Advertisement

ಬಸ್‌ ತಪ್ಪಿದ್ರೆ ರಸ್ತೆಯಲ್ಲೇ ಜಾಗರಣೆ!

02:32 PM Dec 11, 2021 | Team Udayavani |

ಚಿಕ್ಕೋಡಿ: ಬಸ್‌ಗಾಗಿ ಸಾವಿರಾರು ವಿದ್ಯಾರ್ಥಿಗಳಿಂದ ರಸ್ತೆಯಲ್ಲಿಯೇ ಠಿಕಾಣಿ..ಬಸ್‌ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣಿಸುವ ದುಸ್ಥಿತಿ..ರಾತ್ರಿಯಾದರೂ ಮನೆ ಸೇರದ ಪರಿಸ್ಥಿತಿ..

Advertisement

ಇದು ಮಡ್ಡಿ ಭಾಗದ ಶಿಕ್ಷಣ ಕಾಶಿ ಎಂದೇ ಕರೆಯುವ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಂದೊದಗಿದ ದುಸ್ಥಿತಿ. ಸಮರ್ಪಕ ಬಸ್‌ ಸೌಲಭ್ಯವಿಲ್ಲದೇ ನಿತ್ಯ ಪರದಾಡುವಂತಾಗಿದೆ.

ಚಿಕ್ಕೋಡಿ ನಗರದಿಂದ 10 ಕಿ.ಮೀ ದೂರದಲ್ಲಿರುವ ಮಜಲಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 1500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಬಸ್‌ನಲ್ಲಿ ಸಂಚರಿಸಿ ಮಜಲಟ್ಟಿಗೆ ಶಿಕ್ಷಣ ಪಡೆಯಲು ಆಗಮಿಸುತ್ತಾರೆ. ಚಿಕ್ಕೋಡಿ ಮತ್ತು ಹುಕ್ಕೇರಿ ತಾಲೂಕಿನ ನಟ್ಟ ನಡುವೆ ಇರುವ ಶಿಕ್ಷಣ ಕೇಂದ್ರವಾಗಿರುವುದರಿಂದ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚಿನ ಮಕ್ಕಳು ಬಸ್‌ನಲ್ಲಿ ಸಂಚರಿಸುತ್ತಾರೆ. ಆದರೆ ಸಮರ್ಪಕ ಬಸ್‌ ಸೌಲಭ್ಯವಿಲ್ಲದ ಕಾರಣದಿಂದ ವಿದ್ಯಾರ್ಥಿಗಳು ಎರಡ್ಮೂರು ಗಂಟೆಗಳ ಕಾಲ ರಸ್ತೆಯಲ್ಲಿ ಕಾಲ ಕಳೆಯುವಂತಾಗಿದೆ.

ಚಿಕ್ಕೋಡಿಯಿಂದ ಸಂಕೇಶ್ವರ ಮಾರ್ಗವಾಗಿ ಸಂಚರಿಸುವ ಕೆಲವೇ ಕೆಲವು ಬಸ್‌ ಗಳಲ್ಲಿ ಸ್ಥಳಾವಕಾಶವಿಲ್ಲದೇ ಬಸ್‌ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೆಲವುವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಾಗಿಲಿನಲ್ಲಿಯೇ ಜೋತಾಡಿಕೊಂಡು ಪ್ರಯಾಣಿಸುವ ದೃಶ್ಯಗಳು ಎದೆ ಝಲ್‌ ಎನ್ನಿಸುತ್ತಿವೆ. ಮತ್ತೆ ಕೆಲವರು ಬಸ್‌ಹತ್ತಲು ಸಾಧ್ಯವಾಗದೇ ಇದ್ದಾಗ ಮತ್ತೂಂದು ಬಸ್‌ ಬರುವವರಿಗೂ ಗಂಟೆಗಳ ಕಾಲ ರಸ್ತೆಯಲ್ಲಿಯೇ ಸಮಯ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕಾಲೇಜಿಗೆ ಬೆಳಗ್ಗೆ ಮತ್ತು ಸಂಜೆ ಮನೆಗೆ ತೆರಳುವ ಸಮಯದಲ್ಲಿ ಬಸ್‌ ಸಂಚಾರ ವಿರಳ. ಚಿಕ್ಕೋಡಿ ಸಂಕೇಶ್ವರ ಮಾರ್ಗಕ್ಕೆ ಹೋಗುವ ಬಸ್‌ ಮಾತ್ರ ವಿದ್ಯಾರ್ಥಿಗಳಿಗೆ ಸೇವೆ ನೀಡಲಿವೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದ ಕೆಲವೇ ಬಸ್‌ಗಳು ಇರುವುದರಿಂದ ಮಕ್ಕಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ.

Advertisement

ವಿದ್ಯಾರ್ಥಿನಿಯರ ಪರದಾಟ: ಗ್ರಾಮೀಣಭಾಗದಲ್ಲಿರುವ ಮಜಲಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಕಾಲೇಜು ಮುಗಿದ ಬಳಿಕ ಬಸ್‌ ಗಾಗಿ ಕಾಯುವ ವಿದ್ಯಾರ್ಥಿನಿಯರ ಗೋಳು ಮಾತ್ರ ಹೇಳತೀರದಾಗಿದೆ. ಬಸ್‌ ಬಂದಾಗ ವಿದ್ಯಾರ್ಥಿಗಳು ಹರಸಾಹಸ ಪಟ್ಟು ಬಸ್‌ ಹತ್ತುತ್ತಾರೆ. ಆದರೆ ವಿದ್ಯಾರ್ಥಿನಿಯರು ಮಾತ್ರ ಜನ ದಟ್ಟಣೆಯಲ್ಲಿ ಬಸ್‌ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮುಂದಿನ ಬಸ್‌ಗಾಗಿ ಗಂಟೆಗಳ ಕಾಲ ಕಾಯುವುದು ಅನಿವಾರ್ಯವಾಗಿದೆ ಎಂದು ಓರ್ವ ವಿದ್ಯಾರ್ಥಿನಿ ಅಸಹಾಯಕತೆ ಬಿಚ್ಚಿಡುತ್ತಾರೆ.

ನಿಲ್ಲದ ಎಕ್ಸ್‌ಪ್ರೆಸ್‌ ಬಸ್‌ಗಳು: ಚಿಕ್ಕೋಡಿ-ಸಂಕೇಶ್ವರ ಮಾರ್ಗದ ಕೆಲವು ಲೋಕಲ್‌ ಬಸ್‌ಗಳು ಮಾತ್ರ ನಿಂತು ಹೋಗುತ್ತವೆ. ಅದೇ ಚಿಕ್ಕೋಡಿ-ಬೆಳಗಾವಿಗೆ ಹೋಗುವ ಎಕ್ಸ್‌ಪ್ರೆಸ್‌ ಬಸ್‌ಗಳು ಖಾಲಿಹೋಗುತ್ತಿದ್ದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗುವುದಿಲ್ಲ. ಚಿಕ್ಕೋಡಿ-ಬೆಳಗಾವಿಗೆ ಪ್ರತಿನಿತ್ಯ ನೂರಾರು ಬಸ್‌ ಸಂಚರಿಸುತ್ತವೆ. ಅದರಲ್ಲಿ ಕೆಲವು ಬಸ್‌ನಿಂತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಎಕ್ಸ್ ಪ್ರಸ್‌ ಬಸ್‌ಗಳನ್ನು ನಿಲುಗಡೆ ಮಾಡಬೇಕೆನ್ನುವುದುವಿದ್ಯಾರ್ಥಿಗಳ ಒತ್ತಾಸೆ.

ಊರಿಗೆ ತಲುಪಲು ರಾತ್ರಿಯಾಗುತ್ತದೆ. ಸಕಾಲಕ್ಕೆ ಬಸ್‌ಗಳು ಸಂಚರಿಸುತ್ತಿಲ್ಲ, ಬಸ್‌ಗಳಿಗೆ ಹತ್ತಲು ಜಾಗವೇ ಇರುವುದಿಲ್ಲ, ಬಾಗಿಲಿನಲ್ಲಿ ಕಷ್ಟಪಟ್ಟು ನಿಂತುಕೊಂಡು ಪ್ರಯಾಣಿಸುವ ಸಮಯದಲ್ಲಿ ಕೆಳಕ್ಕೆ ಬೀಳುವ ಆತಂಕ ಕೂಡ ಕಾಡುತ್ತಿದೆ. ಗಂಟೆಗಟ್ಟಲ್ಲೇ ಬಸ್‌ಗೆ ಕಾಯುವುದರಿಂದ ಊರಿಗೆ ತಲುಪಲು ರಾತ್ರಿಯಾಗುತ್ತದೆ. ಹೆಣ್ಣು ಮಕ್ಕಳಿಗೆ ಹೆಚ್ಚು ಸಮಸ್ಯೆಯಾಗಿದೆ.ಗಾಯತ್ರಿ ಕೋಳಿ, ವಿದ್ಯಾರ್ಥಿನಿ

ಸಂಕೇಶ್ವರ ಘಟಕದ ಬಸ್‌ಗಳು ಬೆಳಗಾವಿಗೆ ಹೋಗುವುದನ್ನು ರದ್ದು ಮಾಡಿ ಮಕ್ಕಳಿಗೆ ಅನುಕೂಲವಾಗಲು ಚಿಕ್ಕೋಡಿ ಕಡೆಬಿಡಲಾಗಿದೆ. ಸದ್ಯಕ್ಕೆ ಬಸ್‌ ಸಮಸ್ಯೆ ಇಲ್ಲವಾಗಿದೆ.ಶಾಲಾ-ಕಾಲೇಜು ಒಂದೇ ಸಮಯದಲ್ಲಿ ಬಿಡುವುದರಿಂದ ಸ್ವಲ್ಪ ಮಟ್ಟಿನ ಅಡಚಣೆ ಉಂಟಾಗುತ್ತದೆ. ಮೊದಲಿನ ಸಮಸ್ಯೆ ಸದ್ಯಕ್ಕಿಲ್ಲ.  –ರಾಜಶೇಖರ, ಡಿಟಿಒ, ಕೆಎಸ್‌ಆರ್‌ಟಿಸಿ ಚಿಕ್ಕೋಡಿ

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next