Advertisement

ಏಕದಿನ ಪಂದ್ಯ: ಬುಮ್ರಾ ಬೊಂಬಾಟ್‌; ಭಾರತಕ್ಕೆ ಜಾಕ್‌ಪಾಟ್‌

11:45 PM Jul 12, 2022 | Team Udayavani |

ಲಂಡನ್‌: ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಅವರ ಬೊಂಬಾಟ್‌ ಬೌಲಿಂಗ್‌ ಸಾಹಸದಿಂದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು 10 ವಿಕೆಟ್‌ಗಳಿಂದ ಹೀನಾಯವಾಗಿ ಮಣಿಸಿದೆ. ಬುಮ್ರಾ 19 ರನ್ನಿಗೆ 6 ವಿಕೆಟ್‌ ಉಡಾಯಿಸಿ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆಗೈದರು.

Advertisement

“ಕೆನ್ನಿಂಗ್ಟನ್‌ ಓವಲ್‌’ನಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡಿತು. ಇಂಗ್ಲೆಂಡ್‌ 25.2 ಓವರ್‌ಗಳಲ್ಲಿ 110 ರನ್ನಿಗೆ ಕುಸಿಯಿತು. ಇದು ಭಾರತದ ವಿರುದ್ಧ ಇಂಗ್ಲೆಂಡ್‌ ದಾಖಲಿಸಿದ ಕನಿಷ್ಠ ಮೊತ್ತ. ಜವಾಬಿತ್ತ ಭಾರತ 18.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 114 ರನ್‌ ಬಾರಿಸಿತು.

ಬುಮ್ರಾ ಉಡಾಯಿಸಿದ 6 ವಿಕೆಟ್‌ಗಳಲ್ಲಿ ಐವರು ಬೌಲ್ಡ್‌ ಆಗಿ ಮರಳಿದರು. ಮೊಹಮ್ಮದ್‌ ಶಮಿ 3 ವಿಕೆಟ್‌ ಕೆಡವಿದರು. ಮತ್ತೊಂದು ವಿಕೆಟ್‌ ಪ್ರಸಿದ್ಧ್ ಕೃಷ್ಣ ಪಾಲಾಯಿತು. ಇಂಗ್ಲೆಂಡ್‌ ಸರದಿಯಲ್ಲಿ 4 ಮಂದಿ ರನ್‌ ಖಾತೆ ತೆರೆಯಲು ವಿಫ‌ಲರಾದರು. 30 ರನ್‌ ಮಾಡಿದ ಜಾಸ್‌ ಬಟ್ಲರ್‌ ಅವರದೇ ಹೆಚ್ಚಿನ ಗಳಿಕೆ.

ನೋಲಾಸ್‌ ವಿಕ್ಟರಿ
ಚೇಸಿಂಗ್‌ ವೇಳೆ ನಾಯಕ ರೋಹಿತ್‌ ಶರ್ಮ-ಶಿಖರ್‌ ಧವನ್‌ ಇಬ್ಬರೇ ಸೇರಿಕೊಂಡು ಇಂಗ್ಲೆಂಡ್‌ ಗುರಿಯನ್ನು ಮೀರಿನಿಂತರು. ಭಾರತಕ್ಕೆ 10 ವಿಕೆಟ್‌ ಕೆಡವಲು ಸಾಧ್ಯವಾದರೆ, ಇಂಗ್ಲೆಂಡಿಗೆ ಒಂದೂ ವಿಕೆಟ್‌ ಉರುಳಿಸಲು ಸಾಧ್ಯವಾಗದಿದ್ದುದೊಂದು ದುರಂತ!

ರೋಹಿತ್‌ 58 ಎಸೆತಗಳಿಂದ 76 ರನ್‌ ಬಾರಿಸಿದರು. ಇದರಲ್ಲಿ 5 ಫೋರ್‌, 6 ಸಿಕ್ಸರ್‌ ಸೇರಿತ್ತು. ಗೆಲುವಿನ ಸಿಕ್ಸರ್‌ ಬಾರಿಸಿ ಏಕದಿನದಲ್ಲಿ 250 ಸಿಕ್ಸರ್‌ ಸಿಡಿಸಿದ ಸಾಧನೆಗೈದರು. ಧವನ್‌ ಗಳಿಕೆ 54 ಎಸೆತಗಳಿಂದ 31 ರನ್‌ (4 ಬೌಂಡರಿ). ರೋಹಿತ್‌ ಇದು ಧವನ್‌-ರೋಹಿತ್‌ ಜೋಡಿಯ 18ನೇ ಶತಕದ ಜತೆಯಾಟ.

Advertisement

ಬುಮ್ರಾ ಘಾತಕ ಸ್ಪೆಲ್‌
ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಅವರ ಭಯಾನಕ ಬೌಲಿಂಗ್‌ ದಾಳಿಗೆ ಇಂಗ್ಲೆಂಡ್‌ ತತ್ತರಿಸಿತು. 8 ಓವರ್‌ ಮುಗಿಯುವ ಮೊದಲೇ ಆಂಗ್ಲರ 5 ವಿಕೆಟ್‌ಗಳು ಉದುರಿ ಹೋಗಿದ್ದವು. ಇದರಲ್ಲಿ 4 ವಿಕೆಟ್‌ ಬುಮ್ರಾ ಬುಟ್ಟಿಗೆ ಬಿದ್ದಿತ್ತು. ಅಗ್ರ ಕ್ರಮಾಂಕದ ನಾಲ್ವರು ರನ್‌ ಖಾತೆ ತೆರೆಯುವಲ್ಲಿ ವಿಫ‌ಲರಾಗಿದ್ದರು. ಇವರೆಂದರೆ ಜೇಸನ್‌ ರಾಯ್‌, ಜೋ ರೂಟ್‌, ಬೆನ್‌ ಸ್ಟೋಕ್ಸ್‌ ಮತ್ತು ಲಿಯಮ್‌ ಲಿವಿಂಗ್‌ಸ್ಟೋನ್‌.

ಬುಮ್ರಾ ತಮ್ಮ ಮೊದಲ ಓವರ್‌ನಲ್ಲೇ 2 ವಿಕೆಟ್‌ ಬೇಟೆಯಾಡಿ ಭಾರತಕ್ಕೆ ಭರ್ಜರಿ ಯಶಸ್ಸು ತಂದಿತ್ತರು. ಅದು ಪಂದ್ಯದ ದ್ವಿತೀಯ ಓವರ್‌ ಆಗಿತ್ತು. 4ನೇ ಎಸೆತದಲ್ಲಿ ರಾಯ್‌ ಬೌಲ್ಡ್‌ ಆದರೆ, ಅಂತಿಮ ಎಸೆತದಲ್ಲಿ ರೂಟ್‌ ಕೀಪರ್‌ ಪಂತ್‌ಗೆ ಕ್ಯಾಚ್‌ ನೀಡಿ ವಾಪಸಾದರು. ಅನಂತರದ ಓವರ್‌ನಲ್ಲಿ ಮೊಹಮ್ಮದ್‌ ಶಮಿ ಬಿಗ್‌ ವಿಕೆಟ್‌ ಒಂದನ್ನು ಹಾರಿಸಿ ಇಂಗ್ಲೆಂಡ್‌ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು. ಈ ವಿಕೆಟ್‌ ಬಿಗ್‌ ಹಿಟ್ಟರ್‌ ಬೆನ್‌ ಸ್ಟೋಕ್ಸ್‌ ಅವರದಾಗಿತ್ತು. ಸ್ಟೋಕ್ಸ್‌ “ಗೋಲ್ಡನ್‌ ಡಕ್‌’ ಅವಮಾನಕ್ಕೆ ಸಿಲುಕಿದರು.

ಮತ್ತೋರ್ವ ಡೇಂಜರಸ್‌ ಬ್ಯಾಟರ್‌ ಲಿಯಮ್‌ ಲಿವಿಂಗ್‌ಸ್ಟೋನ್‌ ಆಟ ಕೂಡ ಬುಮ್ರಾ ಮುಂದೆ ನಡೆಯಲಿಲ್ಲ. ಅವರು ಖಾತೆ ತೆರೆಯುವ ಮೊದಲೇ ಬೌಲ್ಡ್‌ ಆಗಿ ತೆರಳಿದರು. 26 ರನ್ನಿಗೆ ಇಂಗ್ಲೆಂಡಿನ ಅರ್ಧದಷ್ಟು ಮಂದಿಯ ಆಟ ಮುಗಿದಿತ್ತು.

ನಾಯಕ ಜಾಸ್‌ ಬಟ್ಲರ್‌ ಮತ್ತು ಮೊಯಿನ್‌ ಅಲಿ ಕುಸಿತಕ್ಕೆ ತಡೆಯೊಡ್ಡುವ ಸೂಚನೆ ನೀಡಿದರೂ ಯಶಸ್ಸು ಕಾಣಲಿಲ್ಲ. 6ನೇ ವಿಕೆಟಿಗೆ 27 ರನ್‌ ಒಟ್ಟುಗೂಡಿದಾಗ ಪ್ರಸಿದ್ಧ್ ಕೃಷ್ಣ ಈ ಜೋಡಿಯನ್ನು ಬೇರ್ಪಡಿಸಿದರು. 14 ರನ್‌ ಮಾಡಿದ ಅಲಿ ರಿಟರ್ನ್ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು.

ಸೆಕೆಂಡ್‌ ಸ್ಪೆಲ್‌ ಎಸೆಯಲು ಬಂದ ಮೊಹಮ್ಮದ್‌ ಶಮಿ ನಾಯಕ ಬಟ್ಲರ್‌ ಅವರ ಬಿಗ್‌ ವಿಕೆಟ್‌ ಹಾರಿಸಿದರು. ಬಟ್ಲರ್‌ ಆತಿಥೇಯರ ಪಾಲಿನ ಕೊನೆಯ ಭರವಸೆಯಾಗಿದ್ದರು. ಮೊದಲ ಎಸೆತವನ್ನು ಬೌಂಡರಿಗೆ ಬಡಿದಟ್ಟಿದ ಹುರುಪಿನಲ್ಲಿದ್ದ ಬಟ್ಲರ್‌, ಮುಂದಿನ ಎಸೆತವನ್ನೂ ಎತ್ತಿ ಹೊಡೆದರು. ಬೌಂಡರಿ ಲೈನ್‌ನಲ್ಲಿ ಹೊಂಚುಹಾಕಿ ನಿಂತಿದ್ದ ಸೂರ್ಯಕುಮಾರ್‌ ಸೊಗಸಾದ ಕ್ಯಾಚ್‌ ಪಡೆದರು. ಬಟ್ಲರ್‌ ಗಳಿಕೆ 30 ರನ್‌ (32 ಎಸೆತ, 6 ಬೌಂಡರಿ). ಇದು ಇಂಗ್ಲೆಂಡ್‌ ಇನ್ನಿಂಗ್ಸ್‌ನ ಸರ್ವಾಧಿಕ ವೈಯಕ್ತಿಕ ಮೊತ್ತವಾಗಿತ್ತು.

ಈ ಕುಸಿತದ ವೇಗ ಕಂಡಾಗ ಇಂಗ್ಲೆಂಡ್‌ಗೆ ಕನಿಷ್ಠ ಮೊತ್ತದ ಕಂಟಕ ಎದುರಾಗುವ ಎಲ್ಲ ಸಾಧ್ಯತೆ ಇತ್ತು (86). ಆದರೆ ಬೌಲರ್‌ಗಳಾದ ಡೇವಿಡ್‌ ವಿಲ್ಲಿ ಮತ್ತು ಬ್ರೈಡನ್‌ ಕಾರ್ಸ್‌ ಸೇರಿಕೊಂಡು ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿ ಯಾದರು. ಇಂಗ್ಲೆಂಡ್‌ ಸರದಿಯ ಏಕೈಕ ಸಿಕ್ಸರ್‌ ಅಂತಿಮ ಬ್ಯಾಟರ್‌ ಟಾಪ್ಲಿ ಬ್ಯಾಟ್‌ನಿಂದ ಸಿಡಿಯಿತು.

ಧವನ್‌- ರೋಹಿತ್‌ 5 ಸಾವಿರ ರನ್‌
ಶಿಖರ್‌ ಧವನ್‌-ರೋಹಿತ್‌ ಶರ್ಮ ಆರಂಭಿಕ ವಿಕೆಟಿಗೆ 5 ಸಾವಿರ ರನ್‌ ಜತೆಯಾಟ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೆ ಕೇವಲ 6 ರನ್‌ ಅಗತ್ಯವಿತ್ತು.

ಧವನ್‌-ರೋಹಿತ್‌ ಈ ಸಾಧನೆಗೈದ ವಿಶ್ವದ 4ನೇ ಹಾಗೂ ಭಾರತದ 2ನೇ ಆರಂಭಿಕ ಜೋಡಿ. ಸಚಿನ್‌ ತೆಂಡುಲ್ಕರ್‌-ಸೌರವ್‌ ಗಂಗೂಲಿ 136 ಇನ್ನಿಂಗ್ಸ್‌ಗಳಿಂದ 6,609 ರನ್‌ ಪೇರಿಸಿರುವುದು ದಾಖಲೆ. ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್‌-ಆ್ಯಡಂ ಗಿಲ್‌ಕ್ರಿಸ್ಟ್‌ 114 ಇನ್ನಿಂಗ್ಸ್‌ಗಳಿಂದ 5,372 ರನ್‌; ವೆಸ್ಟ್‌ ಇಂಡೀಸ್‌ನ ಗಾರ್ಡನ್‌ ಗ್ರೀನಿಜ್‌-ಡೆಸ್ಮಂಡ್‌ ಹೇನ್ಸ್‌ 102 ಇನ್ನಿಂಗ್ಸ್‌ಗಳಿಂದ 5,150 ರನ್‌ ಪೇರಿಸಿದ್ದಾರೆ.

10 ವಿಕೆಟ್‌ ಪರಾಕ್ರಮ
ಇಂಗ್ಲೆಂಡ್‌ ವಿರುದ್ಧ ಭಾರತ ಮೊದಲ ಸಲ 10 ವಿಕೆಟ್‌ ಜಯಭೇರಿ ಮೊಳಗಿಸಿತು. ಒಟ್ಟಾರೆಯಾಗಿ ಭಾರತ ಸಾಧಿಸಿದ 7ನೇ 10 ವಿಕೆಟ್‌ ಗೆಲುವು ಇದಾಗಿದೆ. ಹಾಗೆಯೇ ಇಂಗ್ಲೆಂಡಿಗೆ ಇದು ತವರಲ್ಲಿ ಎದುರಾದ ಮೊದಲ 10 ವಿಕೆಟ್‌ ಸೋಲು. ಶ್ರೀಲಂಕಾ ಎದುರಿನ 2011ರ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಬಳಿಕ (ಕೊಲಂಬೊ) ಇಂಗ್ಲೆಂಡ್‌ ಮೊದಲ ಸಲ 10 ವಿಕೆಟ್‌ ಆಘಾತಕ್ಕೆ ಸಿಲುಕಿತು.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಭಾರತದ ವಿರುದ್ಧ ಇಂಗ್ಲೆಂಡ್‌ ಕನಿಷ್ಠ ಮೊತ್ತಕ್ಕೆ ಆಲೌಟ್‌ ಆಯಿತು (110). 2006ರ ಜೈಪುರ ಪಂದ್ಯದಲ್ಲಿ 125ಕ್ಕೆ ಕುಸಿದದ್ದು ಹಿಂದಿನ ದಾಖಲೆ.
– ಜಸ್‌ಪ್ರೀತ್‌ ಬುಮ್ರಾ ಮೊದಲ ಸಲ ಏಕದಿನದಲ್ಲಿ 6 ವಿಕೆಟ್‌ ಉಡಾಯಿಸಿದರು. ಅವರು 6 ವಿಕೆಟ್‌ ಸಾಧನೆಗೈದ ಭಾರತದ 5ನೇ ಬೌಲರ್‌. ಸ್ಟುವರ್ಟ್‌ ಬಿನ್ನಿ (4ಕ್ಕೆ 6), ಅನಿಲ್‌ ಕುಂಬ್ಳೆ (12ಕ್ಕೆ 6), ಆಶಿಷ್‌ ನೆಹ್ರಾ (23ಕ್ಕೆ 6) ಮತ್ತು ಕುಲದೀಪ್‌ ಯಾದವ್‌ (25ಕ್ಕೆ 6) ಉಳಿದ ಬೌಲರ್.
– ಬುಮ್ರಾ ಇಂಗ್ಲೆಂಡ್‌ ವಿರುದ್ಧ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದ ಭಾರತದ ಬೌಲರ್‌ ಎನಿಸಿದರು (19ಕ್ಕೆ 6).
– ಎದುರಾಳಿಯ ಎಲ್ಲ 10 ವಿಕೆಟ್‌ಗಳನ್ನು ವೇಗಿಗಳೇ ಕೆಡವಿದ ಭಾರತದ 6ನೇ ನಿದರ್ಶನ ಇದಾಗಿದೆ. ಇಂಗ್ಲೆಂಡ್‌ ವಿರುದ್ಧ ಈ ಸಾಧನೆ ದಾಖಲಾದದ್ದು ಇದೇ ಮೊದಲು.
– ಜಸ್‌ಪ್ರೀತ್‌ ಬುಮ್ರಾ ಪಂದ್ಯದ ಮೊದಲ 10 ಓವರ್‌ ಒಳಗೆ 4 ವಿಕೆಟ್‌ ಉರುಳಿಸಿದ ಭಾರತದ 3ನೇ ಬೌಲರ್‌. ಉಳಿದಿಬ್ಬರೆಂದರೆ ಜಾವಗಲ್‌ ಶ್ರೀನಾಥ್‌ (2003ರ ವಿಶ್ವಕಪ್‌, ಶ್ರೀಲಂಕಾ ಎದುರಿನ ಜೊಹಾನ್ಸ್‌ಬರ್ಗ್‌ ಪಂದ್ಯ) ಮತ್ತು ಭುವನೇಶ್ವರ್‌ ಕುಮಾರ್‌ (ವೆಸ್ಟ್‌ ಇಂಡೀಸ್‌ ಎದುರಿನ 2013ರ ಪೋರ್ಟ್‌ ಆಫ್ ಸ್ಪೇನ್‌ ಪಂದ್ಯ).
– ಭಾರತ ತನ್ನ ಏಕದಿನದಲ್ಲಿ ಎದುರಾಳಿಯ 5 ವಿಕೆಟ್‌ಗಳನ್ನು ಅತೀ ಕಡಿಮೆ ರನ್ನಿಗೆ ಕೆಡವಿತು (26 ರನ್‌). ಇದಕ್ಕೂ ಮೊದಲು 2 ಸಲ 29 ರನ್ನಿಗೆ 5 ವಿಕೆಟ್‌ ಉರುಳಿಸಿತ್ತು (ಪಾಕಿಸ್ಥಾನ ವಿರುದ್ಧದ 1997ರ ಕೊಲಂಬೊ ಪಂದ್ಯ ಹಾಗೂ ಜಿಂಬಾಬ್ವೆ ಎದುರಿನ 2005ರ ಹರಾರೆ ಮುಖಾಮುಖಿ).
– ಇಂಗ್ಲೆಂಡಿನ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳಲ್ಲಿ ಮೂವರು ಖಾತೆ ತೆರೆಯದೆ ಹೋದ ದ್ವಿತೀಯ ನಿದರ್ಶನ ಇದಾಗಿದೆ (ರಾಯ್‌, ರೂಟ್‌, ಸ್ಟೋಕ್ಸ್‌). 2018ರ ಆಸ್ಟ್ರೇಲಿಯ ಎದುರಿನ ಅಡಿಲೇಡ್‌ ಪಂದ್ಯದಲ್ಲಿ ರಾಯ್‌, ಬೇರ್‌ಸ್ಟೊ ಜತೆಗೆ ರೂಟ್‌ ಸೊನ್ನೆಗೆ ಔಟಾಗಿದ್ದರು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜೇಸನ್‌ ರಾಯ್‌ ಬಿ ಬುಮ್ರಾ 0
ಜಾನಿ ಬೇರ್‌ಸ್ಟೊ ಸಿ ಪಂತ್‌ ಬಿ ಬುಮ್ರಾ 7
ಜೋ ರೂಟ್‌ ಸಿ ಪಂತ್‌ ಬಿ ಬುಮ್ರಾ 0
ಬೆನ್‌ ಸ್ಟೋಕ್ಸ್‌ ಸಿ ಪಂತ್‌ ಬಿ ಶಮಿ 0
ಜಾಸ್‌ ಬಟ್ಲರ್‌ ಸಿ ಸೂರ್ಯಕುಮಾರ್‌ ಬಿ ಶಮಿ 30
ಲಿವಿಂಗ್‌ಸ್ಟೋನ್‌ ಬಿ ಬುಮ್ರಾ 0
ಮೊಯಿನ್‌ ಅಲಿ ಸಿ ಮತ್ತು ಬಿ ಪ್ರಸಿದ್ಧ್ 14
ಡೇವಿಡ್‌ ವಿಲ್ಲಿ ಬಿ ಬುಮ್ರಾ 21
ಕ್ರೆಗ್‌ ಓವರ್ಟನ್‌ ಬಿ ಶಮಿ 8
ಬ್ರೈಡನ್‌ ಕಾರ್ಸ್‌ ಬಿ ಬುಮ್ರಾ 15
ರೀಸ್‌ ಟಾಪ್ಲಿ ಔಟಾಗದೆ 6
ಇತರ 9
ಒಟ್ಟು (25.2 ಓವರ್‌ಗಳಲ್ಲಿ ಆಲೌಟ್‌) 110
ವಿಕೆಟ್‌ ಪತನ: 1-6, 2-6, 3-7, 4-17, 5-26, 6-53, 7-59, 8-68, 9-103.
ಬೌಲಿಂಗ್‌:
ಮೊಹಮ್ಮದ್‌ ಶಮಿ 7-0-31-3
ಜಸ್‌ಪ್ರೀತ್‌ ಬುಮ್ರಾ 7.2-0-19-6
ಹಾರ್ದಿಕ್‌ ಪಾಂಡ್ಯ 4-0-22-0
ಪ್ರಸಿದ್ಧ್ ಕೃಷ್ಣ 5-0-26-1
ಯಜುವೇಂದ್ರ ಚಹಲ್‌ 2-0-10-0

ಭಾರತ

ರೋಹಿತ್‌ ಶರ್ಮ ಔಟಾಗದೆ 76
ಶಿಖರ್‌ ಧವನ್‌ ಔಟಾಗದೆ 31
ಇತರ 7
ಒಟ್ಟು (18.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ) 114
ಬೌಲಿಂಗ್‌:
ಡೇವಿಡ್‌ ವಿಲ್ಲಿ 3-0-8-0
ರೀಸ್‌ ಟಾಪ್ಲಿ 5-3-22-0
ಕ್ರೆಗ್‌ ಓವರ್ಟನ್‌ 4-0-34-0
ಬ್ರೈಡನ್‌ ಕಾರ್ಸ್‌ 3.4-0-38-0
ಬೆನ್‌ ಸ್ಟೋಕ್ಸ್‌ 1-0-1-0
ಮೊಯಿನ್‌ ಅಲಿ 2-0-9-0

ಪಂದ್ಯಶೇಷ್ಠ: ಜಸ್‌ಪ್ರೀತ್‌ ಬುಮ್ರಾ

Advertisement

Udayavani is now on Telegram. Click here to join our channel and stay updated with the latest news.

Next