Advertisement

ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ ಆರೋಗ್ಯ ಶಿಬಿರ

05:05 PM Mar 30, 2017 | Team Udayavani |

ಡೊಂಬಿವಲಿ: ಸಂಘದ ಪ್ರತಿಯೊಂದು ಸಮಾರಂಭಗಳಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಬೆಂಬಲ, ಪ್ರೋತ್ಸಾಹವನ್ನು ಕಂಡಾಗ ಬಹಳಷ್ಟು ಸಂತೋಷವಾಗುತ್ತಿದೆ. ಬಂಟರ ಸಂಘವು ಪ್ರತಿವರ್ಷ ಸಮಾಜ ಬಾಂಧವರ ಆರ್ಥಿಕ ನೆರವಿಗಾಗಿ ಕೋಟ್ಯಂತರ ರೂ. ಗಳನ್ನು ವ್ಯಯಿಸುತ್ತಿದೆ. ಅಲ್ಲದೆ ಇತ್ತೀಚೆಗೆ ಮಹೇಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಆರೋಗ್ಯ ಭಾಗ್ಯ, ಕಂಕಣ ಭಾಗ್ಯ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರ ಪ್ರಯೋಜನವನ್ನು ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಸಮಾಜ ಬಾಂಧವರು ಶಿಕ್ಷಣ ಹಾಗೂ ಆರೋಗ್ಯದೆಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಇದರಿಂದ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ನುಡಿದರು.

Advertisement

ಮಾ. 26ರಂದು ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರ ಮತ್ತು ಆರ್ಥಿಕ ನೆರವು ವಿತರಣೆಯ ಅರ್ಜಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಕಂಡಾಗ ಅಭಿಮಾನವಾಗುತ್ತಿದೆ. ಸಮಾಜ ಬಾಂಧವರ ಆರೋಗ್ಯದ ದೃಷ್ಟಿಯಿಂದ ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಅಭಿನಂದನೀಯ. ಸದಾ ಚಟುವಟಿಕೆಯಿಂದ ಕೂಡಿರುವ ಸಮಿತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ಅದಕ್ಕೆ ಬೇಕಾಗುವ ಸಹಕಾರ, ಸಂಘದಿಂದ ಸದಾ ದೊರೆಯಲಿದೆ ಎಂದರು.

ಸಂಘದ  ಜೊತೆ ಕೋಶಾಧಿಕಾರಿ ಮಹೇಶ್‌ ಶೆಟ್ಟಿ ಅವರು ಮಾತನಾಡಿ, ಸಮಾಜ ಬಾಂಧವರಿಗೆ ಶಿಕ್ಷಣ, ಆರೋಗ್ಯ ಹಾಗೂ ಸಮಾಜದ ಆರ್ಥಿಕ ಹಿಂದುಳಿದವರಿಗೆ ಮದುವೆಗೆ ಸಹಾಯವಾಗುವ ನಿಟ್ಟಿನಲ್ಲಿ ಸಂಘವು ಒಂದು ಯೋಜನೆಯನ್ನು ತಯಾರಿಸಿದೆ. ನಿಮ್ಮ ಏನೇ ಸಮಸ್ಯೆಗಳಿದ್ದರೂ ಅರ್ಜಿಯ ಮುಖಾಂತರ ಸಂಘಕ್ಕೆ ಮುಟ್ಟಿಸಿದಾಗ ಅದಕ್ಕೆ ಸೂಕ್ತ ನಿರ್ಣಯವನ್ನು ಸಂಘವು ತೆಗೆದುಕೊಳ್ಳಲಾಗುವುದು. ಸಮಾಜ ಬಾಂಧವರ ಎಲ್ಲಾ ಸಮಸ್ಯೆಗಳಿಗೆ ಪ್ರಾದೇಶಿಕ ಸಮಿತಿಗಳು ಸ್ಪಂದಿಸಲಿವೆ ಎಂದರು.

ಶಿಬಿರದ ನೇತೃತ್ವ ವಹಿಸಿದ್ದ ಡೊಂಬಿವಲಿ  ಪ್ರಾದೇಶಿಕ ಸಮಿತಿಯ ಡಾ| ವಿ. ಎಂ. ಶೆಟ್ಟಿ ಅವರು ಮಾತನಾಡಿ, ಸಮಾಜ ಬಾಂಧವರು  ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಡೊಂಬಿವಲಿ ಪರಿಸರದಲ್ಲಿ ಉತ್ತಮ ವೈದ್ಯರಿದ್ದು, ತಮ್ಮ ಸಮಸ್ಯೆಗಳು ಏನಿದ್ದರು ಕೂಡಾ ಅದನ್ನು ಮುಲಾಜಿಲ್ಲದೆ ಹೇಳಿ ಬಗೆಹರಿಸಿಕೊಳ್ಳಲಾಗುವುದು. ಇಂದಿನ ಶಿಬಿರದ ಪ್ರಯೋಜನವನ್ನು ಸಮಾಜ ಬಾಂಧವರು ಪಡೆದುಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವುದು ಅಭಿನಂದನೀಯ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ನುಡಿದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ವತಿಯಿಂದ ನಡೆಯುವ ಶೈಕ್ಷಣಿಕ ಕಾರ್ಯದ  ಮಾಹಿತಿಯನ್ನು ಮನೋಜ್‌ ಭಂಡಾರಿ ಅವರು ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರುಗಳಾದ ಸುನಂದಾ ಶೆಟ್ಟಿ, ಯೋಗಿನಿ ಶೆಟ್ಟಿ ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ವೇದಿಕೆಯಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಾದ ಗಣೇಶ್‌ ವಿ. ಶೆಟ್ಟಿ ಐಕಳ, ವೇಣುಗೋಪಾಲ ರೈ, ಆನಂದ ಶೆಟ್ಟಿ, ಹರಿಣಿ ಶೆಟ್ಟಿ, ಮಹೇಶ್‌ ಶೆಟ್ಟಿ, ಅರುಣ್‌ ಶೆಟ್ಟಿ ಪಡುಕೂಡೂರು, ಕರುಣಾಕರ ಶೆಟ್ಟಿ ಕಲ್ಲಡ್ಕ, ಡಾ| ಅನಿಲ್‌ ಹೆರೂರು, ಡಾ| ಅನಘಾ ಹೇರೂರು, ಡಾ| ವಿಲಾಸ್‌ ಲೋಧ, ಡಾ| ಉತ್ಕರ್ಷ್‌ ಬಂಗಾರೆ ಉಪಸ್ಥಿತರಿದ್ದರು. ಆನಂದ ಶೆಟ್ಟಿ ಮತ್ತು ಶೀತಲ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಆನಂದ ಶೆಟ್ಟಿ ವಂದಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದರು. ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸಮಾಜ ಕಲ್ಯಾಣ ಸಮಿತಿಯು ಸಮಾಜ ಬಾಂಧವರ ಕಲ್ಯಾಣಕ್ಕಾಗಿ ಹುಟ್ಟಿಕೊಂಡಿದ್ದು, ಶಿಕ್ಷಣ ಮತ್ತು ಆರೋಗ್ಯದ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ನಾವೆಲ್ಲರೂ ಇಂದಿನ ಬಿಡುವಿಲ್ಲದ ಬದುಕಿನಲ್ಲಿ ಆರೋಗ್ಯದ ಕಡೆಗೆ ಬಹಳಷ್ಟು ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಡಾ| ವಿ. ಎಂ. ಶೆಟ್ಟಿ ಅವರ ಮುಂದಾಳತ್ವದಲ್ಲಿ ವೈದ್ಯರ ಉತ್ತಮ ತಂಡದೊಂದಿಗೆ ಇಂದಿನ ಶಿಬಿರವನ್ನು ಆಯೋಜಿಸಲಾಗಿದೆ. ಇದರ ಲಾಭವನ್ನು ಸಮಾಜ ಬಾಂಧವರು ಎಲ್ಲರು ಪಡೆದುಕೊಳ್ಳಬೇಕು. ನಾವೆಲ್ಲರು ಒಮ್ಮತ, ಒಗ್ಗಟ್ಟಿನಿಂದ ಸಮಿತಿಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣ 
– ಇಂದ್ರಾಳಿ ದಿವಾಕರ ಶೆಟ್ಟಿ  (ಸಮನ್ವಯಕರು : ಬಂಟರ ಸಂಘ ಮಧ್ಯ ಪ್ರಾದೇಶಿಕ ವಲಯ).

ಪ್ರತಿ ಮನೆಯಲ್ಲೂ ಮಹಿಳೆಯರು ಎಲ್ಲಾ ಸದಸ್ಯರ ಆರೋಗ್ಯದ ಮೇಲೆ ಗಮನ ನೀಡುವುದರೊಂದಿಗೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರ ಬಗ್ಗೆ ಎಲ್ಲರು ಎಚ್ಚರಿಕೆ ವಹಿಸಬೇಕು. ಇಂತಹ ಶಿಬಿರಗಳಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಡೊಂಬಿವಲಿ ಸಮಿತಿಯ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ  
  – ಲತಾ ಜಯರಾಮ ಶೆಟ್ಟಿ (ಕಾರ್ಯಾಧ್ಯಕ್ಷೆ: ಬಂಟರ ಸಂಘ ಮಹಿಳಾ ವಿಭಾಗ).

Advertisement

Udayavani is now on Telegram. Click here to join our channel and stay updated with the latest news.

Next