ಬೆಂಗಳೂರು: ಬಹುನಿರೀಕ್ಷಿತ ಮೈಸೂರು- ಬೆಂಗಳೂರು – ಚೆನ್ನೈ ಮಾರ್ಗದ ರಾಜ್ಯದ ಮೊತ್ತಮೊದಲ ಬುಲೆಟ್ ರೈಲು ಯೋಜನೆಗೆ ಸಮಗ್ರ ಯೋಜನಾ ವರದಿ ಸಿದ್ದಪಡಿಸಲು ಕೇಂದ್ರ ಸರಕಾರ ಹಸುರು ನಿಶಾನೆ ತೋರಿದೆ.
484 ಕಿ.ಮೀ. ಅಂತರವನ್ನು ಮೂರು ತಾಸುಗಳಲ್ಲಿ ಕ್ರಮಿಸುವ 1.15 ಲಕ್ಷ ಕೋ.ರೂ. ಮೊತ್ತದ ಯೋಜನೆಗೆ ರಾಜ್ಯ ದಲ್ಲಿ ಅಗತ್ಯ ಇರುವ ಭೂಮಿಯನ್ನು ರಾಜ್ಯ ಸರಕಾರವೇ ಒದಗಿಸಲಿದೆ.
ಮುಂಬಯಿ-ಅಹ್ಮದಾಬಾದ್ ನಡುವಣ ಬುಲೆಟ್ ರೈಲಿನ ಬಳಿಕ ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ನಗರಗಳನ್ನು ಸಂಪರ್ಕ ಕಲ್ಪಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಮೂಲ ಸೌಕರ್ಯ ಸಚಿವ ವಿ. ಸೋಮಣ್ಣ ವಿಧಾನಸೌಧದಲ್ಲಿ ಸುದ್ದಿ ಗಾರರಿಗೆ ತಿಳಿಸಿದರು.
ಈ ಯೋಜನೆಯ ಸಮಗ್ರ ಯೋಜನಾ ವರದಿ ನೀಡಲು ನ್ಯಾಷನಲ್ ಹೈಸ್ಪೀಡ್ ರೈಲ್ವೇ ಕಾರ್ಪೊರೇಷನ್‌ಗೆ ಕೇಂದ್ರ ಸರಕಾರ ಆದೇಶ ನೀಡಿದೆ ಎಂದರು.
ಈ ಯೋಜನೆ ಜಾರಿಯಾದರೆ ಮೈಸೂರಿನಿಂದ ಬೆಂಗಳೂರಿಗೆ 45 ನಿಮಿಷ ಹಾಗೂ ಬೆಂಗಳೂರಿನಿಂದ ಚೆನ್ನೈಗೆ ಎರಡು ತಾಸುಗಳಲ್ಲಿ ಪ್ರಯಾಣಿಸಬಹುದು. ಬೆಂಗ ಳೂರು- ಮೈಸೂರು ದಶಪಥ ರಸ್ತೆಗೆ ಹೊಂದಿಕೊಂಡಂತೆ ಬುಲೆಟ್ ರೈಲು ಸಂಚಾರಕ್ಕೆ ಮಾರ್ಗ ಒದಗಿಸಬಹುದು ಎಂಬುದರ ಸಹಿತ ಯೋಜನೆಗೆ ಭೂಮಿ ಒದಗಿಸುವ ಸಂಬಂಧ ಒಂದೆರಡು ದಿನದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಯೋಜನೆಯ ಪೂರ್ಣ ಹಣವನ್ನು ಕೇಂದ್ರವೇ ಭರಿಸಲಿದೆ ಎಂದು ಹೇಳಿದರು.