ಶ್ರೀನಗರ : ಹಿಜ್‌ಬುಲ್ ಮುಜಾಹಿದೀನ್ ಕಮಾಂಡರ್, ಉಗ್ರ ಬುರ್ಹಾನ್ ವಾನಿಯ ಹತ್ಯೆಗೆ ವರ್ಷ ತುಂಬಿದ ಇಂದು ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ. ಕಣಿವೆಯಲ್ಲಿ ಲೀಸ್ ಲೈನ್‌ನಲ್ಲಿ ನಡೆಯುವ ಸಾಮಾಜಿಕ ಜಾಲ ತಾಣಗಳನ್ನು ಬ್ಲಾಕ್ ಮಾಡಲಾಗಿದೆ.
ಬುರ್ಹಾನ್ ವಾನಿಯನ್ನು 2016ರ ಜುಲೈ 8ರಂದು ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ನಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತು. ಅಂದಿನಿಂದ ಇಂದಿನ ವರೆಗೂ ಸಾಗಿರುವ ಹಿಂಸಾತ್ಮಕ ಪ್ರತಿಭಟನೆಗೆ ನೂರಕ್ಕೂ ಅಧಿಕ ಮಂದಿ ಬಲಿಯಾಗಿದ್ದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬುರ್ಹಾನ್ ವಾನಿ ಹತ್ಯೆಗೆ ವರ್ಷ ತುಂಬಿದ ದಿನವಾದ ಇಂದು ಕಾಶ್ಮೀರ ಕಣಿವೆಯ ಎಲ್ಲೆಡೆ “ಗೋ ಇಂಡಿಯಾ, ಗೋ ಬ್ಯಾಕ್’ ಹಾಗೂ “ವೀ ವಾಂಟ್ ಫ್ರೀಡಂ’ ಎಂಬ ಬರಹಗಳಿರುವ ಪೋಸ್ಟರ್ ಗಳು ಕಾಣಿಸಿಕೊಂಡಿವೆ.
ಯಾವುದೇ ರೀತಿಯ ವದಂತಿಗಳು, ಪ್ರಚೋದನಕಾರಿ ಕೃತ್ಯಗಳು ನಡೆಯದಂತೆ ಅಧಿಕಾರಿಗಳು ನಿನ್ನೆ ಗುರುವಾರ ರಾತ್ರಿ 10 ಗಂಟೆಯಿಂದಲೇ ಇಂಟರ್‌ನೆಟ್ ಸೇವೆಯನ್ನು ಬಂದ್ ಮಾಡಿದ್ದಾರೆ.
ಕಾಶ್ಮೀರ ಪರಿಸ್ಥಿತಿಯ ಬಗ್ಗೆ ನಿಕಟ ದೃಷ್ಟಿ ಇರಿಸಿರುವ ಕೇಂದ್ರ ಸರಕಾರ, ಯಾವುದೇ ಅಹಿತಕರ ಪರಿಸ್ಥಿತಿ ತಲೆದೋರುವುದನ್ನು ತಡೆಯಲು 21,000 ಹೆಚ್ಚುವರಿ ಭದ್ರತಾ ಸಿಬಂದಿಗಳನ್ನು ನಿಯೋಜಿಸಿದೆ.