Advertisement

ರಿಂಗ್‌ರೋಡ್‌ ಬದಿ ರಾಶಿ ರಾಶಿ ಕಟ್ಟಡ ತ್ಯಾಜ್ಯ

03:12 PM Nov 04, 2020 | Suhan S |

ಮೈಸೂರು: ನಗರಕ್ಕೆ ಹೊರಗಿನಿಂದ ಬರುವವರಿಗೆ ಆರಂಭದಲ್ಲೇ ರಾಶಿ ರಾಶಿ ಕಸ, ಕಟ್ಟಡ ತ್ಯಾಜ್ಯ ಸ್ವಾಗತ ನೀಡುವುದು ಸ್ವಚ್ಛನಗರ ಎಂಬ ಖ್ಯಾತಿಗೆ ಕಪ್ಪು ಚುಕ್ಕೆಯಾಗಿ ಉಳಿದಿದೆ.

Advertisement

ಮೈಸೂರು ನಗರದ ಸುತ್ತ ನಿರ್ಮಾಣವಾಗಿರುವ ಹೊರವರ್ತುಲ ರಸ್ತೆಯ ಎರಡೂ ಬದಿಯಲ್ಲಿರುವ ಖಾಲಿ ನಿವೇಶನ ಹಾಗೂ ರಸ್ತೆ ಅಂಚಿನಲ್ಲಿ ತ್ಯಾಜ್ಯ ರಾರಾಜಿಸುತ್ತಿದ್ದು, ಹೋರ ಭಾಗದಿಂದ ನಗರಕ್ಕೆ ಪ್ರವೇಶ ಪಡೆಯುವವರು ದುರ್ವಾಸನೆಯ ಸಹಿಸಿಕೊಂಡೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಳೆದ ಆರೇಳು ವರ್ಷದಿಂದ ಹೆಚ್ಚು ಬೆಳವಣಿಗೆಯಾಗುತ್ತಿರುವ ವಿಜಯನಗರ 4ನೇ ಹಂತ, ದಟ್ಟಗಳ್ಳಿ, ರಿಂಗ್‌ ರಸ್ತೆ, ಹೂಟಗಳ್ಳಿಯಂತಹ ಪ್ರದೇಶಗಳಲ್ಲಿ ಹೆಚ್ಚು ಕಟ್ಟಡ ತ್ಯಾಜ್ಯ ಹಾಗೂ ಕಸದ ರಾಶಿ ಉತ್ಪತ್ತಿಯಾಗುತ್ತಿದೆ. ಇದರ ಜೊತೆಗೆ, ನಗರದ ವಿವಿಧ ಬಡಾವಣೆಗಳಲ್ಲಿದ್ದ ಹಳೆಯ ಮನೆಗಳನ್ನು ಕೆಡವಿ ಹೊಸ ಮನೆ ಮತ್ತು ಕಟ್ಟಡ ನಿರ್ಮಾಣ ಮಾಡುವವರು ಕಟ್ಟಡ ತ್ಯಾಜ್ಯವನ್ನು ರಿಂಗ್‌ ರೋಡ್‌ ಬಳಿ ತಂದು ಸುರಿಯುತ್ತಿರುವುದು ಒಂದೆಡೆಯಾದರೆ, ರಿಂಗ್‌ರೋಡ್‌ ಅಕ್ಕಪಕ್ಕದ ಮಾಂಸದಂಗಡಿಯವರು ಮಾಂಸ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಸುರಿಯುತ್ತಿರುವುದು ಸಮಸ್ಯೆ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ.

ರಿಂಗ್‌ರಸ್ತೆಯ ವ್ಯಾಪ್ತಿಯಲ್ಲಿರುವ ಹಿನಕಲ್‌, ಆಲನಹಳ್ಳಿ, ಶ್ರೀರಾಂಪುರ, ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಅಸಮರ್ಪಕ ತ್ಯಾಜ್ಯ ಸಂಗ್ರಹ ದಿಂದಾಗಿ ಅಲ್ಲಿನ ಬಹುಪಾಲು ಜನರು ಹೋಟೆಲ್‌, ಮಾಂಸದಂಗಡಿ, ಕಚೇರಿಗಳ ತ್ಯಾಜ್ಯವನ್ನು ರಿಂಗ್‌ ರಸ್ತೆಯಂಚಿನಲ್ಲೇ ಸುರಿಯುತ್ತಿದ್ದಾರೆ. ಇದು ಪಾಲಿಕೆ ವ್ಯಾಪ್ತಿಗೆ ಬಾರದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಕಂಡು ಕಾಣದಂತಿದ್ದರೆ, ಗ್ರಾಪಂ ಅಧಿಕಾರಿಗಳು ತಮ್ಮ ವೈಫ‌ಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ತಟಸ್ಥ ವಾಗಿ ಉಳಿದಿದ್ದಾರೆ. ಪರಿಣಾಮ ನಗರದ ಹೊರವರ್ತುಲ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ.

ಕ್ಯಾಮರಾ ಅಳವಡಿಕೆಗೆ ಚಿಂತನೆ: ಸದ್ಯಕ್ಕೆ ತ್ಯಾಜ್ಯ ಮತ್ತು ಡೆಬ್ರಿಸ್‌ ಸಮಸ್ಯೆ ಬೆನ್ನಿಗಂಟಿದ ಬೇತಾಳದಂತಾಗಿದ್ದು, ಬೆಳಗ್ಗೆ ತ್ಯಾಜ್ಯ ತಂದು ಸುರಿದರೆ ಎಲ್ಲರಿಗೂ ಕಾಣುತ್ತದೆ, ದಂಡ ವಿಧಿಸಲಾಗುತ್ತದೆ ಎಂಬ ಕಾರಣಕ್ಕೆ ಕತ್ತಲಾದ ಮೇಲೆ ಲಾರಿಗಟ್ಟಲೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಅದಕ್ಕಾಗಿ ಹೆಚ್ಚು ಕಟ್ಟಡ ತ್ಯಾಜ್ಯ ಸಂಗ್ರಹವಾಗುತ್ತಿರುವ ಕಡೆ ಸಿಸಿ ಕ್ಯಾಮರಾ ಅಳವಡಿಸಲು ನಗರಪಾಲಿಕೆ ಚಿಂತನೆ ನಡೆಸಿದೆ.

Advertisement

ಈಗಾಗಲೇ ಹಲವೆಡೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಹೆಚ್ಚು ತ್ಯಾಜ್ಯ ಸಂಗ್ರಹವಾಗುವ ಸ್ಥಳಗಳನ್ನು ಕ್ಯಾಮರಾ ಕಣ್ಗಾವಲಿನಲ್ಲಿರಿಸಿದರೆ ತ್ಯಾಜ್ಯ ತಂದು ಸುರಿಯುವುದು ಕಡಿಮೆಯಾಗಲಿದೆ ಎಂದು ಪಾಲಿಕೆಯು, ಕ್ಯಾಮರಾ ಅಳವಡಿಕೆಗೆ ಚಿಂತನೆ ನಡೆಸಿದೆ.

ತ್ಯಾಜ್ಯ ಮರುಬಳಕೆಗೆ ಮೀನಮೇಷ: ನಗರದ ಹೊರಭಾಗದಲ್ಲಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ರಾಶಿಯಾಗಿ ಬಿದ್ದಿದ್ದರೂ ಪಾಲಿಕೆ ಅದನ್ನು ಮರು ಬಳಕೆಗೆ ಮುಂದಾಗಿಲ್ಲ. ಈಗಾಗಲೇ ದೆಹಲಿಯಲ್ಲಿ ಕಟ್ಟಡ ತ್ಯಾಜ್ಯವನ್ನು ಮರುಬಳಕೆ ಮಾಡಲು ಕಟ್ಟಡ ತ್ಯಾಜ್ಯ ಘಟಕ ಸ್ಥಾಪಿಸಲಾಗಿದೆ. ಇದರಿಂದ ಇಂಟರ್‌ ಲಾಕ್‌ ಟೈಲ್ಸ್‌, ಹಾಲೋಬ್ಲಾಕ್‌ ಇಟ್ಟಿಗೆ ಹಾಗೂ ಮತ್ತಷ್ಟು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಅದರಂತೆ ಮೈಸೂರಿನಲ್ಲಿಯೂ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ತ್ಯಾಜ್ಯ ಸಂಗ್ರಹಿಸಿ ಮರುಬಳಕೆ ಮಾಡಲು ಸುಸ್ಥಿರ ಎಂಬ ಟ್ರಸ್ಟ್‌ ಮುಂದೆ ಬಂದಿದೆಯಾದರೂ ನಗರಪಾಲಿಕೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದೆ.

ಕೌನ್ಸಿಲ್‌ ಸಭೆ ಒಪ್ಪಿದರೆ ತ್ಯಾಜ್ಯ ಮರುಬಳಕೆಗೆ ಅವಕಾಶ :  ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಟ್ಟಡ ತ್ಯಾಜ್ಯ ಸುರಿಯುತ್ತಿಲ್ಲ. ಈಗಾಗಲೇ ನಗರಪಾಲಿಕೆ ವತಿಯಿಂದ ಕಟ್ಟಡ ತ್ಯಾಜ್ಯ ಸುರಿಯುವವರನ್ನು ಗುರುತಿಸಿ ದಂಡ ವಿಧಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಅಂಚಿನಲ್ಲಿರುವ ಸರ್ವೀಸ್‌ ರಸ್ತೆಗಳಲ್ಲಿ ಕಟ್ಟಡ ತ್ಯಾಜ್ಯ ಹೆಚ್ಚು ಸಂಗ್ರಹವಾಗುತ್ತಿದೆ. ಇದನ್ನು ವಿಲೇವಾರಿ ಮಾಡಲು ಸುಸ್ಥಿರ ಟ್ರಸ್ಟ್‌ ಮುಂದೆ ಬಂದಿದ್ದು, ಈ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕಿದೆ. ಒಪ್ಪಿಗೆ ಸಿಕ್ಕರೆ ಟ್ರಸ್ಟ್‌ಗೆ ಜಾಗ ನೀಡಿ ಕಟ್ಟಡ ತ್ಯಾಜ್ಯ ಮರುಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ| ಜಯಂತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next