಗಳಲ್ಲಿ ಪಡುಬಿದ್ರಿಯಲ್ಲಿ ಸತತವಾಗಿ ಮುಂದು ವರಿದಿದ್ದು, ಇದರಿಂದಾಗಿ ಶುಕ್ರವಾರ ಸಂಜೆಯ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಕಾರೊಂದು ಬಸ್ ಹಿಂಬದಿಗೆ ಢಿಕ್ಕಿಯಾಗಿ ಮಂಗಳೂರು ಮಂಗಳಾದೇವಿ ಪರಿಸರದ ಮಹಿಳೆ ಪುಷ್ಪಲತಾ ಆಚಾರ್ಯ (56) ತೀವ್ರ ವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಠಾತ್ತನೇ ಯಾವುದೇ ಮುನ್ಸೂಚನೆ ಇಲ್ಲದೇ ನಿಲ್ಲಿಸಿದ ಪರಿಣಾಮವಾಗಿ ಅದರ ಹಿಂದಿ ನಿಂದ ಹೆದ್ದಾರಿಯಲ್ಲೇ ಬಂದಿದ್ದ ಕಾರೊಂದು ಬಸ್ ಹಿಂಬದಿಗೆ ಢಿಕ್ಕಿಯಾಗಿದೆ.
ಇದೇ ಕಾರಲ್ಲಿ ಮಂಗಳೂರಿನಿಂದ ಉಡುಪಿಯತ್ತ ಹೋಗುತ್ತಿದ್ದ ತಾಯಿ, ಮಗಳು ಹಾಗೂ ಸಂಬಂಧಿಯೋರ್ವರ ಸಹಿತ ಮೂರು ಮಂದಿ ಇದ್ದು ಮುಂದಿನ ಸಾಲಿನಲ್ಲಿ ಚಾಲಕನ ಬದಿ ಯಲ್ಲೇ ಕುಳಿತಿದ್ದ ಪುಷ್ಪಲತಾ ಅವರ ಕಾಲುಗಳಿಗೆ, ಕೈಗೆ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು ಪಡು ಬಿದ್ರಿ ಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪಡುಬಿದ್ರಿ ಪೊಲೀಸರು ಅಪಘಾತ ಸಂಭವಿಸಿದ ತಾಣಕ್ಕೆ ಭೇಟಿಯಿತ್ತಿದ್ದಾರೆ.
ಪಡುಬಿದ್ರಿಯ ಜನತೆಗೆ “ಹೆದ್ದಾರಿಯೇ ಗೋಳು’ ಎಂಬಂತೆ ಉದಯವಾಣಿ ವರದಿ ಪ್ರಕಟಿಸಿದ ಎರಡೇ ದಿನದಲ್ಲಿ ಮತ್ತೆ ಈ ಅಪಘಾತ ಸಂಭವಿಸಿದೆ. ಪಡುಬಿದ್ರಿಗೆ ಆಗಮಿಸುವ ಸುಮಾರು 200ಕ್ಕೂ ಹೆಚ್ಚಿನ ತಡೆರಹಿತ ಮತ್ತು ಸರ್ವೀಸ್ ಬಸ್ಸುಗಳಲ್ಲಿ ಹೆಚ್ಚಿನ ಬಸ್‌ಗಳು ಈಗಲೂ ತಮ್ಮ ಹೆದ್ದಾರಿ ನಿಲುಗಡೆಯನ್ನೇ ಮುಂದುವರಿಸಿವೆ. ಪಡುಬಿದ್ರಿಯು ಶಾಶ್ವತ ಅಪಘಾತ ವಲಯವಾಗಿ ಮಾರ್ಪಟ್ಟಿ ರುವುದಾಗಿ ಸಂಬಂಧಿತ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.