ರಾಯಚೂರು: ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಮುಂಜಾನೆ ಮಂಜಿಗೆ ಬಿಸಿಲೂರು ಜನ ಥರಗುಟ್ಟುವಂತಾಗಿದೆ. ಶೀತಗಾಳಿಗೆ ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಫೆಬ್ರವರಿ ವೇಳೆಗೆ ಸಣ್ಣ ಪ್ರಮಾಣದ ಬಿಸಿಲು ಶುರುವಾಗುತ್ತದೆ. ಸಂಕ್ರಾಂತಿ ವೇಳೆ ಸೂರ್ಯ ಪಥ ಬದಲಾವಣೆ ಈ ಭಾಗದ ಬೇಸಿಗೆ ಆರಂಭದ ಸಂಕೇತ. ಆದರೆ, ಈ ಬಾರಿ ಇನ್ನೂ ಅಷ್ಟೊಂದು ಪ್ರಮಾಣದ ಬಿಸಿಲು ದಾಖಲಾಗಿಲ್ಲ. ಅದರ ಬದಲಿಗೆ ಬೆಳಗಿನ ಜಾವ ಕೊರೆವ ಚಳಿ ಇದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ 14-15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಸಾಮಾನ್ಯವಾಗಿ ಜನವರಿಯಲ್ಲಿ ಕೇಡು ಮಳೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು. ಬೆಳೆದು ನಿಂತು ಜೋಳ ಕೇಡು ಮಳೆಯಿಂದ ಕಾಡಿಗೆ (ಕಪ್ಪು) ಆಗುವ ಸಾಧ್ಯತೆ ಇರುತ್ತದೆ. ಆದರೆ, ಕೆಲವೆಡೆ ಮಳೆ ಆದರೆ ಉಳಿದೆಲ್ಲ ಕಡೆ ಮಂಜು ಮುಸುಕಿದ ವಾತಾವರಣ ಇದೆ. ಅದೂ ಅಲ್ಲದೇ, 1-2 ಮಿ.ಮೀ. ಮಳೆಯಾಗುತ್ತಿದ್ದು, ಈ ಬಾರಿ 10 ಮಿ.ಮೀ. ಮಳೆಯಾಗಿದೆ.
ರೈತರಲ್ಲಿ ಆತಂಕ: ಈ ಬಾರಿ ಮುಂಗಾರು, ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಹಿಂಗಾರಿನಲ್ಲಿ ಕೆಲವೆಡೆ ರೈತರು ಜೋಳ, ಕಡಲೆ ಬಿತ್ತನೆ ಮಾಡಿದ್ದಾರೆ. ಈಗ ಜೋಳ ಕಾಯಿ ಕಟ್ಟುವ ವೇಳೆಯಾಗಿದೆ. ಇನ್ನು ಕಡಲೆ ಕೂಡ ಬಿಡಿಸಲಾಗುತ್ತಿದೆ. ಇಂಥ ಹೊತ್ತಲ್ಲಿ ಕೇಡು ಮಳೆ ಬಂದಲ್ಲಿ, ಇಲ್ಲವೇ ಇಂಥ ವಾತಾವರಣ ಇದ್ದರೆ ಜೋಳ ಕಾಡಿಗೆ ಆಗಲಿದೆ. ಕಿತ್ತು ಹಾಕಿದ ಒಣಕಡಲೆ ಮೊಳಕೆ ಬರುವ ಸಾಧ್ಯತೆ ಇರಲಿದೆ. ಈ ಕಾರಣಕ್ಕೆ ರೈತರಲ್ಲಿ ಆತಂಕ ಮನೆ ಮಾಡಿದೆ. ಸಾಕಷ್ಟು ಕಡೆ ಹಿಂಗಾರು ಬಿತ್ತನೆ ಮಾಡಲಾಗಿದೆ ಆದರೂ ಸೂಕ್ತ ಇಳುವರಿಯೇ ಬಂದಿಲ್ಲ. ಬಂದಿರುವ ಅಲ್ಪ ಸ್ವಲ್ಪ ಇಳುವರಿ ಹೀಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದರೆ ಹೇಗೆ ಎಂಬ ಚಿಂತೆ ರೈತಾಪಿ ವರ್ಗವನ್ನು ಕಾಡುತ್ತಿದೆ.
ಬರೀ ಚಳಿ ಇದ್ದರೆ ಸಮಸ್ಯೆ ಇರಲಿಲ್ಲ. ಆದರೆ, ಅದರ ಜತೆಗೆ ತಂಪು ಗಾಳಿ ಬಿಸುತ್ತಿದೆ. ಇದರಿಂದ ಜೋಳದ ಗಿಡಗಳು ನೆಲಕ್ಕೆ ಉರುಳುತ್ತಿವೆ. ಕೆಲವೆಡೆ ಸಣ್ಣ ಪ್ರಮಾಣದ ಮಳೆಯಾಗಿದೆ. ಇದರಿಂದ ಜೋಳ ಕಪ್ಪಾಗುವ ಸಾಧ್ಯತೆ ಇದೆ. ಇನ್ನು ಒಣಕಡಲೆ ಕೂಡ ತಂಪಾಗುವುದರಿಂದ ಮತ್ತೆ ಅದನ್ನು ಒಣಗಿಸುವ ಕೆಲಸ ಮಾಡಬೇಕಿದೆ. ತಂಪು ಹೆಚ್ಚಾದರೂ ಸಮಸ್ಯೆ ಎದುರಾಗಲಿದೆ.
•ಜಯಪ್ಪಸ್ವಾಮಿ ಉಡುಮಗಲ್, ರೈತ ಮುಖಂಡ
ಸಾಮಾನ್ಯವಾಗಿ ಮಳೆ ಬಂದರೆ ಇಷ್ಟು ತಂಪು ವಾತಾವರಣ ಇರುವುದಿಲ್ಲ. ಇದು ಸೈಕ್ಲೋನ್ ಪರಿಣಾಮ. ಶೀತ ಗಾಳಿ ಜತೆ ಚಳಿ ಹೆಚ್ಚಾಗಿರುವುದು ಚಂಡಮಾರುತಗಳಿದ್ದಾಗ ಮಾತ್ರ. ಕಳೆದೆರಡು ದಿನಗಳಿಗೆ ಹೋಲಿಸಿದರೆ, ಈಗ ಸ್ವಲ್ಪ ವಾತಾವರಣ ತಿಳಿಯಾಗಿದೆ.
•ಡಾ| ಸತ್ಯನಾರಾಯಣ, ಕೃಷಿ ವಿವಿ ಹವಾಮಾನ ತಜ್ಞ