ಮಹಾನಗರ: ಸರಕಾರಿ ಬಸ್ ಪಾಸ್ ಅವ್ಯವಸ್ಥೆ ಖಂಡಿಸಿ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕಲ್ಪಿಸಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ದ.ಕ. ಜಿಲ್ಲಾ ಸಮಿತಿ ವತಿಯಿಂದ ಶನಿವಾರ ನಗರದಲ್ಲಿ “ಕೆಎಸ್ಸಾರ್ಟಿಸಿ ಮಾರ್ಚ್’ ನಡೆಯಿತು.
ನಗರದ ಲಾಲ್‌ಬಾಗ್ ವೃತ್ತದಿಂದ ಬಿಜೈ ಕೆಎಸ್ಸಾರ್ಟಿಸಿ ಕಚೇರಿವರೆಗೆ ರ್ಯಾಲಿ ನಡೆಸಿದ ಎನ್‌ಎಸ್‌ಯುಐ ಸದಸ್ಯರು ವಿದ್ಯಾರ್ಥಿಗಳ ಬಸ್ ಪಾಸ್ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರಕಾರ ತಾಳುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು.
ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಬೆ ಮಾತನಾಡಿ, ಕೆಲವು ತಿಂಗಳುಗಳಿಂದ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಕೊರೊನಾ-ಲಾಕ್‌ಡೌನ್ ಹಾವಳಿಯಿಂದ ಆರ್ಥಿಕ ಸಮಸ್ಯೆಗೊಳಗಾಗಿದ್ದ ವಿದ್ಯಾರ್ಥಿಗಳ ಹೆತ್ತವರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಂತೂ ಇದರಿಂದ ತೊಂದರೆಗೊಳಗಾಗಿದ್ದಾರೆ. ಸರಕಾರ ಪೊಳ್ಳು ಭರವಸೆ ನೀಡಿ ವಿದ್ಯಾರ್ಥಿಗಳನ್ನು ವಂಚಿಸಿದೆ ಎಂದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ಪ್ರಸ್ತುತ ಬಸ್ ಪಾಸ್ “ಸೇವಾ ಸಿಂಧು’ ಆ್ಯಪ್ ಮೂಲಕ
ನೀಡುವುದಿಂದ ವಿದ್ಯಾರ್ಥಿಗಳು ಕಷ್ಟ ಅನುಭವಿಸುವಂತಾಗಿದೆ. ಈ ಹಿಂದಿನಂತೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು. ಕಾಂಗ್ರೆಸ್ ಸರಕಾರವಿದ್ದಾಗ ನೀಡುತ್ತಿದ್ದ ಉಚಿತ ಬಸ್ ಪಾಸ್ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕು ಎಂದರು.
ಮುಖಂಡರಾದ ಅನ್ವಿತ್ ಕಟೀಲ್, ಶೌನತ್ ರೈ, ಆಶಿಕ್ ಅರಂತೋಡು, ಶಫೀಕ್, ಅಫ್ಸಾನ್ ಶೇಖ್, ಕೌಶಿಕ್ ಗೌಡ, ಅಂಕುಶ್ ಶೆಟ್ಟಿ, ಪ್ರಿಸ್ಟನ್ ಮತ್ತಿತರರು ಪಾಲ್ಗೊಂಡಿದ್ದರು.