Advertisement

ಬಸವನ ಹುಳು ಭೂಮಿಯಲ್ಲಿ ಹೂತು ಹಾಕಿ

12:57 PM Jul 11, 2022 | Team Udayavani |

ಚಿಂಚೋಳಿ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಸೋಯಾಬಿನ್‌(ಅವರೇ)ಹೆಸರು, ಉದ್ದು ಬೆಳೆಗಳಿಗೆ ಬಸವನ ಹುಳುಗಳ ಕಾಟ ಕಂಡು ಬಂದಿದ್ದು, ರೈತರು ತಮ್ಮ ಹೊಲಗಳಿಗೆ ಹೋಗಿ ಬಸವನ ಹುಳುಗಳನ್ನು ಆಯ್ದು ಅವುಗಳನ್ನು ಭೂಮಿಯಲ್ಲಿ ಹೂತು ಹಾಕಬೇಕು ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೊಡ ತಿಳಿಸಿದರು.

Advertisement

ಕೃಷಿ ಇಲಾಖೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಹಲಚೇರಾ, ತೇಗಲತಿಪ್ಪಿ, ಸುಂಠಾಣ, ಗಡಿಕೇಶ್ವಾರ, ಕನಕಪುರ ಗ್ರಾಮಗಳ ಹೊಲಗಳಲ್ಲಿ ಭಾರಿ ಪ್ರಮಾಣದಲ್ಲಿ ಬಸವನ ಹುಳುಗಳು ಕಂಡು ಬಂದಿದ್ದು, ಸೋಯಾಬಿನ್‌, ಹೆಸರು, ಉದ್ದು ಬೆಳೆಗಳ ಎಲೆ, ಕಾಂಡಗಳನ್ನು ತಿಂದು ಹಾಕಿವೆ ಎಂದು ಹೇಳಿದರು. ಬಸವನ ಹುಳುಗಳು ರಾತ್ರಿ ವೇಳೆ ಬೆಳೆಗಳ ಎಲೆಗಳನ್ನು ಸಂಪೂರ್ಣ ತಿಂದು ನಸುಕಿನಲ್ಲಿ ಮತ್ತೆ ಮಣ್ಣಿನಲ್ಲಿ ಹೂತುಕೊಳ್ಳುತ್ತವೆ. ಬದುಗಳಲ್ಲಿಯೂ ಹೆಚ್ಚು ಕಂಡು ಬರುತ್ತವೆ. ಬೆಳೆಗಳ ಹತ್ತಿರದಲ್ಲಿ ಮಣ್ಣಿನಲ್ಲಿ ತೂತು ಕಂಡು ಬಂದರೆ ಅವುಗಳಲ್ಲಿ ಬಸವನ ಹುಳುಗಳು ಹುದುಗಿಕೊಳ್ಳುತ್ತಿವೆ. ಆದ್ದರಿಂದ ರೈತರು ಹುಳುಗಳನ್ನು ಆಯ್ದು ಮಣ್ಣಿನಲ್ಲಿ ಹೂತು ಹಾಕಬೇಕು. ಇಲ್ಲವೇ ಉಪ್ಪು ಸುರಿದರೆ ಸಾಯುತ್ತವೆ ಎಂದು ತಿಳಿಸಿದರು.

ನಕಲಿ ಬೀಜ ಅಲ್ಲ; ತಾಲೂಕಿನ ಕೆಲವು ರೈತರು ಸೋಯಾಬಿನ್‌ ಬೀಜಗಳು ನಕಲಿ ಎಂದು ತಿಳಿಸಿದ್ದಾರೆ. ಆದರೆ ಕೃಷಿ ಇಲಾಖೆಯಿಂದ ನೀಡಿದ ಎಲ್ಲ ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ರೈತರಿಗೆ ನೀಡಲಾಗಿದೆ. ಕೆಲವು ದಿನಗಳಿಂದ ಬಸವನ ಹುಳಗಳ ಕಾಟ ನೆರೆಯ ಬೀದರ ಮತ್ತು ಕಲಬುರಗಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಂಡು ಬಂದಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಒಟ್ಟು 97,937ಹೆಕ್ಕೇರ್‌ ಬಿತ್ತನೆ ಗುರಿಯಿದೆ. ಈಗಾಗಲೇ 80,718 ಹೆಕ್ಟೇರ್‌ ಬಿತ್ತನೆಯಾಗಿದೆ. ತೊಗರಿ 56052 ಹೆಕ್ಟೇರ್‌, ಉದ್ದು 5895 ಹೆಕ್ಟೇರ್‌, ಹೆಸರು 11632 ಹೆಕ್ಟೇರ್‌, ಸೋಯಾ 5900 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಜುಲೈ 8ರ ವರೆಗೆ ಒಟ್ಟು 159 ಎಂಎಂ ಮಳೆ ಆಗಿದ್ದು, ಶೇ. 80 ಬಿತ್ತನೆ ಆಗಿದೆ. ಬಸವನ ಹುಳಗಳ ಹತೋಟಿಗಾಗಿ ಕೃಷಿ ಇಲಾಖೆಯಿಂದ ಮೆಟಾಲಟಿ ಹೈಡ್‌ ಪೌಡರ ಸಿಂಪರಣೆ ಮಾಡಬೇಕು. ಇದರ ಬಗ್ಗೆ ಪ್ರತಿಯೊಂದು ಗ್ರಾಮಗಳಲ್ಲಿ ಡಂಗೂರ ಸಾರಿ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸದ್ಯ ನಮ್ಮ ಇಲಾಖೆಯಲ್ಲಿ ಮೆಟಾಲಿಟಿ ಹೈಡ ಪೌಡರ್‌ ಕಲಬುರಗಿ, ಬೀದರ ಜಿಲ್ಲೆಯಲ್ಲಿ ಸಿಗುತ್ತಿದೆ. ರೈತರು ಖರೀದಿಸಿ ಸಿಂಪರಣೆ ಮಾಡಿ ಬೆಳೆ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕೃಷಿ ಅಧಿಕಾರಿಗಳಾದ ಅಭಿಲಾಷ ಸುಬೇದಾರ ಚಿಮ್ಮನಚೋಡ, ಗುರುಪಾದಪ್ಪ ಸುಲೇಪೇಟ, ರಘುವೀರ ಚಿಂಚೋಳಿ, ಸೈಫನ ಮುಲ್ಲಾ ಕೋಡ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next