ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆ ಆದೇಶವನ್ನು ಜಾರಿಯಾಗುವ ಕೊನೆಯ ಕ್ಷಣದಲ್ಲಿ ಹಿಂಪಡೆದಿದೆ. ಇದರಿಂದ ಪಾಸಿನ ದರ ಯಥಾಸ್ಥಿತಿ ಮುಂದುವರಿಯಲಿದೆ.
ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಕನಿಷ್ಠ 100ರಿಂದ ಗರಿಷ್ಠ 250 ರೂ.ವರೆಗೆ ಹೆಚ್ಚಳ ಮಾಡಿ ಮೂರು ದಿನಗಳ ಹಿಂದಷ್ಟೇ ಆದೇಶ ಹೊರಡಿಸಿತ್ತು. ಜೂ.17ರಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದೂ ಆದೇಶದಲ್ಲಿ ಸೂಚಿಸಲಾಗಿತ್ತು.
ಆದರೆ, ಶುಕ್ರವಾರ ರಾತ್ರಿ ಏಕಾಏಕಿ ಈ ಆದೇಶವನ್ನು ಹಿಂಪಡೆಯುವಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಯಥಾಸ್ಥಿತಿ ದರ ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು
“ಉದಯವಾಣಿ’ಗೆ ತಿಳಿಸಿವೆ.
ಪಾಸ್ ದರ ಏರಿಕೆ ಆದೇಶ ಹಿಂಪಡೆಯಲು ವಿದ್ಯಾರ್ಥಿಗಳಿಂದ ವ್ಯಕ್ತವಾದ ತೀವ್ರ ವಿರೋಧ ಹಾಗೂ ರಾಜಕೀಯ ಒತ್ತಡ ಕಾರಣ ಎನ್ನಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ವಿದ್ಯಾರ್ಥಿಗಳ ರಿಯಾಯ್ತಿ ಬಸ್ ಪಾಸಿನ ದರ ಹೆಚ್ಚಿಸಿಲ್ಲ. ಇತ್ತ ಪ್ರಯಾಣ ದರ ಏರಿಕೆ ಪ್ರಸ್ತಾವನೆಯೂ ನನೆಗುದಿಗೆ ಬಿದ್ದಿದೆ. ಈ ಮಧ್ಯೆ ನಿಗಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಹೀಗಿರುವಾಗ, ಪಾಸಿನ ದರ ಪರಿಷ್ಕರಣೆಗೆ ಅನುಮತಿ ನೀಡಿದಲ್ಲಿ ಕೊಂಚ ಆರ್ಥಿಕ ಚೇತರಿಕೆಗೆ ಅನುಕೂಲ ಆಗಲಿದೆ ಎಂದು ಪರಿಷ್ಕರಣೆಗೆ ನಿರ್ಧರಿಸಲಾಗಿತ್ತು. ಇದರಿಂದ ನಿಗಮವು ವಾರ್ಷಿಕ ಸುಮಾರು 15 ರಿಂದ 20 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಿತ್ತು. ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಂದಾಜು 6.25 ಲಕ್ಷ ವಿದ್ಯಾರ್ಥಿಗಳು ರಿಯಾಯ್ತಿ ಬಸ್ ಪಾಸುಗಳನ್ನು ಹೊಂದುತ್ತಾರೆ.
ವಿದ್ಯಾರ್ಥಿಗಳ ಬಸ್ ಪಾಸ್ ದರ
-ಪಾಸ್‌ನ ಪ್ರಕಾರ ದರ (10 ತಿಂಗಳಿಗೆ)
-ಪ್ರಾಥಮಿಕ ಶಾಲೆ 150 ರೂ.
-ಪ್ರೌಢಶಾಲೆ ಬಾಲಕರು 750 ರೂ.
-ಪ್ರೌಢಶಾಲೆ ಬಾಲಕಿಯರು 550 ರೂ.
-ಪಿಯುಸಿ/ ಪದವಿ/ ಡಿಪ್ಲೊಮಾ 1,050 ರೂ.
-ವೃತ್ತಿಪರ ಕೋರ್ಸ್‌ಗಳು 1,550 ರೂ.
-ಸಂಜೆ ಕಾಲೇಜು/ ಪಿಎಚ್‌ಡಿ 1,350 ರೂ.
-ಐಟಿಐ (12 ತಿಂಗಳಿಗೆ) 1,310 ರೂ.
-ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ 150 ರೂ. (ಐಟಿಐಗೆ 160 ರೂ.).