Advertisement

ಇದ್ದ ಹಳೆ ತಂಗುದಾಣಗಳನ್ನು ಕೆಡವಿದವರು ಪತ್ತೆಯೇ ಇಲ್ಲ

09:19 PM Mar 19, 2021 | Team Udayavani |

ಪುತ್ತೂರು: ಅಡ್ಡಹೊಳೆ-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಪ್ರಯಾಣಿಕರು ಮಳೆಗೆ ಒದ್ದೆಯಾಗ ಬೇಕು, ಬಿಸಿಲಿಗೆ ಒಣಗಬೇಕು..!
ಹೆದ್ದಾರಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಸಣ್ಣ-ಸಣ್ಣ ಜಂಕ್ಷನ್‌ಗಳಲ್ಲಿ ಜನರಿಂದ ಕೇಳಿ ಬಂದ ಮಾತಿದು. ಸೂಕ್ತ ಪ್ರಯಾಣಿಕರ ತಂಗುದಾಣಗಳಿಲ್ಲದೆ ರಸ್ತೆ ಇಕ್ಕೆಲೆಗಳಲ್ಲಿ ಪ್ರಯಾಣಿಕರು ಬೇಸಗೆಯಲ್ಲಿ ಬಿಸಿಲಲ್ಲಿ, ಮಳೆಗಾಲದಲ್ಲಿ ಮಳೆಯಲ್ಲೇ ಕಾಯಬೇಕು. ಹಾಗಾಗಿ ಸದ್ಯ ಚತುಷ್ಪಥದ ಹೆಸರಿನಲ್ಲಿ ಗಳಿಸಿದಕ್ಕಿಂತ ಕಳೆದುಕೊಂಡದ್ದೆ ಅಧಿಕ.

Advertisement

ಇದು ಚತುಷ್ಪಥ ಕಾಮಗಾರಿಯ ಅಡ್ಡ ಪರಿಣಾಮಗಳ ಲ್ಲೊಂದು. ರಸ್ತೆ ಇಕ್ಕೆಲಗಳಲ್ಲಿ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣಗಳನ್ನು ಕಾಮಗಾರಿ ನಡೆಸುವ ಸಲುವಾಗಿ ನೆಲಸಮಗೊಳಿಸಲಾಗಿದೆ. ಆದರೆ ಕಾಮಗಾರಿಯೇ ನಡೆಯದೆ ಸ್ಥಗಿತಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಕಾಮಗಾರಿ ಪೂರ್ಣಗೊಳಿಸುವವರೆಗೆ ತಾತ್ಕಾಲಿಕ ತಂಗುದಾಣಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿಕೊಡಬೇಕಿತ್ತು. ಅದ್ಯಾವುದನ್ನೂ ಮಾಡದ ಪರಿಣಾಮ ಜನರು ಪರ್ಯಾಯ ವ್ಯವಸ್ಥೆ ಇಲ್ಲದೆ ಸಂಕಷ್ಟ ಪಡುವಂತಾಗಿದೆ. ಅನಿವಾರ್ಯವಾಗಿ ಬೀದಿ ಬದಿ, ಕೆಲವು ಅಂಗಡಿಗಳ ಬದಿಯನ್ನೇ ಆಶ್ರಯಿಸಬೇಕಿದೆ.

ತಾತ್ಕಾಲಿಕ ತಂಗುದಾಣ
ಬೆದ್ರೋಡಿ, ವಳಾಲು, ಗೋಳಿತೊಟ್ಟು, ಕೋಲ್ಪೆ, ಪೆರಿಯಶಾಂತಿ, ಅಡ್ಡಹೊಳೆ ನಡುವೆ ಅಲ್ಲಲ್ಲಿ ತಾತ್ಕಾಲಿಕ ತಂಗುದಾಣಗಳೇ ಪ್ರಯಾಣಿಕರು ತಂಗಲು ಇರುವ ನಿಲ್ದಾಣ ಗಳು. ಧರ್ಮಸ್ಥಳ, ಉಪ್ಪಿನಂಗಡಿ, ನೆಲ್ಯಾಡಿಗೆ ತೆರಳುವ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸರಕಾರಿ ಬಸ್‌, ಟೂರಿಸ್ಟ್‌ ಬಸ್‌ಗಳನ್ನು ಓಡಾಟಕ್ಕೆ ಬಳಸುತ್ತಾರೆ. ಈ ಹಿಂದೆ ಅರ್ಧ ಕಿ.ಮೀ. ದೂರಕ್ಕೆ ಒಂದರಂತೆ ಇದ್ದ ತಂಗುದಾಣ ಈಗ ಒಟ್ಟಾರೆಯಾಗಿ ಹತ್ತಕ್ಕಿಂತ ಹೆಚ್ಚಿಲ್ಲ. ಆಯಾ ಹಳ್ಳಿಯ ಜನರು ಊರ ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಸ್ಥಳಗಳಲ್ಲಿ ತಾತ್ಕಾಲಿಕ ತಂಗುದಾಣ ನಿರ್ಮಿಸಿದ್ದಾರೆ. ಅವುಗಳೇ ಸದ್ಯಕ್ಕೆ ಪ್ರಯಾಣಿಕರಿಗೆ ತಂಗುದಾಣವಾಗಿದೆ.

ಬಿರು ಬಿಸಿಲು

ಈ ಹೆದ್ದಾರಿಯಲ್ಲಿನ ಸಣ್ಣ ಸಣ್ಣ ಜಂಕ್ಷನ್‌ಗಳಲ್ಲಿ ಇರಬೇಕಾದ ಕನಿಷ್ಠ ಮೂಲ ಸೌಕರ್ಯಗಳಲ್ಲಿ ಬಸ್‌ ತಂಗುದಾಣವೂ ಒಂದು. ಅದನ್ನೂ ಸಹ ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಹಲವು ಜನರ ಆಕ್ಷೇಪ. ಸದ್ಯಕ್ಕೆ ಐದು ಕಡೆಗಳಲ್ಲಿ ತಾತ್ಕಾಲಿಕವಾಗಿ ಜನರೇ ತಂಗುದಾಣ ನಿರ್ಮಿಸಿಕೊಂಡಿದ್ದಾರೆ.

Advertisement

ಮಳೆಗಾಲದಲ್ಲಿ ಅದರೊಳಗೆ ನಿಲ್ಲುವುದು ಕಷ್ಟ. ಈ ತಂಗುದಾಣಗಳು ಕಿರಿದಾಗಿದ್ದು ನಾಲ್ಕಕ್ಕಿಂತ ಹೆಚ್ಚು ಮಂದಿ ನಿಲ್ಲಲು ಸಾಧ್ಯವಿಲ್ಲ. ಗಾಳಿ ಮಳೆಗೆ ಮತ್ತು ಪಕ್ಕದಲ್ಲಿರುವ ಮರಗಳ ಸಣ್ಣ ಕೊಂಬೆಗಳು ಉರುಳಿದರೂ ಇವು ಧರಾಶಾಯಿಯಾಗುವುದು ಖಚಿತ. ಹಾಗಾಗಿ ಬದಲಿ ತಂಗುದಾಣ ಕೂಡಲೇ ನಿರ್ಮಿಸಬೇಕೆಂಬುದು ಜನಾಗ್ರಹ.

ದಿನವೂ  ಧೂಳಿನ ಅಭಿಷೇಕ ಇದ್ದದ್ದೆ

ಒಂದೆಡೆ ತಂಗುದಾಣ ಇಲ್ಲ, ಇನ್ನೊಂದೆಡೆ ಬಸ್‌ ಬೇ ಇಲ್ಲ. ರಸ್ತೆ ಬದಿ ನಿಂತರಂತೂ ಧೂಳಿನ ಕಾಟ ತಪ್ಪುತ್ತಿಲ್ಲ. ನೆಲ್ಯಾಡಿ ಪೇಟೆಯ ಸನಿಹದಲ್ಲಿದ್ದ ವರ್ತಕ ರೋರ್ವರು, ದಿನವೂ ಧೂಳಿನ ಅಭಿಷೇಕ ಇದ್ದದ್ದೆ. ಎನ್ನುವ ಮೂಲಕ ಧೂಳಿನ ಸಂಕಷ್ಟದ ಬಗ್ಗೆ ವಿವರಿಸಿದರು. ಶಾಲಾ ಮಕ್ಕಳು ಧೂಳಿನ ಪರಿಣಾಮ ತರಗತಿಗೆ ಸೇರುವುದೇ ದೊಡ್ಡ ಸವಾಲು. ಬಿಳಿ ಅಂಗಿ ಧರಿಸಿದ್ದರೆ ಬೇರೊಂದು ಅಂಗಿ ಜತೆಗೆ ಕೊಂಡು ಹೋಗುವುದು ಸೂಕ್ತ ಎಂದು ಉದನೆ ಬಳಿ ಶಾಲಾ ವಿದ್ಯಾರ್ಥಿ ಹೇಳುತ್ತಾನೆ. ಇಂತಹುದೇ ಸಮಸ್ಯೆ ಹೆದ್ದಾರಿ ಉದ್ದಕ್ಕೂ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next