Advertisement

ಕ್ರೀಡೆಯಿಂದ ಸದೃಢ ಸಮಾಜ ನಿರ್ಮಾಣ; ಸಿ.ಕೆ. ಚೆನ್ನಾಳ

06:06 PM Aug 30, 2022 | Team Udayavani |

ಬಾಗಲಕೋಟೆ: ಕ್ರೀಡೆಯು ದೇಹ ಮತ್ತು ಮನಸನ್ನು ಸದೃಢವಾಗಿಸುತ್ತದೆ. ಪ್ರಪಂಚಕ್ಕೆ ಕ್ರೀಡೆಯನ್ನು ಪರಿಚಯಿಸಿದ್ದು ಭಾರತ. ಹಾಕಿಯಲ್ಲಿ ದಂತಕತೆ ಮಾಂತ್ರಿಕ ಆಟಗಾರ ಧ್ಯಾನಚಂದ್‌ ಅವರ ನೆನಪಿಗಾಗಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಸಿ.ಕೆ. ಚೆನ್ನಾಳ ಹೇಳಿದರು.

Advertisement

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಧ್ಯಾನಚಂದ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯ ಪ್ರಾಮುಖ್ಯತೆ ತಿಳಿಯಬೇಕೆಂದರೆ ಭಾರತದ ಇತಿಹಾಸ ಅರಿಯಬೇಕು. ಭಾರತದಲ್ಲಿ ಕೋಟ್ಯಾಂತರ ಜನಸಂಖ್ಯೆ ಇದ್ದರೂ ಕ್ರೀಡೆಗಳಲ್ಲಿ ದೇಶಕ್ಕೆ ಸಿಗುವ ಪದಕಗಳು ಮಾತ್ರ ವಿರಳವಾಗಿವೆ. ಯುವಕರಲ್ಲಿ ಸ್ಪರ್ಧೆಯ ಉತ್ಸಾಹ ತುಂಬುವ ಉದ್ದೇಶದಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ.

ಪಂಚೇಂದ್ರಿಗಳನ್ನು ನಿಗ್ರಹಿಸುವ ವ್ಯಕ್ತಿಯಲ್ಲಿ ಒಂದು ಮಾಂತ್ರಿಕ ಶಕ್ತಿ ಇರುತ್ತದೆ. ಅಂತಹ ಶಕ್ತಿಯನ್ನು ಹಾಕಿ ಕ್ರೀಡೆಯ ಮೂಲಕ ಜಗತ್ತಿಗೆ ಪರಿಚಯಿಸಿದ ಧ್ಯಾನಚಂದ್‌ ಅವರ ಹೆಸರಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ ಮಾಡಲಾಗುತ್ತದೆ ಎಂದರು. ಧ್ಯಾನಚಂದ್‌ ಅವರು ಬಾಲ್ಯದಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಇಲ್ಲದೇ 16 ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದ್ದರು.

ತಮ್ಮಲ್ಲಿದ್ದ ಕೌಶಲ್ಯದಿಂದ ಕ್ರೀಡಾಲೋಕಕ್ಕೆ ಪ್ರವೇಶಿಸಿ ಹಾಕಿ ಕ್ರೀಡೆಯಲ್ಲಿ ಐತಿಹಾಸಿಕ ದಾಖಲೆ ಮಾಡಿದ್ದಾರೆ. ದ್ಯಾನಚಂದ ಅವರು ಆಡಿದ 3 ಒಲಿಂಪಿಕ್ಸ್‌ ಕ್ರೀಡೆಯಲ್ಲಿ 28 ಗೋಲ್‌ ಹೊಡೆಯುವುದರ ಮೂಲಕ ಭಾರತಕ್ಕೆ ಮೂರು ಚಿನ್ನದ ಪದಕ ತಂದುಕೊಟ್ಟಿದ್ದರು. ಅವರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ 2012ರಿಂದ ಅವರ ಹೆಸರಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಕ್ರೀಡೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ
ಸರಕಾರಗಳಿಂದ ಹಲವಾರು ಯೋಜನೆಗಳನ್ನು ಹಮ್ಮಕೊಳ್ಳಲಾಗಿದ್ದು, ಸಾಧನೆಗೈದ ಕ್ರೀಡಾಪಟುಗಳಿಗೆ ಕೇಂದ್ರದಿಂದ ಧ್ಯಾನಚಂದ್‌, ಅರ್ಜುನ ಮತ್ತು ದ್ರೋಣಾಚಾರ್ಯ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ಹೇಳಿದರು.

Advertisement

ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳ ಹಿಂದೆ ಬಿದ್ದಿದಾರೆ. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಜತೆಗೆ ಕ್ರೀಡಾ ಸಾಧನೆಯು ಅವಶ್ಯಕವಾಗಿದೆ. ಕ್ರೀಡೆಯು ದೇಹ ಮತ್ತು ಮನಸನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನದೊಂದಿಗೆ ಕ್ರೀಡೆಯಲ್ಲಿ ಸ್ಪ ರ್ಧಿಸುವುದನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.ಪ್ರಾಚಾರ್ಯ ಡಾ|ವಿ.ಎಸ್‌ ಕಟಗಿಹಳ್ಳಿಮಠ, ಪ್ರೊ| ಎಸ್‌.ಆರ್‌. ಮುಗನೂರಮಠ, ಪ್ರೊ| ಆರ್‌.ಎಂ. ಬೆನ್ನೂರ, ಪ್ರೊ| ಮಂಜುನಾಥ್‌ ದೇವನಾಳ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಮಲ್ಲಗಂಬ ಪ್ರದರ್ಶನ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸ್ಥಿರ ಮಲ್ಲಗಂಬ ಮತ್ತು ರೂಫ್‌ ಮಲ್ಲಗಂಬ ಪ್ರದರ್ಶನ ಮಾಡಲಾಯಿತು. ಕಾಲೇಜು ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸ್ಥಿರ ಮಲ್ಲಗಂಬ ಪ್ರದರ್ಶನದಲ್ಲಿ ಸಲಾಯಿ, ದಸರಂಗ, ಅಕರ್ಣ ದನುರಾಸನ, ಹಾಲಾಸನ, ಬಗಲಿಪರಾರ, ನಟರಾಜಾಸನ ಸೇರಿದಂತೆ ವಿವಿಧ ಭಂಗಿಯ ಗೋಪುರಾಸನಗಳನ್ನು ಪ್ರದರ್ಶಿಸಿದರು, ರೂಫ್‌ ಮಲ್ಲಗಂಬಾಸನದಲ್ಲಿ ಏಣಿ, ಫ್ರೀಕ್ರಾಸ, ಪರ್ವತಾಸನ, ಪಶ್ಚಿಮುತ್ತಾಸನ, ನಿದ್ರಾಸನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next