ಮುದ್ದೇಬಿಹಾಳ: ಕೊನೆಗೂ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಮೊದಲ ಬಾರಿಗೆ ಪಟ್ಟಣದಿಂದ 3-4 ಕಿಮಿ ಅಂತರದಲ್ಲಿರುವ ಶಿರೋಳ ಗ್ರಾಮಕ್ಕೆ ಸೋಮವಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಬಂದಿದ್ದು ಗ್ರಾಮಸ್ಥರಲ್ಲಿ ಹರ್ಷದ ಹೊನಲು ಹರಿಯುವಂತೆ ಮಾಡಿದೆ.
ಶನಿವಾರ ನಡೆದಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಬಸ್ ಸೌಲಭ್ಯ ಇಲ್ಲದಿರುವ ಕುರಿತು ತಾಲೂಕಾಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರ ಗಮನ ಸೆಳೆದಿದ್ದರು. ಸಭೆಯಲ್ಲಿ ಭರವಸೆ ನೀಡಿದಂತೆ ತಹಶೀಲ್ದಾರ್ ಅವರು ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರೊಂದಿಗೆ ಮಾತನಾಡಿ ಸೋಮವಾರ ಗ್ರಾಮಕ್ಕೆ ಬಸ್ ಓಡಿಸುವ ವ್ಯವಸ್ಥೆ ಮಾಡಿ ಬೇಡಿಕೆಗೆ ಸ್ಪಂಧಿಸಿರುವುದು ಅಧಿಕಾರಿಗಳ ಮೇಲಿನ ಭರವಸೆ ಇಮ್ಮಡಿಗೊಳಿಸಿದಂತಾಗಿದೆ.
ಮೊದಲ ಬಾರಿಗೆ ಗ್ರಾಮಕ್ಕೆ ಬಂದ ಬಸ್‍ಗೆ ಗ್ರಾಮಸ್ಥರು ಹರ್ಷದಿಂದಲೇ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಿಕೊಂಡರು. ಈ ವೇಳೆ ಗ್ರಾಪಂ ಸದಸ್ಯ ದ್ಯಾವಪ್ಪ ಹುಣಶ್ಯಾಳ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೇಳಿದ ಸಮಸ್ಯೆಗೆ ತಕ್ಷಣ ಸ್ಪಂದಿಸಿರುವ ತಾಲೂಕಾಡಳಿತಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಈ ಕುರಿತು ಮುದ್ದೇಬಿಹಾಳದ ಸಾರಿಗೆ ಘಟಕ ವ್ಯವಸ್ಥಾಪಕ ಬಿ.ಬಿ.ಚಿತ್ತವಾಡಗಿ ಅವರು ಮಾತನಾಡಿ ಶಿರೋಳಕ್ಕೆ ಗ್ರಾಮಸ್ಥರ ಮನವಿ ಮೇರೆಗೆ ನಿತ್ಯ ಬೆಳಗ್ಗೆ 9 ಹಾಗೂ ಸಂಜೆ 5 ಗಂಟೆಗೆ ಎರಡು ಬಸ್ ಓಡಿಸಲಾಗುತ್ತದೆ. ಗ್ರಾಮಸ್ಥರು ಇದರ ಸದ್ಬಳಕೆ ಮಾಡಿಕೊಂಡು ಸಾರಿಗೆ ಸಂಸ್ಥೆಗೆ ಆದಾಯ ತೋರಿಸಿ ಬಸ್ ನಿರಂತರವಾಗಿ ಸಂಚಾರ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : ನೀಟ್ ಪರೀಕ್ಷೆ ಬರೆದ 55ರ ಹರೆಯದ ರೈತ! ಮಗ ಓದಿದ್ದ ಪುಸ್ತಕಗಳೇ ಓದಿದ ತಂದೆ