Advertisement
ಜಿಪಿಎಸ್ ಆಧಾರಿತ ಮೆಟ್ರೋ ನಿಲ್ದಾಣದ ಎಲ್ಲ 40 ನಿಲ್ದಾಣಗಳಲ್ಲಿ ಬಸ್ ಆಗಮನದ ನಿಖರ ಮಾಹಿತಿ ನೀಡುವ ಎಲ್‌ಇಡಿ ಫಲಕಗಳನ್ನು ಅಳವಡಿಸಲು ಬಿಎಂಟಿಸಿ ಮುಂದಾಗಿದ್ದು, ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದೊಂದಿಗೆ ಮಾತುಕತೆ ನಡೆಸಿದೆ. ನೆನೆಗುದಿಗೆ ಬಿದ್ದಿರುವ ಚತುರ ಸಾರಿಗೆ ವ್ಯವಸ್ಥೆಯಲ್ಲಿ ಈಗಷ್ಟೇ ಸುಧಾರಣೆ ಕಂಡುಬಂದಿದ್ದು, ತಿಂಗಳ ಅಂತರದಲ್ಲಿ ಈ ಪ್ರಯಾಣಿಕ ಮಾಹಿತಿ ಫಲಕಗಳನ್ನು ಪ್ರಾಯೋಗಿಕವಾಗಿ ಅಳವಡಿಸಲು ಉದ್ದೇಶಿಸಲಾಗಿದೆ.
Related Articles
Advertisement
ಆದಾಯ ಹೆಚ್ಚುವ ನಿರೀಕ್ಷೆ: ಸಾಮಾನ್ಯ ಮಾರ್ಗಗಳಲ್ಲಿನ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ (ಪ್ಯಾಸೆಂಜರ್ ಲೋಡ್) ಸರಾಸರಿ 40 ಇದ್ದು, ಇದರಿಂದ ಪ್ರತಿ ಕಿ.ಮೀ. 30 ರೂ.ಗೂ ಅಧಿಕ ಆದಾಯ ಬರುತ್ತದೆ. ಆದರೆ, ಮೆಟ್ರೋ ಸಂಪರ್ಕ ಸೇವೆಗಳಲ್ಲಿ ಪ್ಯಾಸೆಂಜರ್ ಲೋಡ್ 30 ಇದ್ದು, ಸರಾಸರಿ ಆದಾಯ ಪ್ರತಿ ಕಿ.ಮೀ. 22ರಿಂದ 23 ರೂ. ಇದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಈ ವ್ಯತ್ಯಾಸ ನಿರಂತರವಾಗಿದೆ. ಒಂದು ವೇಳೆ ಬಸ್ ಆಗಮನದ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಿದರೆ ಸಹಜವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದ್ದು, ಆ ಮೂಲಕ ಸಂಸ್ಥೆಯ ಆದಾಯ ಕೂಡ ಏರಿಕೆ ಆಗಲಿದೆ. ಸದ್ಯ 10 ಟಿಟಿಎಂಸಿ, ಪ್ರಮುಖ ಬಸ್ ನಿಲ್ದಾಣಗಳು ಸೇರಿದಂತೆ 160 ಕಡೆಗಳಲ್ಲಿ ಈಗಾಗಲೇ ಈ ಮಾದರಿಯ ಎಲ್‌ಇಡಿ ಫಲಕಗಳನ್ನು ಅಳವಡಿಸಲಾಗಿದೆ.
ನಿಖರ ಮಾಹಿತಿ ಕೊರತೆ: ವರ್ಷದ ಹಿಂದೆಯೇ ಈ ಯೋಜನೆ ರೂಪಿಸಲಾಗಿತ್ತು. ಪ್ರಾಯೋಗಿಕವಾಗಿ ಒಂದು ಕಡೆ ಪರಿಚಯಿಸಲಾಗಿತ್ತು ಎನ್ನಲಾಗಿದೆ. ಆದರೆ, ಐಟಿ ವ್ಯವಸ್ಥೆ ನಿರ್ವಹಣೆ ಮಾಡುವ ಕಂಪನಿಯು ಆರ್ಥಿಕ ಮುಗ್ಗಟ್ಟು ಎದುರಿಸಿದ ಬೆನ್ನಲ್ಲೇ ವ್ಯವಸ್ಥೆ ನೆನೆಗುದಿಗೆ ಬಿದ್ದಿತು. ಇದಲ್ಲದೆ, ಜಿಪಿಎಸ್ ಸೇವೆ ಇಲ್ಲದಿರುವುದರಿಂದ ಈ ಬಸ್ ಆಗಮನದ ನಿಖರ ಮಾಹಿತಿ ಸಮರ್ಪಕವಾಗಿ ಸಿಗುತ್ತಿಲ್ಲ.
ಜಾಹೀರಾತು ಆಲೋಚನೆ: 160 ಕಡೆಗಳಲ್ಲಿರುವ ಎಲ್‌ಇಡಿ ಫಲಕಗಳನ್ನು ಬಿಎಂಟಿಸಿಯು ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿದ್ದು, ಇದರಿಂದ ಪ್ರತಿ ಫಲಕದಿಂದ ತಲಾ 4 ಸಾವಿರ ರೂ.ಗಳಂತೆ ಟೆಂಡರ್ ಪಡೆದ ಏಜೆನ್ಸಿಯೇ ತಿಂಗಳಿಗೆ ಹಣ ಪಾವತಿ ಮಾಡುತ್ತದೆ. ಈ ಫಲಕಗಳಲ್ಲಿ ಶೇ. 50 ಬಿಎಂಟಿಸಿ ಬಸ್‌ಗಳ ಮಾಹಿತಿ ಹಾಗೂ ಸಂಸ್ಥೆಯ ಸೇವೆಗಳ ಬಗ್ಗೆ ಬಿತ್ತರಿಸಿದರೆ, ಉಳಿದ ಶೇ. 50 ಅವಧಿ ಜಾಹೀರಾತು ಪ್ರಸಾರ ಮಾಡಲಾಗುತ್ತದೆ. ಇದೇ ಮಾದರಿಯನ್ನು ಮೆಟ್ರೋ ನಿಲ್ದಾಣಗಳಲ್ಲೂ ಅನುಸರಿಸುವ ಯೋಚನೆ ಇದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಎಲ್‌ಇಡಿ ಫಲಕಗಳಲ್ಲಿ ಜಾಹೀರಾತು ಕೂಡ ನೀಡಬಹುದು. ಇದರಿಂದಲೂ ಆದಾಯ ಹೆಚ್ಚಲಿದೆ.
ರೈಲಿನಲ್ಲೂ ಮಾಹಿತಿ?: ನಿಲ್ದಾಣದಲ್ಲಿ ಮಾತ್ರವಲ್ಲ ಮೆಟ್ರೋ ರೈಲಿನಲ್ಲಿರುವ ಮಾಹಿತಿ ಫಲಕಗಳಲ್ಲೂ ಫೀಡರ್ ಬಸ್ ಸೇವೆಗಳು ಹಾಗೂ ಬಿಎಂಟಿಸಿ ಬಗ್ಗೆ ಮಾಹಿತಿ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ. ರೈಲುಗಳಲ್ಲಿ ಪ್ರಸ್ತುತ ಪ್ರವಾಸೋದ್ಯಮ, ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವ ಚಿತ್ರಗಳನ್ನು ಬಿತ್ತರಿಸಲಾಗುತ್ತಿದೆ.
ಮೆಟ್ರೋ ಸಂಪರ್ಕ ಸೇವೆಗಳನ್ನು ಮರುವಿನ್ಯಾಸ ಮಾಡಿ, ಎಲ್ಲೆಲ್ಲಿ ಹೆಚ್ಚು ಬೇಡಿಕೆ ಇದೆ? ಎಲ್ಲಿ ಕಡಿಮೆ ಇದೆ? ಇದೆಲ್ಲವನ್ನೂ ಅಧ್ಯಯನ ಮಾಡಲಾಗುವುದು. ಐಟಿಎಸ್ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಶುರುವಾದರೆ, ಆಗ ಒಂದಕ್ಕೊಂದು ಲಿಂಕ್ ಮಾಡಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಬಿಎಂಆರ್‌ಸಿಎಲ್ ಜತೆಗೂ ನಿರಂತರ ಸಂಪರ್ಕದಲ್ಲಿದ್ದೇವೆ. -ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ * ವಿಜಯಕುಮಾರ್ ಚಂದರಗಿ