Advertisement

ಕೆಎಸ್‌ಆರ್‌ಟಿಸಿಯಿಂದಲೇ ಬಸ್‌ ಬಾಡಿ ಬಿಲ್ಡಿಂಗ್‌

06:40 AM Sep 10, 2017 | |

ಬೆಂಗಳೂರು: ಜಿಎಸ್‌ಟಿ ಜಾರಿಯಿಂದ ಕೆಎಸ್‌ಆರ್‌ಟಿಸಿ ಪಾಲಿಗೆ ಡೀಸೆಲ್‌ ಮೇಲಿನ ತೆರಿಗೆ ಹೊರೆ ಇಳಿಕೆಯಾಗಿದ್ದರೂ, ಬಸ್‌ಗಳ ಖರೀದಿ ಮೇಲಿನ ತೆರಿಗೆ ಪ್ರಮಾಣ ದುಪ್ಪಟ್ಟಾಗಿದೆ. ನೂರಾರು ಕೋಟಿ ರೂ. ನಷ್ಟದಲ್ಲಿರುವ ನಿಗಮಕ್ಕೆ ಇದು ಹೊರೆಯಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ಸ್ವತಃ ತಾನೇ ಬಸ್‌ ತಯಾರಿಕೆಗೆ ನಿಗಮ ಮುಂದಾಗಿದೆ.

Advertisement

ಈ ಹಿಂದೆ ಬಸ್‌ ಕವಚ ನಿರ್ಮಾಣ (ಬಾಡಿ ಬಿಲ್ಡಿಂಗ್‌) ಖರೀದಿ ಮೇಲಿನ ಮೌಲ್ಯವರ್ಧಿತ ತೆರಿಗೆ ಪ್ರಮಾಣ ಶೇ. 14ರಷ್ಟಿತ್ತು. ಆದರೆ, ಸರಕು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಇದು ಶೇ. 28ರಷ್ಟಾಗಿದೆ. ಈ ಮಧ್ಯೆ ಕೆಎಸ್‌ಆರ್‌ಟಿಸಿಯ 1,152 ಸೇರಿ 3,152 ಬಸ್‌ಗಳ ಖರೀದಿಸಲಾಗುತ್ತಿದೆ. ಇದರಿಂದ ಸುಮಾರು 60ರಿಂದ 65 ಕೋಟಿ ರೂ. ಹೊರೆಯಾಗಿದೆ.

ಜಿಎಸ್‌ಟಿ ಪರಿಣಾಮ ಡೀಸೆಲ್‌ ಖರೀದಿಗೆ ರಾಜ್ಯದ ಪ್ರವೇಶ ತೆರಿಗೆಯಿಂದ ನಿಗಮಕ್ಕೆ ವಿನಾಯ್ತಿ ದೊರೆತಿದೆ. ಇದರಿಂದ ಲೀ.ಗೆ 3 ರೂ.ಗಳಷ್ಟು ಕಡಿಮೆಯಾಗಿದೆ. ಅಷ್ಟೇ ಅಲ್ಲ, ಬಿಡಿಭಾಗಗಳ ಖರೀದಿ ಮೇಲಿನ ತೆರಿಗೆ ಪ್ರಮಾಣ ಕೂಡ ಇಳಿಕೆಯಾಗಿದೆ. ಆದರೆ, ಇದರ ಬೆನ್ನಲ್ಲೇ ಬಸ್‌ ಕವಚಗಳ ಖರೀದಿ ಮೇಲಿನ ಜಿಎಸ್‌ಟಿ ದರ ದುಪ್ಪಟ್ಟಾಗಿದೆ. ಹಾಗಾಗಿ, ಒಂದು ಕಡೆಯಿಂದ ಕೊಟ್ಟು, ಮತ್ತೂಂದು ಕಡೆಯಿಂದ ಕಿತ್ತುಕೊಂಡಂತಾಗಿದೆ. ಅಲ್ಲದೆ, 15 ದಿನಕ್ಕೊಮ್ಮೆ ಡೀಸೆಲ್‌ ಬೆಲೆ ಪರಿಷ್ಕೃತಗೊಳುತ್ತಿದ್ದು, ಇದೂ ಏರಿಕೆ ಕ್ರಮದಲ್ಲೇ ಸಾಗಿದೆ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಂಪೆನಿಗಳಿಗೆ ದುಂಬಾಲು:
ಈಗಾಗಲೇ ಕೆಎಸ್‌ಆರ್‌ಟಿಸಿ 117 ಕೋಟಿ ರೂ. ನಷ್ಟದಲ್ಲಿ ಸಾಗುತ್ತಿದೆ. ಈ ನಡುವೆ ಕಳೆದೆರಡು ವರ್ಷಗಳಿಂದ ಬಸ್‌ ಖರೀದಿಸದೆ ಇರುವುದರಿಂದ ಈಗ ಖರೀದಿ ಅನಿವಾರ್ಯವಾಗಿದೆ. ಇದರ ಹೊರೆ ನುಂಗಲಾರದ ತುತ್ತಾಗಿದ್ದು, ಈ ಹಿನ್ನೆಲೆಯಲ್ಲಿ ನಿಗಮವು ವಿವಿಧ ಬಸ್‌ ತಯಾರಿಕಾ ಕಂಪೆನಿಗಳ ಜತೆ ಚೌಕಾಸಿಗೆ ಇಳಿದಿದೆ. ಬಸ್‌ನ ಕವಚ ನಿರ್ಮಾಣದ ವೆಚ್ಚ ಹೆಚ್ಚಳ ಆಗಿರಬಹುದು. ಆದರೆ, ಬಿಡಿ ಭಾಗಗಳ ಖರೀದಿ ಸೇರಿ ಒಟ್ಟಾರೆ ಬಸ್‌ ತಯಾರಿಕೆಗೆ ತಗಲುವ ವೆಚ್ಚ ಕಡಿಮೆ ಆಗಿದೆ. ಹಾಗಾಗಿ, ಆ ಉಳಿತಾಯದ ಹಣವನ್ನು ಸಾರಿಗೆ ನಿಗಮಕ್ಕೆ ವರ್ಗಾಯಿಸುವಂತೆ ಕಂಪೆನಿಗಳಿಗೆ ನಿಗಮ ದುಂಬಾಲು ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಬಸ್‌ನ ಕವಚ ನಿರ್ಮಾಣಕ್ಕೆ ಈ ಮೊದಲು 10 ಲಕ್ಷ ರೂ. ತಗಲುತ್ತಿತ್ತು. ಜಿಎಸ್‌ಟಿ ನಂತರ ಅದು 12.5 ಲಕ್ಷ ರೂ. ಆಗುತ್ತಿದೆ. ಹೊಸದಾಗಿ ಬರುವ 1,152 ಬಸ್‌ಗಳಲ್ಲಿ ಎಲ್ಲವೂ ಹೊಸ ಮಾರ್ಗಗಳಿಗೆ ಪರಿಚಯಿಸುವುದಿಲ್ಲ. ಗುಜರಿಗೆ ಸೇರಲಿರುವ 900 ಬಸ್‌ಗಳ ಬದಲಿಗೆ ಹೊಸ ಬಸ್‌ಗಳು ಸೇರ್ಪಡೆಗೊಳ್ಳುತ್ತವೆ. ಉಳಿದ 252 ಬಸ್‌ಗಳನ್ನು ಮಾತ್ರ ಹೊಸ ಮಾರ್ಗಗಳಿಗೆ ನಿಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ವರ್ಕ್‌ಶಾಪ್‌ಗ್ಳಲ್ಲೇ ತಯಾರಿಕೆ?
ಆದರೆ, ಹೊಸ ಬಸ್‌ಗಳು ಪ್ರತಿ ವರ್ಷ ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಎಸ್‌ಟಿ ನಿರಂತರ ಹೊರೆಯಾಗಿ ಪರಿಣಮಿಸಲಿದೆ. ಹಾಗಾಗಿ ಈಗಿರುವ ವರ್ಕ್‌ಶಾಪ್‌ಗ್ಳನ್ನು ಬಲವರ್ಧನೆಗೊಳಿಸಿ, ನಿಗಮದಿಂದಲೇ ಬಸ್‌ ಕವಚಗಳ ತಯಾರಿಕೆಗೆ ಉದ್ದೇಶಿಸಲಾಗಿದೆ ಎಂದು ಲೆಕ್ಕಪತ್ರ ವಿಭಾಗದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ಐದು ವರ್ಕ್‌ಶಾಪ್‌ಗ್ಳಿವೆ. ಈ ಪೈಕಿ ಕೆಂಗೇರಿ ಮತ್ತು ಹಾಸನದಲ್ಲಿರುವ ವರ್ಕ್‌ಶಾಪ್‌ಗ್ಳಲ್ಲೇ ತಿಂಗಳಿಗೆ 60 ಬಾಡಿ ಬಿಲ್ಡಿಂಗ್‌ ಮಾಡುವ ಸಾಮರ್ಥ್ಯವಿದೆ. ಇವುಗಳನ್ನು ಇನ್ನಷ್ಟು ಬಲವರ್ಧನೆ ಮಾಡಿದರೆ, ವರ್ಷಕ್ಕೆ ನಿಗಮಗಳಿಗೆ ಬೇಕಾಗುವ ಬಸ್‌ ಕವಚಗಳನ್ನು ಸ್ವತಃ ನಿಗಮಗಳು ತಯಾರಿಸಬಹುದು. ಈ ಸಂಬಂಧದ ಪ್ರಸ್ತಾವನೆಯನ್ನು ಮಂಡಳಿ ಮುಂದಿಡಲಾಗಿದೆ. ನಿರ್ದೇಶಕರು ಕೂಡ ಈ ನಿಟ್ಟಿನಲ್ಲಿ ಉತ್ಸುಕರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಲೆಕ್ಕಾಚಾರ ಹೀಗೆ…
ಒಂದು ಬಸ್‌ನ ಕವಚ ತಯಾರಿಕೆಗೆ 8 ಲಕ್ಷ ರೂ. ತಗಲುತ್ತದೆ. ಇದಕ್ಕೆ ವ್ಯಾಟ್‌ ಮತ್ತಿತರ ತೆರಿಗೆ ಒಳಗೊಂಡು 2 ಲಕ್ಷ ರೂ. ಸೇರಿದರೆ, 10 ಲಕ್ಷ ರೂ. ಆಗುತ್ತಿತ್ತು. ಆದರೆ, ಶೇ. 28ರಷ್ಟು ಜಿಎಸ್‌ಟಿ ಸೇರುವುದರಿಂದ ಬಸ್‌ ಕವಚ ತಯಾರಿಕೆಗೆ 12.5 ಲಕ್ಷ ರೂ. ತಗಲುತ್ತಿದೆ. ಈಗ ವರ್ಕ್‌ಶಾಪ್‌ಗ್ಳಲ್ಲೇ ತಯಾರಿಸುವುದರಿಂದ ನೇರವಾಗಿಯೇ 4.5 ಲಕ್ಷ ರೂ. ಉಳಿತಾಯ ಮಾಡಬಹುದು. ಮಾನವ ಸಂಪನ್ಮೂಲದ ಕೊರತೆಯಾದರೆ, ಹೊರಗುತ್ತಿಗೆಯಲ್ಲಿ ಕಾರ್ಮಿಕರನ್ನು ಪಡೆದು, ತಯಾರಿಸಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ವರ್ಕ್‌ಶಾಪ್‌ಗ್ಳಲ್ಲಿ ತಯಾರಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.

ಜಿಎಸ್‌ಟಿಯಿಂದ ಬಾಡಿ ಬಿಲ್ಡಿಂಗ್‌ ಸೇರಿ ಒಟ್ಟಾರೆ ಬಸ್‌ ಅನ್ನು ಹೊರಗಡೆಯಿಂದ ಖರೀದಿಸುವುದರಿಂದ ನಿಗಮಕ್ಕೆ ಆರ್ಥಿಕ ಹೊರೆ ಆಗುತ್ತದೆ. ಆದರೆ, ಬಿಡಿಭಾಗಗಳ ಬೆಲೆ ಅಗ್ಗವಾಗಿದೆ. ಆದ್ದರಿಂದ ಈ ಬಿಡಿಭಾಗಗಳಲ್ಲಾಗುವ ಉಳಿತಾಯವನ್ನು ತಮಗೆ ವರ್ಗಾಯಿಸುವಂತೆ ಕಂಪೆನಿಗಳಿಗೆ ಕೋರಲಾಗಿದೆ. ಹಾಗಾಗಿ, ನಿವ್ವಳ ಪ್ರತಿ ಬಸ್‌ಗೆ 75 ಸಾವಿರ ರೂ. ಮಾತ್ರ ಹೊರೆ ಆಗಲಿದೆ.
– ಎಸ್‌.ಆರ್‌. ಉಮಾಶಂಕರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ

ವರ್ಕ್‌ಶಾಪ್‌ ಎಲ್ಲೆಲ್ಲಿ?
ಬೆಂಗಳೂರು 2,
ಹಾಸನ-1,
ಯಾದಗಿರಿ-1
ಹುಬ್ಬಳ್ಳಿ-1

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next