ಕುಣಿಗಲ್: ತಾಲೂಕಿನ ಅಮೃತೂರು ಹೋಬಳಿ ಬೆನವಾರ ಕೊಪ್ಪಲು ಗ್ರಾಮದ ಬಳಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜನರನ್ನು ಕರೆತರುತ್ತಿದ್ದ ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಶನಿವಾರ ಅಪಘಾತ ಸಂಭವಿಸಿ, ಆಟೋದಲ್ಲಿದ್ದ ಓರ್ವ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.
ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಗೌಡಗೆರೆ ಗ್ರಾಮದ ರಾಮಯ್ಯ (55) ಮೃತ ದುರ್ದೈವಿ.
ಪಟ್ಟಣದ ಜಿಕೆಬಿಎಂಎಸ್ ಶಾಲಾ ಅವರಣದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಸ್‌ನ ವ್ಯವಸ್ಥೆ ಮಾಡಲಾಗಿತ್ತು. ಬಸ್ ನಲ್ಲಿ ಅಮೃತೂರು ಹೋಬಳಿಯ ಯಡವಾಣಿ, ಚಂದನಹಳ್ಳಿ, ಅರ್ಜುನಹಳ್ಳಿ ಗ್ರಾಮದಿಂದ ಜನರನ್ನು ಕರೆ ತರಲಾಗುತ್ತಿತು. ಬಸ್ ಬೆನವಾರ ಕೊಪ್ಪಲು ಗ್ರಾಮದ ತಿರುವಿನ ಬಳಿ ಬರುತ್ತಿರುವ ವೇಳೆ ಆಟೋ ರಿಕ್ಷಾ ಹಾಗೂ ಬಸ್ ಮಧ್ಯೆ ಢಿಕ್ಕಿ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ.
ಇದನ್ನೂ ಓದಿ:ಲೈಂಗಿಕ ಕಿರುಕುಳಕ್ಕೆ ವಿರೋಧ : ಚಲಿಸುತ್ತಿದ್ದ ರೈಲಿನಿಂದ ಯುವತಿಯನ್ನು ಹೊರ ತಳ್ಳಿದ ಪಾಪಿ
ಆಟೋ ರಿಕ್ಷಾದಲ್ಲಿದ್ದ ರಾಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಅವರೊಂದಿಗೆ ಪ್ರಯಾಣಿಸುತ್ತಿದ್ದ ಸುರೇಶ್, ಪ್ರೀತಮ್, ಮನೀಶ್ ಗಾಯಗೊಂಡಿದ್ದಾರೆ. ಇವರು ತಮ್ಮ ಗ್ರಾಮ ಗೌಡಗೆರೆಯಿಂದ ಉಂಗುರ ಗ್ರಾಮದ ದೇವಾಲಯಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಹುಲಿಯೂರುದುರ್ಗ ಪಿಎಸ್‌ಐ ಚೇತನ್ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.