Advertisement

ಆರಂಭವಾದ ಒಂದೇ ವಾರದಲ್ಲಿ ಬಸ್‌ ಸೇವೆ ಬಂದ್‌ !

01:30 AM Sep 27, 2019 | Team Udayavani |

ಮಹಾನಗರ: ಕೆಎಸ್‌ಆರ್‌ಟಿಸಿ ಮಂಗಳೂರು-ಕಾಸರಗೋಡು ನಡುವೆ ಪ್ರಾರಂಭಿಸಿದ್ದ ಹೊಸ ವೋಲ್ವೋ ಬಸ್‌ ಸಂಚಾರ ಸೇವೆಯು ಒಂದೇ ವಾರದಲ್ಲಿ ಸ್ಥಗಿತಗೊಂಡಿದೆ. ವಿಶೇಷ ಅಂದರೆ, ರಸ್ತೆ ಹಾಳಾಗಿದೆ ಎಂಬ ಕಾರಣಕ್ಕೆ ಈ ವೋಲ್ವೋ ಸಂಚಾರವನ್ನು ರದ್ದುಗೊಳಿಸಲಾಗಿದೆ.

Advertisement

ತಲಪಾಡಿಯಿಂದ ಕಾಸರಗೋಡು ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ವೋಲ್ವೋದಂತಹ ಹೈಟೆಕ್‌ ಬಸ್‌ಗಳ ಓಡಾಟ ಕಷ್ಟಸಾಧ್ಯವಾಗುತ್ತಿದೆ. ರಸ್ತೆ ಹಾಳಾಗಿದೆ ಎಂಬ ಕಾರಣಕ್ಕೆ ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ಒಂದೂವರೆ ತಿಂಗಳ ಹಿಂದೆ ಆರಂಭಗೊಂಡ ಬಸ್‌ ಸೇವೆಯನ್ನು ಒಂದೇ ವಾರದಲ್ಲಿ ಸ್ಥಗಿತ ಗೊಳಿಸಲಾಗಿದೆ ಎನ್ನುವುದು ಕೆಎಸ್ಸಾರ್ಟಿಸಿ ಮೂಲಗಳಿಂದ ಬಂದಿರುವ ಮಾಹಿತಿ. ಆದರೆ ಪ್ರಯಾಣಿಕರ ಸ್ಪಂದನೆ ಕೂಡ ನಿರೀಕ್ಷೆಯಷ್ಟು ಸಿಗದಿರುವುದು ಕೂಡ ಇದಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ.

ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕೆಎಸ್ಸಾರ್ಟಿಸಿಯು ಮಂಗಳೂರು- ಕಾಸರಗೋಡು ನುಡವಣ ಐಷಾರಾಮಿ ವೋಲ್ವೋ ಬಸ್‌ ಸೇವೆಯನ್ನು ಆರಂಭಿಸಿತ್ತು. ಒಂದು ವಾರಗಳ ಕಾಲ ಎಂದಿನಂತೆ ಬಸ್‌ ಸಂಚರಿಸಿತ್ತು. ಬಳಿಕ ಒಂದೆಡೆ ಪ್ರಯಾಣಿಕರ ಸ್ಪಂದನೆ ಕಡಿಮೆ ಯಾದರೆ, ಗುಂಡಿ ಬಿದ್ದ ರಸ್ತೆಗಳಲ್ಲಿ ಐಷಾ ರಾಮಿ ವೋಲ್ವೋ ಬಸ್‌ ಸಂಚಾರ ಕಷ್ಟ ಎಂದು ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ.

ಹಿಂದೆಯೂ ಹೀಗಾಗಿತ್ತು
ಕೆಲವು ವರ್ಷಗಳ ಹಿಂದೆಯೂ ಕೆಎಸ್ಸಾರ್ಟಿಸಿಯು ಇದೇ ರೀತಿ ಮಂಗಳೂರಿನಿಂದ ಕಾಸರಗೋಡಿಗೆ ಕೆಎಸ್ಸಾರ್ಟಿಸಿಗೆ ವೋಲ್ವೋ ಬಸ್‌ ಸಂಚಾರವನ್ನು ಆರಂಭಗೊಳಿಸಿತ್ತು. ಆದರೆ ಆ ಸಮಯದಲ್ಲಿಯೂ ಪ್ರಯಾಣಿಕರ ಕೊರತೆಯಿಂದಾಗಿ ಸಂಚಾರವನ್ನು ಕೆಲವೇ ದಿನಗಳಲ್ಲಿ ಮೊಟಕುಗೊಳಿಸಲಾಗಿತ್ತು.

ಆಗಸ್ಟ್‌ ಮೊದಲ ವಾರದಲ್ಲಿ ಮಂಗ ಳೂರಿ-ಕಾಸರಗೋಡಿಗೆ ಮೊದಲ ಹಂತ ದಲ್ಲಿ ಎರಡು ಎ.ಸಿ. ವೋಲ್ವೋ ಬಸ್‌ ಸಂಚಾರ ಬಳಿಕ ಮತ್ತೆರಡು ಬಸ್‌ಗಳ ಸಂಚಾರಕ್ಕೆ ಚಿಂತಿಸಲಾಗಿತ್ತು. ಬೆಳಗ್ಗೆ 7 ಗಂಟೆ, 7.30, 7.45, 8, 10, 10.30, 10.45, 11.15, 2, 2.30, 2.45, 3.15, 6, 6.30ಕ್ಕೆ ಮತ್ತು ಕಾಸರಗೋಡಿನಿಂದ ಬೆಳಗ್ಗೆ 5.30, 5.55, 8.30, 9, 9.15, 9.45, 12, 12.30, 1, 1.30, 4.15, 4.45, 5.15 ಮತ್ತು 5.30ಕ್ಕೆ ಬಸ್‌ ಸಂಚಾರಕ್ಕೆ ವೇಳಾಪಟ್ಟಿಯೂ ನಿಗದಿಯಾಗಿತ್ತು.

Advertisement

ಪ್ರತೀ ದಿನ 14 ಟ್ರಿಪ್‌
ಮಂಗಳೂರಿನಿಂದ ಕಾಸರಗೋಡಿಗೆ ಕೇವಲ ಆರು ನಿಲುಗಡೆಯೊಂದಿಗೆ ಎರಡೂ ವಿಭಾಗದಿಂದ ಪ್ರತೀ ದಿನ 14 ಟ್ರಿಪ್‌ ಎ.ಸಿ. ವೋಲ್ವೋ ಬಸ್‌ ಸಂಚರಿಸಿ, ಪ್ರಯಾಣಿಕರೊಬ್ಬರಿಗೆ 75 ರೂ. ದರ ನಿಗದಿಪಡಿಸಲಾಗಿತ್ತು. ದಿನದ ಪಾಸಿನ ವ್ಯವಸ್ಥೆ ನೀಡಿ ಒಬ್ಬರಿಗೆ 130 ರೂ. ದರ ನಿಗದಿಯಾಗಿ ದ್ದು ದಿನದಲ್ಲಿ 2 ಬಾರಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಮೈಲೇಜ್‌ ಕಡಿಮೆ
“ಒಂದೆಡೆ ಪ್ರಯಾಣಿಕರ ಕೊರತೆ ಇದ್ದರೆ, ಮತ್ತೂಂದೆಡೆ ಸಾಮಾನ್ಯ ಬಸ್‌ಗೆ ಹೋಲಿಸಿದರೆ ವೋಲ್ವೋ ಬಸ್‌ಗಳು ಮೈಲೇಜ್‌ ಕೂಡ ಕಡಿಮೆ. ಸಾಮಾನ್ಯ ಬಸ್‌ಗಳು ಒಂದು ಲೀಟರ್‌ ಡಿಸೇಲ್‌ಗೆ ಸುಮಾರು 5-6 ಕಿ.ಮೀ. ಮೈಲೇಜ್‌ ನೀಡಿದರೆ, ವೋಲ್ವೋ ಬಸ್‌ಗಳು ಕೇವಲ 2.50ರಿಂದ 3 ಕಿ.ಮೀ. ಮೈಲೇಜ್‌ ನೀಡುತ್ತಿತ್ತು. ಅದರಲ್ಲಿಯೂ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸುವಾಗ ಮೈಲೇಜ್‌ ಮತ್ತಷ್ಟು ಕಡಿಮೆಯಾಗುತ್ತಿತ್ತು. ಈ ಎಲ್ಲ ಅಂಶಗಳನ್ನು ಮನಗಂಡು ಮಂಗಳೂರು-ಕಾಸರಗೋಡು ನಡುವಣ ಕೆಎಸ್ಸಾರ್ಟಿಸಿ ವೋಲ್ವೋ ಬಸ್‌ ಸಂಚಾರ ರದ್ದುಗೊಳಿಸಲಾಗಿದೆ’ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.

ರಸ್ತೆ ಹಾಳಾದ ಕಾರಣ ಸಂಚಾರ ಸ್ಥಗಿತ
ಮಂಗಳೂರು-ಕಾಸರಗೋಡು ನಡುವಣ ರಸ್ತೆ ಕೆಟ್ಟುಹೋಗಿದೆ. ಇದೇ ಕಾರಣಕ್ಕೆ ಒಂದೂವರೆ ತಿಂಗಳ ಹಿಂದೆ ಆರಂಭವಾಗಿದ್ದ ವೋಲ್ವೋ ಬಸ್‌ ಸೇವೆಯನ್ನು ರದ್ದುಗೊಳಿಸಿದ್ದೇವೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಐಷಾರಾಮಿ ಬಸ್‌ ಸಂಚರಿಸಿದರೆ ಬಸ್‌ಗಳ ಬಿಡಿ ಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
 - ಜಯಶಾಂತ್‌, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next