Advertisement
ಇದುವರೆಗೆ ಬಂದ ಸರ್ಕಾರಗಳಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು ಸಿಕ್ಕಿದ್ದವು. ಜನತಾದಳ ಸರ್ಕಾರದಲ್ಲಿ ಎ.ಬಿ.ಪಾಟೀಲ, ಉಮೇಶ ಕತ್ತಿ ಹಾಗೂ ಲೀಲಾದೇವಿ ಆರ್.ಪ್ರಸಾದ ಸಚಿವರಾಗಿದ್ದರು. ಅದರ ನಂತರ ಅತೀ ಹೆಚ್ಚು ಸಚಿವ ಸ್ಥಾನ ಸಿಕ್ಕಿದ್ದು ಈಗಲೇ. ನಾಲ್ವರು ಸಚಿವರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಮೂವರು ಕುತೂಹಲದ ಸಂಗತಿ.
Related Articles
Advertisement
ಉಸ್ತುವಾರಿ ಯಾರ ಹೆಗಲಿಗೆ: ಸಚಿವರ ನೇಮಕವಾಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಯಾರು ಎಂಬ ಚರ್ಚೆ ಆರಂಭವಾಗಿದೆ. ಉಸ್ತುವಾರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೊಳಿ ಮಧ್ಯೆ ಪೈಪೋಟಿ ಇದೆ. ಆದರೆ ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಪಟ್ಟ ಹಿಡಿಯುವುದು ಬಹುತೇಕ ಖಚಿತ ಎನ್ನುತ್ತಾರೆ ಜಿಲ್ಲಾ ಮುಖಂಡರು.
ಉಮೇಶ ಕತ್ತಿ ಮುಂದಿನ ನಡೆ ಏನು?: ಎಲ್ಲರಿಗಿಂತ ದೊಡ್ಡ ಹಿನ್ನಡೆಯಾಗಿದ್ದು ಹುಕ್ಕೇರಿಯ ಶಾಸಕ ಉಮೇಶ ಕತ್ತಿ ಅವರಿಗೆ. ಅತ್ಯಂತ ಹಿರಿಯ ಹಾಗೂ ಎಂಟು ಬಾರಿ ಗೆದ್ದುಬಂದಿರುವ ಉಮೇಶ ಕತ್ತಿ ಎರಡನೇ ಹಂತದಲ್ಲೂ ಅವಕಾಶ ಕಳೆದುಕೊಂಡರು. ಈ ಬಾರಿ ಸಚಿವ ಸ್ಥಾನ ಪಡೆಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಬಹುತೇಕ ದಿನಗಳ ಕಾಲ ಮುಖ್ಯಮಂತ್ರಿಗಳ ಮನೆಗೆ ಎಡ ತಾಕಿದ್ದ ಉಮೇಶ ಕತ್ತಿ ಸಚಿವ ಸ್ಥಾನ ಗಟ್ಟಿಮಾಡಿಕೊಂಡಿದ್ದರು.
ಮೊದಲ ಹಂತದಲ್ಲಿ ಸ್ಥಾನ ಸಿಗದಿದ್ದಾಗಲೂ ನಿಷ್ಠೆ ಕುಂದಿರಲಿಲ್ಲ. ಆದರೆ ಅದೇ ನಿಷ್ಠೆ ಅವರಿಗೆ ಮುಳುವಾಗಿದೆ. ಕತ್ತಿಗೆ ಸಚಿವ ಸ್ಥಾನ ಕೊಟ್ಟರೆ ಅವರ ಪ್ರಾಬಲ್ಯ ಹೆಚ್ಚುತ್ತದೆ. ಆಗ ಅವರ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟ ಹೀಗಾಗಿ ಹೆಸರು ಕೈಬಿಸಲು ವರಿಷ್ಠರು ಸೂಚಿಸಿದರು ಎನ್ನುತ್ತಿವೆ ಮೂಲಗಳು. ಆದರೆ, ಯಾವತ್ತೂ ತಮ್ಮ ರಕ್ಷಣೆಗೆ ನಿಂತಿರುವ ಕತ್ತಿ ಅವರನ್ನು ಹೇಗಾದರೂ ಮಾಡಿ ಮಂತ್ರಿ ಮಾಡಲೇಬೇಕು
ಎಂದು ಪಟ್ಟು ಹಿಡಿದಿದ್ದ ಯಡಿಯೂರಪ್ಪ ಅವರಿಗೆ ಲಕ್ಷಣ ಸವದಿ ಅವರ ಬೆನ್ನಿಗೆ ನಿಂತಿರುವ ಬಿಜೆಪಿ ನಾಯಕರ ಒಂದು ಗುಂಪು ಹಿನ್ನಡೆ ಉಂಟುಮಾಡಿದೆ ಎಂಬ ಮಾತುಗಳೂ ಹರಿದಾಡುತ್ತಿವೆ. ಒಂದೆಡೆ ಯಡಿಯೂರಪ್ಪ ನಿಷ್ಠರು ಎಂಬ ಕಾರಣದಿಂದ ಉಮೇಶ ಕತ್ತಿಗೆ ಸಚಿವ ಸ್ಥಾನ ತಪ್ಪಿಸಿದರೆ ಇನ್ನೊಂದು ಕಡೆ ಸಿ.ಪಿ.ಯೋಗೀಶ್ವರ ಅವರ ಸೇರ್ಪಡೆಗೆ ಅವಕಾಶ ಸಿಗದಂತೆ ಮಾಡಿತು. ಎರಡನೇ ಪ್ರಯತ್ನದಲ್ಲೂ ಸಚಿವ ಸ್ಥಾನದ ಅವಕಾಶ ಕಳೆದುಕೊಂಡ ಕತ್ತಿ ಅವರ ಮುಂದಿನ ನಡೆ ಈಗ ಕುತೂಹಲ ಮೂಡಿಸಿದೆ.
* ಕೇಶವ ಆದಿ