Advertisement
ದಿನವೂ ಗಂಡ ಹೀಗೆಯೇ ಮಣ್ಣಿನ ಪರೀಕ್ಷೆಯಲ್ಲಿ ತಲ್ಲೀನನಾಗುವುದು ಕಂಡು ಬಿನೋಯ್ ಸಿಟ್ಟಾದಳು. “”ನಿಮಗೆ ತಲೆ ಸರಿ ಇಲ್ಲ. ಹೀಗೆ ಮಣ್ಣಿನ ಮುಂದೆ ಕುಳಿತುಕೊಂಡರೆ ಅದು ಚಿನ್ನವಾಗುತ್ತದೆಂದು ಭಾವಿಸುವುದು ಬರೇ ಬ್ರಾಂತು. ಹೊಲಗಳು ವ್ಯವಸಾಯ ಕಾಣದೆ ಹಾಳು ಬೀಳುತ್ತಿವೆ. ಊಟ ಸಂಪಾದನೆಯ ದಾರಿ ಇಲ್ಲ. ಹೀಗೆ ನೀವು ಹುಚ್ಚಾಟ ಮಾಡುತ್ತ ಕುಳಿತರೆ ಒಂದು ದಿನ ಉಪವಾಸ ಸತ್ತುಹೋಗುತ್ತೇವೆ” ಎಂದು ಅವನನ್ನು ಕಟುವಾದ ಮಾತುಗಳಿಂದ ಆಕ್ಷೇಪಿಸಿದಳು. ಆದರೂ ಸುನೋಯ್ ತನ್ನ ಕೆಲಸದಿಂದ ಎದ್ದು ಬರಲಿಲ್ಲ. “”ನೋಡುತ್ತ ಇರು, ಇಂದಲ್ಲ ನಾಳೆ ರಾಶಿ ರಾಶಿ ಮಣ್ಣನ್ನು ಚಿನ್ನವನ್ನಾಗಿ ಪರಿವರ್ತಿಸುತ್ತೇನೆ. ಎಲ್ಲಿ ನೋಡಿದರೂ ಚಿನ್ನವೇ ಕಾಣುತ್ತದೆ. ಚಿನ್ನದಿಂದಲೇ ಮನೆಯನ್ನೂ ಕಟ್ಟಿಸುತ್ತೇನೆ” ಎಂದು ಹೇಳಿದ.
Related Articles
Advertisement
“”ಹೌದು ಮಾವ, ನನಗೆ ಮಣ್ಣಿನಿಂದ ಚಿನ್ನ ತಯಾರಿಸಲು ಸಾಧ್ಯವಾಗುತ್ತದೆ ಎಂಬ ವಿಚಾರ ಗೊತ್ತಿದೆ. ಆದರೆ ಹೇಗೆ ಎನ್ನುವುದು ತಿಳಿದಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ಕೊಡುತ್ತೀರಾ?” ಎಂದು ಕೇಳಿದ ಸುನೋಯ್. “”ಅಯ್ಯೊ ದೇವರೇ, ಅದು ಕಷ್ಟವೇ ಅಲ್ಲ. ಬಹು ಸುಲಭ. ಆದರೆ ಕೇವಲ ಮಣ್ಣನ್ನು ಚಿನ್ನವಾಗಿ ಬದಲಾಯಿಸಲು ಸುಲಭವಿಲ್ಲ. ಅದಕ್ಕೆ ಬಹು ಅಮೂಲ್ಯವಾದ ಒಂದು ವಸ್ತು ಬೇಕಾಗುತ್ತದೆ” ಎಂದ ಬಿನೋಯ್ ತಂದೆ.
“”ಹೇಳಿ ಮಾವ. ಅದು ಯಾವ ವಸ್ತುವಾದರೂ ಸಂಪಾದಿಸಿ ತರಬಲ್ಲೆ. ನನಗೆ ತುಂಬ ಚಿನ್ನ ತಯಾರಿಸಿ ಸುಖದಿಂದ ಜೀವನ ನಡೆಸಬೇಕು ಎನ್ನುವ ದೊಡ್ಡ ಆಸೆಯಿದೆ” ಸುನೋಯ್ ಕಣ್ಣರಳಿಸಿ ಹೇಳಿದ. “”ಆ ವಸ್ತುವನ್ನು ಎಲ್ಲಿಂದಲೋ ಹುಡುಕಿ ತರಬೇಕೆಂದರೆ ಸಿಗುವುದಿಲ್ಲ. ನೀನು ಇಲ್ಲಿಯೇ ತಯಾರಿಸಬೇಕಾಗುತ್ತದೆ. ಬಲಿತ ಬಾಳೆಯೆಲೆಗಳ ಕೆಳಗೆ ಬೂದಿಯಂತಹ ಪದಾರ್ಥ ಸಿಗುತ್ತದೆ. ಅದನ್ನು ಸಂಗ್ರಹಿಸಿ ಮಣ್ಣಿನೊಂದಿಗೆ ಬೆರೆಸಿ ಗೋಣಿಚೀಲ ಮುಚ್ಚಿಡಬೇಕು. ರಾತ್ರೆ ಬೆಳಗಾಗುವಾಗ ಅಷ್ಟು ಮಣ್ಣು ಚಿನ್ನವಾಗಿರುತ್ತದೆ” ಬಿನೋಯ್ ತಂದೆ ವಿವರಿಸಿದ.
“ಬಾಳೆಯೆಲೆಯ ಕೆಳಗಿನ ಬೂದಿಯೆ? ಅಷ್ಟು ಬೂದಿಯನ್ನು ಎಲ್ಲಿಂದ ಸಂಪಾದಿಸಲಿ?” ಎಂದು ಸುನೋಯ್ ಚಿಂತೆಯಿಂದ ಕೇಳಿದ. “”ಅದೇನೂ ಕಷ್ಟವಿಲ್ಲ. ನಿನ್ನ ಮನೆಯ ಮುಂದಿರುವ ಹೊಲದಲ್ಲಿ ಹೊಂಡಗಳನ್ನು ತೆಗೆದು ಸಾವಿರಾರು ಬಾಳೆಯ ಕಂದುಗಳನ್ನು ನೆಡು. ಬಾಳೆಗಿಡ ಬಲಿತಾಗ ಅದರ ಎಲೆಗಳ ಕೆಳಗೆ ಈ ಬೂದಿ ಹೆಪ್ಪುಗಟ್ಟುತ್ತದೆ. ಜೋಪಾನವಾಗಿ ಅದನ್ನು ಸಂಗ್ರಹಿಸಿದರೆ ಚಿನ್ನ ಸುಲಭವಾಗಿ ಕೈಸೇರುತ್ತದೆ. ಆದರೆ ಬಾಳೆಗಳಿಗೆ ನೀರು ಹೊಯಿದು, ಗೊಬ್ಬರ ಹಾಕಿ ಸಲಹದಿದ್ದರೆ ಬೇಕಾದಷ್ಟು ಬೂದಿ ಸಿಗುವುದಿಲ್ಲ. ಇದಕ್ಕಾಗಿ ಒಂದು ವರ್ಷ ದುಡಿದರೆ ಸಾಕು. ನಿನ್ನ ಕನಸು ಈಡೇರುತ್ತದೆ, ಚಿನ್ನದ ಒಡೆಯನಾಗುವೆ” ಎಂದು ಹೇಳಿದ ಅವನ ಮಾವ.
“”ಇಷ್ಟೇ ತಾನೆ? ಬಾಳೆ ಬೆಳೆದರಾಯಿತು, ಒಂದು ವರ್ಷ ಕಾದರಾಯಿತು’ ಎಂದು ಹೇಳಿ ಸುನೋಯ್ ಉತ್ಸಾಹದಿಂದ ಹೊಲದಲ್ಲಿ ದುಡಿಯಲು ಸಿದ್ಧನಾದ. ಹೊಂಡ ತೆಗೆದು ಬಾಳೆಗಿಡಗಳನ್ನು ನೆಟ್ಟು ಶ್ರದ್ಧೆಯಿಂದ ಸಾಕಿದ. ಅವನ ದುಡಿಮೆಗೆ ಭೂಮಿಯೂ ಒಲಿಯಿತು. ಬಾಳೆಗಳು ಬೆಳೆದು ಗೊನೆ ಹಾಕಿದವು. ಸಾವಿರಾರು ಗೊನೆಗಳನ್ನು ಹೊತ್ತು ಬಾಗಿದವು. ಆ ಹೊತ್ತಿಗೆ ಅವನ ಮಾವ ಮತ್ತೆ ಅಳಿಯನನ್ನು ನೋಡಲು ಬಂದ. ಗೊನೆಗಳನ್ನು ಕಂಡು ಅವನಿಗೆ ತುಂಬ ಸಂತಸವಾಯಿತು. “”ಭೇಷ್ ಸುನೋಯ್. ನಿನ್ನ ಕನಸು ಸುಲಭವಾಗಿ ನೆರವೇರುವ ಕಾಲ ಸನ್ನಿಹಿತವಾಗಿದೆ. ಮಣ್ಣಿನಿಂದ ಧಾರಾಳವಾಗಿ ಚಿನ್ನ ತಯಾರಿಸುವ ಕೌಶಲ ಕೈಸೇರಲಿದೆ” ಎಂದು ಹೇಳಿದ.
ಸುನೋಯ್ ಆನಂದದಿಂದ ಕುಣಿದಾಡಿದ. “”ಹಾಗಿದ್ದರೆ ಎಲೆಗಳಿಂದ ಬೂದಿಯನ್ನು ಸಂಗ್ರಹಿಸಬಹುದಲ್ಲವೆ?” ಎಂದು ಕೇಳಿದ. “”ನಿಲ್ಲು, ಗೊನೆಗಳನ್ನು ಜೋಪಾನವಾಗಿ ಕಡಿಯುತ್ತೇನೆ. ಆಗ ಎಲೆಗಳಿಂದ ಬೂದಿ ಸಂಗ್ರಹಿಸುವ ಕೆಲಸ ಮಾಡಲು ನಿನಗೂ ಸಲೀಸಾಗುತ್ತದೆ” ಎಂದು ಹೇಳಿ ಅವನ ಮಾವ ಗೊನೆಗಳನ್ನು ಕಡಿದು ಪಟ್ಟಣಕ್ಕೆ ಸಾಗಿಸಿದ. ಆ ರಾಜ್ಯದ ರಾಜನ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಖಾದ್ಯಗಳನ್ನು ತಯಾರಿಸಲು ಗೊನೆಗಳು ಬೇಕಾಗಿದ್ದವು. ರಾಜ ಭಟರು ಗೊನೆಗಳನ್ನು ಕೊಂಡು ಪ್ರತಿಯಾಗಿ ಚಿನ್ನದ ಗಟ್ಟಿಗಳನ್ನು ಕೊಟ್ಟರು.
ಕತ್ತಲಾಯಿತು. ಸುನೋಯ್ ಎಲೆಗಳಿಂದ ಸಂಗ್ರಹಿಸಿದ ಬೂದಿಯನ್ನು ಅವನ ಮಾವ ಮಣ್ಣಿನೊಂದಿಗೆ ಬೆರೆಸಿದ. ಗೋಣಿಚೀಲವನ್ನು ಮುಚ್ಚಿದ. “”ಮಾವ, ನಾನಿನ್ನು ಮಲಗಿಕೊಳ್ಳಬಹುದೆ? ಬೆಳಗಾಗುವಾಗ ಮಣ್ಣು ಚಿನ್ನವಾಗಿ ಬದಲಾಗುತ್ತದೆಯೆ?” ಎಂದು ಸುನೋಯ್ ಕೇಳಿದ. “”ಹೌದು, ನೀನು ನಿಶ್ಚಿಂತವಾಗಿ ಮಲಗಿಕೋ. ಬೆಳಗಾಗುವಾಗ ಎದ್ದು ನೋಡು, ನಿನ್ನ ಕನಸು ನನಸಾಗಿರುತ್ತದೆ” ಎಂದು ಹೇಳಿದ ಮಾವ. ಅಳಿಯ ನಿದ್ರೆ ಹೋದ ಕೂಡಲೇ ಅವನು ಮಣ್ಣನ್ನು ದೂರ ಎಸೆದುಬಂದು ಅಲ್ಲಿ ಚಿನ್ನದ ಗಟ್ಟಿಗಳನ್ನಿರಿಸಿದ.
ಬೆಳಗಾಯಿತು. ಸುನೋಯ್ ಚಿನ್ನದ ಗಟ್ಟಿಗಳನ್ನು ಕಂಡು ಹಿರಿಹಿರಿ ಹಿಗ್ಗಿದ. ತವರಿಗೆ ಹೋದ ಬಿನೋಯ್ ಕೂಡ ಗಂಡನ ಮನೆಗೆ ಬಂದಳು. ಮಣ್ಣನ್ನು ಚಿನ್ನ ಮಾಡಿದ ಗಂಡನ ಬುದ್ಧಿವಂತಿಕೆ ಕಂಡು ಹೆಮ್ಮೆಪಟ್ಟಳು. ಅವರ ಬಳಿ ಸತ್ಯ ಸಂಗತಿ ಹೇಳದೆ ಅವಳ ತಂದೆ ತನ್ನ ಮನೆಗೆ ಹಿಂತಿರುಗಿದ.
ಪ. ರಾಮಕೃಷ್ಣ ಶಾಸ್ತ್ರಿ