Advertisement

ಆನ್‌ಲೈನ್‌ನಲ್ಲೇ ಕಟ್ಟಡ ನಿರ್ಮಾಣ ಲೈಸೆನ್ಸ್‌

11:40 AM Sep 30, 2018 | |

ಮೈಸೂರು: ನಗರ ಪ್ರದೇಶಗಳಲ್ಲಿ ಮನೆ ಕಟ್ಟಿಸುವವರು ಕಟ್ಟಡ ನಿರ್ಮಾಣ ಲೈಸನ್ಸ್‌ಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸೆಲ್ಫ್ ಸರ್ಟಿಫಿಕೇಷನ್‌ ಪದ್ಧತಿ ಜಾರಿಗೆ ತರುತ್ತಿರುವುದಾಗಿ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪದ್ಧತಿಯನ್ನು ಪೈಲಟ್‌ ಯೋಜನೆಯಾಗಿ ರಾಜ್ಯದ ನಾಲ್ಕೈದು ಕಡೆಗಳಲ್ಲಿ ಜಾರಿಗೆ ತರಲಿದ್ದು, 30-40 ವಿಸ್ತೀರ್ಣದ ನಿವೇಶನದಲ್ಲಿ ಮನೆ ಕಟ್ಟಿಸುವವರು ಆನ್‌ಲೈನ್‌ನಲ್ಲೇ ಸಾಫ್ಟ್ ಲಾಂಚ್‌ ಅರ್ಜಿ ಹಾಕಿಕೊಂಡು ಸೆಲ್ಫ್ ಸರ್ಟಿಫಿಕೇಷನ್‌ ಮಾಡಿಕೊಂಡರೆ ಆನ್‌ಲೈನ್‌ನಲ್ಲೇ ಕಟ್ಟಡ ನಿರ್ಮಾಣ ಲೈಸೆನ್ಸ್‌ ಪಡೆದುಕೊಳ್ಳಬಹುದು. ಇದರಿಂದ ಕಟ್ಟಡ ಲೈಸೆನ್ಸ್‌ ನೀಡುವಿಕೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ತರಲು ಸಾಧ್ಯವಾಗಲಿದೆ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸವನ್ನು ಇನ್ನಷ್ಟು ಚುರುಕುಗೊಳಿಸುವ ಮೂಲಕ ಮೈಸೂರು ನಗರದಲ್ಲಿ ಹೂಡಿಕೆ ಮಾಡಲು ಬರುವವರಿಗೆ ಏಕಗವಾಕ್ಷಿ ಪದ್ಧತಿಯನ್ನು ಶೀಘ್ರ ಜಾರಿಗೆ ತರಲಾಗುವುದು. ನಿವೇಶನ ಖಾತೆಗೆ ಒಂದು ಅರ್ಜಿ ಹಾಕಿದವರು ಸದ್ಯ 14 ಕಡೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಿ ಏಕಗವಾಕ್ಷಿ ಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಕೊಂಡು ಕಾಲಮಿತಿಯೊಳಗೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಮುಡಾ ಆಯುಕ್ತ ಕಾಂತರಾಜು, ಮುಡಾ ಕಾರ್ಯದರ್ಶಿ ಸವಿತಾ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮುಡಾ ಅದಾಲತ್‌: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಸಂಬಂಧ ದಸರಾ ಮಹೋತ್ಸವ ಮುಗಿದ ನಂತರ ಒಂದು ದಿನ ಮುಡಾ ಅದಾಲತ್‌ ನಡೆಸುವುದಾಗಿ ಹೇಳಿದ ಅವರು, ತಾಂತ್ರಿಕ ಸಮಸ್ಯೆಗಳಿಂದ ಕೆಲಸ ವಿಳಂಬವಾಗಿದ್ದರೂ ಅದಾಲತ್‌ಗಳಲ್ಲಿ ಬಗೆಹರಿಸಿಕೊಳ್ಳಬಹುದು. ಕಳೆದ ತಿಂಗಳು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಸಿದ ಅದಾಲತ್‌ ಯಶಸ್ವಿಯಾಗಿದೆ. ಅದಾಲತ್‌ ನಡೆಸುವುದರಿಂದ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ ಎಂದು ಸಚಿವ ಯು.ಟಿ.ಖಾದರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next