Advertisement
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ನಿರ್ಮಾಣ ಮತ್ತು ವಾಹನಗಳ ಒತ್ತಡವೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ನಿತ್ಯ ಸಾವಿರಾರು ಜನ ಪ್ರಯಾಣಿಸುವ ಉಡುಪಿ ನಗರಸಭಾ ವ್ಯಾಪ್ತಿಯ ಈ ಪ್ರಮುಖ ಸ್ಥಳವಾದ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಪ್ರಯಾಣಿಕರಿಗೆ ತಂಗಲು ಒಂದು ಬಸ್ಸು ನಿಲ್ದಾಣದ ವ್ಯವಸ್ಥೆ ಇಲ್ಲದೆ ಅಲ್ಲಲ್ಲಿ ಜನದಟ್ಟಣೆ ಉಂಟಾಗಿ ಜನರಿಗೆ ಎಲ್ಲಿ ಹೋಗಬೇಕು, ಎಲ್ಲಿ ನಿಲ್ಲಬೇಕು ಎನ್ನುವುದು ತಿಳಿಯದೇ ಅತ್ತಿತ್ತ ಪೇಚಾಡುವ ಸ್ಥಿತಿಯೂ ನಿರ್ಮಾಣವಾಗಿದೆ. ಹಾಗಾಗಿ ಇಲ್ಲಿನ ರಸ್ತೆಯಲ್ಲಿ ಸಂಚರಿಸುವುದು ಪ್ರಯಾಣಿಕರಿಗೆ ಮತ್ತು ವಾಹನ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು ಸಂತೆಕಟ್ಟೆ ಇದೀಗ ಅಪಾಯಕಾರಿ ಜಂಕ್ಷನ್ ಪಟ್ಟವನ್ನು ಪಡೆದುಕೊಂಡಿದೆ.
ನಿತ್ಯ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿ ಹಾಗೂ ಇನ್ನಿತರ ಕೆಲಸಗಳಿಗೆ ಹೋಗುವ ಮಂದಿ ಹೆದ್ದಾರಿ ಮೇಲೆಯೇ ನಿಲ್ಲಬೇಕು. ಇದರಿಂದ ಅಪಘಾತಗಳು ಉಂಟಾಗುವ ಸಾಧ್ಯತೆಗಳು ಜಾಸ್ತಿ ಇದೆ. ಬಸ್ಸು ನಿಲ್ದಾಣ ಇಲ್ಲದೇ ಇರುವುದರಿಂದ ಇಲ್ಲಿಗೆ ಬರುವವರು ರಸ್ತೆ ಬದಿಯೇ ನಿಂತು ಬಸ್ಸು ಹತ್ತಬೇಕು. ಹೊರಗಿನಿಂದ ಬಂದವರಿಗೆ ಇಲ್ಲಿನ ದಿಕ್ಕು ತಪ್ಪುವುದು ಸಹಜವಾಗಿದೆ. ಇಲ್ಲಿ ಜನರು ಮಳೆ ಬಿಸಿಲಿಗೆ ರಸ್ತೆ ಬದಿಯಲ್ಲೆ ಬಸ್ಸು ಕಾಯಬೇಕಾಗಿರುವುದರಿಂದ ರಸ್ತೆಯೇ ಬಸ್ಸು ನಿಲ್ದಾಣವಾಗಿದೆ.
Related Articles
ಸಂತೆಕಟ್ಟೆಯ ಸರ್ವಿಸ್ ರಸ್ತೆಯಲ್ಲಿ ಉಡುಪಿ ಕಡೆಗೆ ಹೋಗುವ ಮತ್ತು ಕುಂದಾಪುರದ ಕಡೆಗೆ ಹೋಗಲು ಇಲ್ಲೊಂದು ತಂಗುದಾಣ ಅಗತ್ಯಬೇಕು ಎಂಬ ಬೇಡಿಕೆ ಇಲ್ಲಿನ ನಾಗರಿಕರದ್ದಾಗಿದೆ. ಹಲವಾರು ವರ್ಷಗಳ ಹಿಂದೆ ಇಲ್ಲಿದ್ದ ಬಸ್ಸು ನಿಲ್ದಾಣವನ್ನು ಎರಡು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತಗೊಳಿಸುವ ಹಿನ್ನಲೆಯಲ್ಲಿ ತೆರವುಗೊಳಿಸಲಾಗಿದೆ. ಅಂದಿನಿಂದ ಇವತ್ತಿನವರೆಗೂ ಜನರು ರಸ್ತೆಬದಿಯಲ್ಲೆ ನಿಲ್ಲಬೇಕಾಗಿದೆ.
Advertisement
– ನಟರಾಜ್ ಮಲ್ಪೆ