Advertisement

ಬಂಟರ ಸಂಘ ಮುಂಬಯಿ: ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳ ಪ್ರದಾನ

04:35 PM Apr 17, 2018 | |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ವತಿಯಿಂದ  ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಬಂಟರ ದಿನಾಚರಣೆಯು ಎ. 14ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಿನವಿಡೀ ನಡೆಯಿತು. 

Advertisement

ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಬಿಸುಪರ್ಬ ಮತ್ತು ಬಂಟರ ದಿನಾಚರಣೆ ಸಮಾರಂಭದಲ್ಲಿ ಸಂಘವು ವಾರ್ಷಿಕವಾಗಿ ಕೊಡಮಾಡುವ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.

ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕಣಂಜಾರು ಆನಂದ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ, ಅರ್ಥದಾರಿ ಕೆ.ಕೆ. ಶೆಟ್ಟಿ ಇವರಿಗೆ ದಿ| ಆನಂದ ಶೆಟ್ಟಿಯವರ ಕುಟುಂಬಿಕರಾದ ಸುಧಾಕರ ಎಸ್‌. ಹೆಗ್ಡೆ, ರಂಜನಿ ಸುಧಾಕರ ಹೆಗ್ಡೆ, ಉದಯ್‌ ಶೆಟ್ಟಿ ಇವರು ಪ್ರಶಸ್ತಿಯನ್ನು ಪ್ರದಾನಿಸಿದರು. ಸಮ್ಮಾನ ಪತ್ರವನ್ನು ಸಂಘದ ಯಕ್ಷಗಾನ ಸಮಿತಿಯ ಸಂಚಾಲಕ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ವಾಚಿಸಿದರು.

ಸಂಘದ ಮಹಿಳಾ ವಿಭಾಗದ ಸದಸ್ಯೆ ಜ್ಯೋತಿ ಆರ್‌.ಎನ್‌. ಶೆಟ್ಟಿ ಮಹಿಳಾ ವಿಭಾಗದ ಮೂಲಕ ಪ್ರತಿವರ್ಷ ನೀಡುವ ಅತ್ಯುತ್ತಮ ಮಹಿಳಾ ಸಾಧಕಿ ಪ್ರೇಮಾ ನಾರಾಯಣ ರೈ ಪ್ರಶಸ್ತಿಯನ್ನು ಈ ಬಾರಿ ಮುಂಬಯಿಯ ಪ್ರತಿಭಾನ್ವಿತ ರಂಗಕಲಾವಿದೆ, ಸಾಧಕಿ ಸುಧಾ ಶೆಟ್ಟಿ ಅವರಿಗೆ ಜ್ಯೋತಿ ಆರ್‌.ಎನ್‌. ಶೆಟ್ಟಿ, ರಂಜನಿ ಸುಧಾಕರ ಹೆಗ್ಡೆ, ಡಾ| ಸುನೀತಾ ಎಂ. ಶೆಟ್ಟಿ ಪ್ರಶಸ್ತಿಯನ್ನು ಪ್ರದಾನಿಸಿದರು. ಸಮ್ಮಾನ ಪತ್ರವನ್ನು ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ ವಾಚಿಸಿದರು.

ಪ್ರತಿಷ್ಠಿತ ರಾಧಾಬಾಯಿ ಟಿ. ಭಂಡಾರಿ ಸ್ಮರಣಾರ್ಥ ಪ್ರಶಸ್ತಿಯನ್ನು ಈ ಬಾರಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಸಮಾಜ ಸೇವಕಿ ಲತಾ ಪ್ರಭಾಕರ ಶೆಟ್ಟಿ ಅವರಿಗೆ ಪ್ರಶಸ್ತಿ ಆಯ್ಕೆ ಸಮಿತಿಯ ಕಾರ್ಯಾಧ್ಯಕ್ಷ, ಹಿರಿಯ ಮುತ್ಸದ್ಧಿ ಎಂ.ಡಿ. ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಭಂಡಾರಿ ಕುಟುಂಬದ ಲತಾ ಪಿ. ಭಂಡಾರಿ ಹಾಗೂ ಕುಟುಂಬಸ್ಥರು ಪ್ರದಾನಿಸಿದರು. ಪ್ರಶಸ್ತಿ ಪತ್ರವನ್ನು ಮಹಿಳಾ ವಿಭಾಗದ ಕೋಶಾಧಿಕಾರಿ ಆಶಾ ವಿ. ರೈ ವಾಚಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ, ಕಿರುಕಾಣಿಕೆಯನ್ನು ಗೌರವಿಸಲಾಯಿತು.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಕೆ. ಶೆಟ್ಟಿ ಇವರು, ದಿ| ಕಣಂಜಾರು ಆನಂದ ಶೆಟ್ಟಿ ಅವರೊಂದಿಗಿನ ಸುಮಾರು 50 ವರ್ಷಗಳ ಸಂಬಂಧವನ್ನು ನೆನಪಿಸಿ ಕೊಂಡರು. ಯಕ್ಷಗಾನದ ಬಗ್ಗೆ ಅವರಿಗಿದ್ದ ಅಗಾಧ ಅನುಭವ, ಪ್ರತಿಭೆ, ಕಲಾವಿದರ ಬಗ್ಗೆ ಇದ್ದ ದಯೆ, ಕರುಣೆಯನ್ನು ಶ್ಲಾಘಿಸಿದರು. ಇದುವರೆಗೆ 11 ಮಂದಿ ಯಕ್ಷಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಬಾರಿ ಸಂಬಂಧಿಕನಾದ ನಾನೇ ಪಡೆಯಬೇಕು ಎಂಬುವುದು ಸುಧಾಕರ ಹೆಗ್ಡೆ ಯವರ ಇಚ್ಛೆಯಾಗಿತ್ತು. ಅವರ ಇಚ್ಛೆಯನ್ನು ವಿನಮ್ರತೆಯಿಂದ ಒಪ್ಪಿಕೊಂಡು ಪ್ರಶಸ್ತಿ ಸ್ವೀಕರಿಸ ಬೇಕಾಯಿತು. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯು ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವುದು ಅಭಿಮಾನದ ವಿಷಯವಾಗಿದೆ ಎಂದು ನುಡಿದರು.

ಪ್ರಶಸ್ತಿ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ಎಸ್‌. ಹೆಗ್ಡೆ ಅವರು ಮಾತನಾಡಿ, ಬಂಟರ ಸಂಘವು  ಕಳೆದ ಹಲವಾರು ವರ್ಷಗಳಿಂದ ಪ್ರಶಸ್ತಿಯನ್ನು ಪ್ರದಾನಿಸಿ ಸಾಧಕರಿಗೆ ಉತ್ತೇಜನವನ್ನು ನೀಡುತ್ತಿದೆ. ಇದು ನಿರಂತರವಾಗಿ ನಡೆದಾಗ ಯುವಪೀಳಿಗೆಗೆ ಇದು ಪ್ರೇರಣೆಯಾಗುತ್ತದೆ. ದಿ| ಆನಂದ ಶೆಟ್ಟಿ ಇವರ ಪ್ರೀತಿ, ಭಕ್ತಿಗೆ ಮಾರು ಹೋಗ ಕೆ.ಕೆ. ಶೆಟ್ಟಿ ಅವರಿಗೆ ಈ ಪ್ರಶಸ್ತಿ ಸಂದಿರುವುದು ಅಭಿಮಾನದ ಸಂಗತಿಯಾಗಿದೆ. ಇಂದು ಸಂಘದ ವಿವಿಧ ಪ್ರಶಸ್ತಿಗಳನ್ನು ಪಡೆದು ಎಲ್ಲರಿಗೂ ಅಭಿನಂದನೆಗಳು ಎಂದರು.
ಪ್ರೇಮಾ ನಾರಾಯಣ ರೈ ಪ್ರಶಸ್ತಿ ಸ್ವೀಕರಿಸಿದ  ರಂಗಕಲಾವಿದೆ, ಸಾಧಕಿ ಸುಧಾ ಶೆಟ್ಟಿ ಇವರು ಮಾತನಾಡಿ, ನನಗೆ ಯೋಗ್ಯತೆ ಮತ್ತು ಅರ್ಹತೆ ಇದೆ ಎಂಬುವುದನ್ನು ಬಂಟರ ಸಂಘವು ಗುರುತಿಸಿರುವುದಕ್ಕೆ ಚಿರಋಣಿ. ನನ್ನಿಂದ ಹೆಚ್ಚಿನ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ಸಲ್ಲಬೇಕು. ಜಗತ್ತಿನಲ್ಲಿ ದೇವರಿದ್ದರೆ ಅದು ನಮ್ಮ ಅಮ್ಮ. ನಮ್ಮ ಅಮ್ಮನನ್ನು ಸದಾ ಪೂಜಿಸಬೇಕು. ಬಂಟರ ಸಂಘದ ಕೀರ್ತಿ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ರಾಧಾಬಾಯಿ ಟಿ. ಭಂಡಾರಿ ಸ್ಮರಣಾರ್ಥ ಪ್ರಶಸ್ತಿ ಪಡೆದ  ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಸಮಾಜ ಸೇವಕಿ ಲತಾ ಪ್ರಭಾಕರ ಶೆಟ್ಟಿ ಇವರು ಮಾತನಾಡಿ, ಆಯ್ಕೆ ಸಮಿತಿಯು ನನ್ನನ್ನು ಗುರುತಿಸಿರುವುದು ಸಂತೋಷ ತಂದಿದೆ. ಸಮಿತಿಯ ಎಲ್ಲರಿಗೂ ಕೃತಜ್ಞತೆಗಳು. ನನ್ನ ಜೀವನದಲ್ಲಿಂದು ಯೋಗ ಮತ್ತು ಭಾಗ್ಯ ಒಂದಾಗಿ ಬಂದಿದೆ. ಬಂಟರ ಸಂಘದಲ್ಲಿ ಶಾಶ್ವತ ಹೆಸರಾಗಿರುವ ಕೊಡುಗೈದಾನಿ ರಾಧಾಬಾಯಿ ಟಿ. ಭಂಡಾರಿ ಹೆಸರಿನಲ್ಲಿ ನನಗೆ ನೀಡಿರುವ ಪ್ರಶಸ್ತಿಯಿಂದ ಸಂತೋಷವಾಗುತ್ತಿದೆ. ಬಯಸದೇ ಬಂದ ಭಾಗ್ಯವಿದು. ಅದನ್ನು ಜೀವನ ಪರ್ಯಂತ ಮರೆಯಲಾರೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಗೌರವ ಅತಿಥಿಯಾಗಿ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ, ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿ.ಎ. ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಅತಿಥಿ-ಗಣ್ಯರುಗಳನ್ನು ಸ್ವಾಗತಿಸಿದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿ.ಎ. ಸಂಜೀವ ಶೆಟ್ಟಿ ವಂದಿಸಿದರು.

ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next