Advertisement
ದೀಪದ ಮಲ್ಲಿಗೆ,ನಾನು, ನೀನು ಮತ್ತು ನಮ್ಮ ಪ್ರೀತಿ ಸೇರಿದರೆ ಅದು ತ್ರಿವೇಣಿ ಸಂಗಮ! ಮನಸು ಮನಸುಗಳು ಕಲೆತಾಗ ಅಲ್ಲೋಂದು ಮಾನಸ ಸರೋವರ ತುಂಬಿ ತುಳುಕುತ್ತದೆ. ಆಡುವ ಪ್ರತಿ ಮಾತಿಗೂ ಪ್ರೀತಿಯ ಸಿಹಿ ಲೇಪನ. ನಮ್ಮ ಪ್ರೀತಿಗೆ ಜಗದಲ್ಲಿಲ್ಲ ಹೋಲಿಕೆ. ನೀನು ಬಲು ಮುದ್ದು. ನಿನ್ನ ಸಾಮೀಪ್ಯದಲ್ಲಿ ನಾನು ಮಗುವಾಗುತ್ತೇನೆ. ನಿನ್ನ ಅಂತಃಕರಣದಲ್ಲಿ ಲೀನವಾಗಿ ಮತ್ತೆ ಹುಟ್ಟಬೇಕೆನ್ನುವುದು ನನ್ನ ಉತ್ಕಟ ಬಯಕೆ.
Related Articles
ಕಾರಣ ಪ್ರೀತಿ ಅನನ್ಯ. ಎಲ್ಲಾ ಸರಿ ಹೋಯಿತು ಎನ್ನುವಾಗ ಪರೀಕ್ಷೆ ಅಡ್ಡ ಬಂದು ನಾನು ನಿಧಾನವಾಗಿ ಚಲಿಸಿದೆ.
Advertisement
“ಮುಂದೆ ತಿರುವು ಇದೆ’ ಎಂಬ ಎಚ್ಚರಿಕೆ ಬೋರ್ಡ್ ಗಮನಿಸಿದೆ. ಹಿಡಿದ ಕೈ ಹಿಡಿದ ಹಾಗೆ ಹೆಜ್ಜೆ ಹೆಜ್ಜೆಗೆ ಮೂಡುವ ಗೆಜ್ಜೆ ಸದ್ದಿನಲಿ ನನ್ನ ನೋವು ನಿರ್ನಾಮ. ಹೆಗಲಿಗೆ ಹೆಗಲು ತಾಕಿಸಿ ನಡೆವ ಹೊತ್ತಿನಲ್ಲಿ ಆಗಸದಿ ಕಾರ್ಮುಗಿಲು. ಸೂರ್ಯ ಮೋಡಗಳ ಒಳಗೆ ಅವಿತು. ಬಿಸಿಲು ಮಾಯವಾಗಿ. ಗಾಳಿ ಬಿರುಸುಗೊಂಡು. ಗುಡುಗು ಗುಡುಗಿದರೆ ಮಳೆಗೆ ಅದುವೇ ಆಹ್ವಾನ. ಪ್ರೀತಿಯ ಒಡಂಬಡಿಕೆಯಲ್ಲಿ ಮಳೆಗೆ ತಾವು ಕೊಡಲೇಬೇಕು.
ನೆನೆಯುವ ಹಟದಲ್ಲಿ ಮೈಮರೆಯಬೇಕು. ಇಹದ ನಂಟು ಕಳಚಿ ಪರದ ಪರದೆಯ ಸರಿಸಿ ಜೊತೆಗೆ ಇಬ್ಬರೂ ಕಾಲಿಡಬೇಕು, ಬದುಕು ನಮ್ಮದೆನಲು ಯಾರ ಹಂಗು ಬೇಕು? ನಾನು ಮಾತ್ರ ಒಬ್ಬನೇ ಬದುಕುವುದು ದುಸ್ತರ. ಇದು ಅಕ್ಷರಶಃ ಸತ್ಯ, ಮತ್ತು ನಿನಗೆ ಗೊತ್ತು. ದೇಹವೆರಡು ಪ್ರಾಣವೊಂದು. ಕಣ್ಣು ಎರಡು ನೋಟ ಒಂದು. ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ, ನೀನು ನನ್ನವಳು, ಕೇವಲ ನನ್ನವಳು. ಜಗದ ಹಂಗು ತೊರೆದು ಬದುಕಬೇಕು.
ಎಲ್ಲಾ ಒಳ್ಳೆಯ ದಿನಗಳು ನಮ್ಮವೆಂದು ನಾವು ಭರವಸೆ ಹೊಂದಬೇಕು. ನಾಳಿನ ಕನಸಿಗೆ ಇಂದಿನ ವಾಸ್ತವದ ಅಡಚಣೆ ದೂರಾಗಬೇಕು. ದೀಪದೊಳಗೆ ಬೆಳಕು ಇರುವಂತೆ ನನ್ನನಿನ್ನ ಒಳಗೆ ಬದುಕು ಇರಬೇಕು… ಮಲ್ಲಿ , ಎಷ್ಟು ಬರೆದರೂ ಮುಗಿಯದ ಅಧ್ಯಾಯದ ಹಾಗೆ ಈ ಪ್ರೇಮ ಪತ್ರ. ಬರಿಯ ಮಾತು ಸಾಕು, ಸಂಧಿಸುವ ಸಮಯಕ್ಕೆ ಸಹಿ ಹಾಕು ಸಾಕು. ಭಯವ ಬಿಸಾಕು, ನಾನಿದ್ದೇನೆ ನಿನ್ನೊಂದಿಗೆ- ಪ್ರೀತಿಸಲು, ಆರಾಧಿಸಲು, ಕೈ ಮುಗಿಯಲು…!ಸುಮ್ಮನೇ ನಿನ್ನವನು
* ಕಂಡಕ್ಟರ್ ಸೋಮು, ಎಡೆಯೂರು