Advertisement

ಬೈಪಾಸ್‌ ನಿರ್ಮಿಸಲು ಕಟ್ಟಡ ಮಾಲೀಕರ ಆಗ್ರಹ

05:53 PM Apr 08, 2022 | Team Udayavani |

ಸಿರುಗುಪ್ಪ: ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 150(ಎ)ಯನ್ನು ಉನ್ನತೀಕರಿಸಿ ಚತುಷ್ಪಥ ರಸ್ತೆಯನ್ನಾಗಿ ಮಾಡಲು ಕೇಂದ್ರ ಸರ್ಕಾರ 255 ಕೋಟಿ. 88 ಲಕ್ಷ ಅನುದಾನ ಬಿಡುಗಡೆ ಮಾಡಿದೆ.

Advertisement

ಲಿಂಗಸೂಗೂರು ತಾಲೂಕಿನ ಮೂಡಬಾಳ ಕ್ರಾಸ್‌ನಿಂದ ಸಿಂಧನೂರು, ಸಿರುಗುಪ್ಪ ಮೂಲಕ ಬಳ್ಳಾರಿವರೆಗೆ ಚತುಷ್ಪಥ ರಸ್ತೆ ವಿಸ್ತರಣೆಗೆ ಕೇಂದ್ರ ಸರ್ಕಾರವು ರೂ.255 ಕೋಟಿ, 88ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಈ ರಸ್ತೆಯೂ ಸಿರುಗುಪ್ಪ ನಗರದ ಹೃದಯಭಾಗದಲ್ಲಿ ಹಾದುಹೋಗುತ್ತಿದೆ. ಹೆದ್ದಾರಿಯ ಎಡ ಮತ್ತು ಬಲ ಭಾಗದಲ್ಲಿರುವ ಕಟ್ಟಡ ಮಾಲೀಕರು ಹೆದ್ದಾರಿ ಅಗಲೀಕರಣ ಮಾಡದಂತೆ ತಡೆಯುವ ಉದ್ದೇಶದಿಂದ ಸದ್ದಿಲ್ಲದೆ ಸಹಿ ಸಂಗ್ರಹ ಮಾಡಿ ಚಿತ್ರದುರ್ಗದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಭಿಯಂತರರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾ ಧಿಕಾರದ ಅಧಿಕಾರಿಗಳು ಸಿರುಗುಪ್ಪ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಹೆದ್ದಾರಿಯ ಎಡ ಮತ್ತು ಬಲ ಭಾಗದಲ್ಲಿರುವ ಕಟ್ಟಡಗಳ ಮೇಲೆ ರಸ್ತೆ ಅಗಲೀಕರಣಕ್ಕಾಗಿ ತಮ್ಮ ಕಟ್ಟಡಗಳು ತೆರವುಗೊಳ್ಳುತ್ತವೆ ಎನ್ನುವ ಉದ್ದೇಶದಿಂದ ಹೆದ್ದಾರಿ ಇಲ್ಲಿರುವ ಕಟ್ಟಡಗಳ ಮಾಲೀಕರು ನಗರದ ಹೊರಗೆ ಬೈಪಾಸ್‌ ರಸ್ತೆಯನ್ನು ನಿರ್ಮಿಸಬೇಕೆಂಬ ಬೇಡಿಕೆ ಮನವಿ ಪತ್ರಕ್ಕೆ ನಗರದ ಸಾರ್ವಜನಿಕರಿಂದ ಸಹಿ ಮಾಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೆದ್ದಾರಿ ಅಗಲೀಕರಣಕ್ಕಾಗಿ ರಸ್ತೆಯ ಎಡ-ಬಲಕ್ಕೆ ಇರುವ ಕಟ್ಟಡಗಳ ಮೇಲೆ 15ಮೀಟರ್‌ (ಎರಡು ಬದಿ) ಮಾರ್ಕ್‌ ಮಾಡಿರುತ್ತಾರೆ. ಈ ಹಿಂದೆ ಬಳ್ಳಾರಿ ಜಿಲ್ಲಾಧಿಕಾರಿಗಳಾಗಿದ್ದ ಗೌರಿ ತ್ರಿವೇದಿ ಅವರು ಮುಖ್ಯರಸ್ತೆಯನ್ನು ಅತಿಕ್ರಮಣ ಮಾಡಿದ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣ ಮಾಡಿದ್ದರು. ನಗರದಲ್ಲಿ ಹಾದುಹೋಗುವ ರಾ.ಹೆ. ಯೇ ಮುಖ್ಯವಾಗಿದ್ದು, ಪರ್ಯಾಯ ರಸ್ತೆಗಳಿರುವುದಿಲ್ಲ. ರಾ.ಹೆದ್ದಾರಿ ಅಭಿವೃದ್ಧಿಗಾಗಿ ಮತ್ತೂಮ್ಮೆ ರಸ್ತೆಯ ಎಡ ಮತ್ತು ಬಲಬದಿಯ ಕಟ್ಟಡಗಳನ್ನು ತೆರವುಗೊಳಿಸಿದರೆ ಕಟ್ಟಡಗಳ ಮಾಲೀಕರು ಮತ್ತು ಕಟ್ಟಡಗಳಲ್ಲಿ ವಿವಿಧ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ದೊಡ್ಡ ಹೊಡೆತ ಬೀಳಲಿದೆ. ಆದ್ದರಿಂದ ಬೈಪಾಸ್‌ ರಸ್ತೆಯನ್ನು ನಿರ್ಮಾಣ ಮಾಡಬೇಕೆಂಬುದು ಬಹುತೇಕ ನಗರದ ಜನರ ಒತ್ತಾಯವಾಗಿದೆ.

ನಗರದಲ್ಲಿ 110 ರೈಸ್‌ ಮಿಲ್‌ಗ‌ಳು, ದೇಶನೂರಲ್ಲಿ ಸಕ್ಕರೆ ಕಾರ್ಖಾನೆಯಿದ್ದು, ಇವುಗಳಿಗೆ ಸಂಬಂಧಪಟ್ಟ ಸರಬರಾಜು ಹಾಗೂ ರಫ್ತಿಗಾಗಿ ಸಾವಿರಾರು ಲಾರಿಗಳು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಅಪಘಾತಗಳು ಸಂಭವಿಸುತ್ತಿದ್ದು, ವರ್ಷಕ್ಕೆ ಕನಿಷ್ಟ 10 ರಿಂದ 15 ಜನ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದಾರೆ. ಅಲ್ಲದೆ ಈ ಹೆದ್ದಾರಿಯು ದೆಹಲಿ, ಬೆಂಗಳೂರು ಸಂಪರ್ಕದ ಕೊಂಡಿಯಾಗಿದೆ. ಬೀದರ್‌, ಗುಲಬರ್ಗಾ, ಸಿಂಧನೂರು, ಮಸ್ಕಿ, ಬಳ್ಳಾರಿ, ಲಿಂಗಸೂಗೂರು ಮತ್ತು ಸೀಮಾಂಧ್ರ, ತೆಲಂಗಾಣ ರಾಜ್ಯಗಳಿಗೂ ಸಂಪರ್ಕ ಕೊಂಡಿಯಾಗಿದ್ದು, ವಾಹನಗಳ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ನಗರದಲ್ಲಿ ವಾಹನ ದಟ್ಟಣೆ ತಡೆಯಲು ಬೈಪಾಸ್‌ ರಸ್ತೆಯೊಂದೇ ಪರಿಹಾರವಾಗಿದೆ. ಆದ್ದರಿಂದ ನಗರದಲ್ಲಿ ಬೈಪಾಸ್‌ ರಸ್ತೆಯನ್ನು ನಿರ್ಮಿಸಬೇಕು, ನಗರದಲ್ಲಿ ಹೆದ್ದಾರಿ ಅಗಲೀಕರಣ ಮಾಡಬಾರದೆಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

Advertisement

ಬೀದರ್‌-ಚಾಮರಾಜನಗರ ರಾ.ಹೆದ್ದಾರಿ 150ಎ ಯಲ್ಲಿ ಬರುವ ರಾಂಪುರ, ಹಿರಿಯೂರು, ಉಳಿಯಾರು, ಇನ್ನುಳಿದ ಪಟ್ಟಣಗಳಲ್ಲಿ ಬೈಪಾಸ್‌ ರಸ್ತೆ ನಿರ್ಮಾಣವಾಗಿವೆ, ಅದೇ ಮಾದರಿಯಲ್ಲಿ ನಮ್ಮ ನಗರದಲ್ಲಿಯೂ ಬೈಪಾಸ್‌ ರಸ್ತೆ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟರಾಮರೆಡ್ಡಿ ತಿಳಿಸಿದ್ದಾರೆ.

ರಾ.ಹೆದ್ದಾರಿ ಎಲ್ಲಿಯವರೆಗೆ ಬರುತ್ತದೆ ಎನ್ನುವ ಬಗ್ಗೆ ಸರ್ವೆ ಇಲಾಖೆಯಿಂದ ಸರ್ವೆಕಾರ್ಯ ನಡೆಯುತ್ತಿದೆ, ಸರ್ವೇಕಾರ್ಯ ಮುಗಿದ ನಂತರ ರಸ್ತೆಯಲ್ಲಿ ಬರುವ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಇಂದೂಧರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next