Advertisement

ನಿಯಮಾವಳಿ ಪ್ರಕಾರವೇ ಮನೆ ನಿರ್ಮಿಸಿ

03:40 PM Apr 17, 2017 | Team Udayavani |

ಹುಬ್ಬಳ್ಳಿ: ಎಂಜನಿಯರ್‌ಗಳು ಎಫ್‌ಎಆರ್‌ ಹಾಗೂ ಕಟ್ಟಡ ನಿರ್ಮಾಣದ ನಿಯಮಾವಳಿಗಳ ಪ್ರಕಾರವೇ ಮನೆ ನಿರ್ಮಿಸಬೇಕೆ ವಿನಹ ತಮಗೆ ತೋಚಿದಂತೆ ನಿರ್ಮಿಸಿ ನಂತರ ಕಟ್ಟಡದ ಮಾಲಕರಿಗೆ ಸಮಸ್ಯೆ ತಂದೊಡ್ಡಬೇಡಿ. ಇದರಿಂದ ಹಾನಿಯಾಗುವುದು ಆಸ್ತಿಯ ಮಾಲಕರಿಗೆ ಹೊರತು ಎಂಜನಿಯರ್‌ಗಳಿಗಲ್ಲವೆಂದು ಹುಡಾ ಅಧ್ಯಕ್ಷ ಅನ್ವರ ಮುಧೋಳ ಕಿವಿಮಾತು ಹೇಳಿದರು. 

Advertisement

ಇಲ್ಲಿನ ವಿದ್ಯಾನಗರದ ಮಹಿಳಾ ವಿದ್ಯಾಪೀಠ ಎದುರಿನ ರಾಯ್ಕರ ಮೈದಾನದಲ್ಲಿ ಅಸೋಸಿಯೇಶನ್‌ ಆಫ್ ಕನ್ಸಲ್ಟಿಂಗ್‌ ಸಿವಿಲ್‌ ಎಂಜನಿಯರ್ ವತಿಯಿಂದ ಆಯೋಜಿಸಿದ್ದ ಕಟ್ಟಡ ನಿರ್ಮಾಣ ಉತ್ಪನ್ನಗಳ ವಸ್ತು ಪ್ರದರ್ಶನ ಕಾನ್‌ ಮ್ಯಾಟ್‌-2017 ಸಮಾರೋಪ ಸಮಾರಂಭದಲ್ಲಿ ರವಿವಾರ ಅವರು ಮಾತನಾಡಿದರು. 

ಮನುಷ್ಯನಿಗೆ ಜೀವನದಲ್ಲಿ ಮನೆ ಕಟ್ಟಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡಿ ಹಣದ ವ್ಯವಸ್ಥೆ ಮಾಡಿರುತ್ತಾನೆ. ಆದರೆ ಎಂಜನಿಯರ್‌ಗಳು ನಿಯಮಬಾಹಿರವಾಗಿ ಕಟ್ಟಡ ಕಟ್ಟಿದರೆ ಅದರ ಹಾನಿ ಆಗುವುದು ಮಾಲಕರಿಗೆ. ಪಾಲಿಕೆಯವರು ನಿಯಮಬಾಹಿರ ಕಟ್ಟಡವೆಂದು ನೋಟಿಸ್‌ ಕೊಡುವುದು, ದಂಡ ಪಾವತಿಸಿಕೊಳ್ಳುವುದು ಮಾಡುತ್ತಾರೆ.

ಇಲ್ಲವೆ ಅತಿಕ್ರಮಣ ಕಟ್ಟಡವೆಂದು ತೆರವುಗೊಳಿಸುತ್ತಾರೆ. ಆಗ ಇದ್ದ ಬಜೆಟ್‌ ನಲ್ಲಿಯೇ ಮನೆ ನಿರ್ಮಿಸಿಕೊಂಡವರೆ ತುಂಬಾ ನಷ್ಟವಾಗುತ್ತದೆ. ಆದ್ದರಿಂದ ಹುಬ್ಬಳ್ಳಿ-ಧಾರವಾಡ  ಬೆಳವಣಿಗೆ ದೃಷ್ಟಿಯಿಂದ ಎಂಜನಿಯರ್ ಮತ್ತು ಎಂಜನಿಯರ್ ಸಂಘದವರು ಕಟ್ಟಡಗಳ ನಿಯಮಾವಳಿ ಪ್ರಕಾರವೇ ಕಟ್ಟಡಗಳನ್ನು ನಿರ್ಮಿಸಬೇಕು ಎಂದರು. 

ಹು-ಧಾ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ಪ್ರಗತಿ ಹಂತದಲ್ಲಿದೆ. ಈಗಾಗಲೇ 1300 ಅರ್ಜಿಗಳು ಬಂದಿವೆ. ಅವುಗಳ ಪರಿಶೀಲನೆ ನಡೆದಿದೆ. ಸಿಡಿಪಿಯನ್ನು ಆದಷ್ಟು ಬೇಗ ಸರಕಾರಕ್ಕೆ ಕಳುಹಿಸಲಾಗುವುದು. ಅವಳಿ ನಗರವನ್ನು ಸಮರ್ಪಕ ಯೋಜನೆಯೊಂದಿಗೆ ಅಭಿವೃದ್ಧಿ ಪಡಿಸಬೇಕು. ಅದರಲ್ಲಿ ಇಂಜನಿಯರ್‌ ಗಳ ಪಾತ್ರ ಪ್ರಮುಖವಾಗಿದೆ ಎಂದರು. 

Advertisement

ಹೊಸ ತಂತ್ರಜ್ಞಾನದ ಮಾಹಿತಿ ನೀಡಿ: ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ದಿನದಿಂದ ದಿನಕ್ಕೆ ತಂತ್ರಜ್ಞಾನ ಬದಲಾಗುತ್ತಿದೆ. ಮನೆ ನಿರ್ಮಾಣದಲ್ಲೂ ಹೊಸ ಹೊಸ ತಂತ್ರಜ್ಞಾನಗಳು, ಬದಲಾವಣೆಗಳಾಗುತ್ತಿವೆ. ಈ ಕುರಿತು ಎಂಜನಿಯರ್‌ಗಳಿಗೆ ಹಾಗೂ ಜನರಿಗೆ ಮಾಹಿತಿ ಪಡೆದುಕೊಳ್ಳಲು ಹಾಗೂ ಅದರ ಬಗ್ಗೆ ತಿಳಿದುಕೊಳ್ಳಲು ಕಷ್ಟವಾಗುತ್ತದೆ.

ಆದರೆ ಕಾನ್‌-ಮ್ಯಾಟ್‌ನಂತಹ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಕಟ್ಟಡಗಳ ನಿರ್ಮಾಣದಲ್ಲ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ರಾಜ್ಯದಲ್ಲೆಡೆ ಮರಳು ಸಮಸ್ಯೆಯಿದ್ದು,  ಶೀಘ್ರವೇ ಸರಕಾರವು ಹೊಸ ಮರಳು ನೀತಿ ಜಾರಿಗೊಳಿಸಲಿದೆ. ಎಸಿಸಿಇಯವರು ಸಂಘದ ಸ್ವಂತ ಕಟ್ಟಡಕ್ಕಾಗಿ ನಗರದಲ್ಲಿ 10 ಗುಂಟೆ ಜಾಗ ಕೇಳಿದ್ದು, ಹೊಸ ಬಡಾವಣೆಗಳಲ್ಲಿ ಸಿಎ ಪ್ಲಾಟ್‌ ಗುರುತಿಸಿದರೆ ಅದನ್ನು ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಅವಳಿ ನಗರವು ಅಭಿವೃದ್ಧಿ ಹೊಂದಬೇಕಾದರೆ ಮೂಲ ಸೌಕರ್ಯ ಬದಲಾಗಬೇಕು. ಸರಕಾರವು ಆದಷ್ಟು ಬೇಗ ಮರಳು ಸಮಸ್ಯೆ ಪರಿಹರಿಸಬೇಕು ಎಂದರು.  ಸುರೇಶ ಎಂಟರ್‌ಪ್ರೈಸಿಸ್‌ನ ಎಂಡಿ ಸುರೇಶ ಶೇಜವಾಡಕರ ಮಾತನಾಡಿ, ಸಂಸ್ಥೆಯಿಂದ ಪಿಬಿ ರಸ್ತೆಯಲ್ಲಿ ನಿರ್ಮಾಣ ಮಾಡಲಾಗುವ ಹೊಸ ಬಡಾವಣೆಯಲ್ಲಿ ಎಸಿಸಿಇಗೆ 20 ಗುಂಟೆ ಜಾಗ ಮೀಸಲಿಡಲು ಸಿದ್ಧವಿದೆ.

ಆದರೆ ಹುಡಾ ಮತ್ತು ಪಾಲಿಕೆಯವರು ಆ ಪ್ಲಾಟ್‌ ಅನ್ನು ಸಿಎ ಎಂದು ಗುರುತಿಸುವ ಕಾರ್ಯ ಮಾಡಬೇಕು ಎಂದರು. ಉಪ ಮಹಾಪೌರ ಲಕ್ಷ್ಮಿಬಾಯಿ ಬಿಜವಾಡ, ಶ್ರೀಕಾಂತ ಪಾಟೀಲ, ಎನ್‌.ಎಸ್‌. ನಾಡಗಿರ ಮೊದಲಾದವರಿದ್ದರು. ಎಸಿಸಿಇ ಅಧ್ಯಕ್ಷ ಅಶೋಕ ಬಸವಾ ಸ್ವಾಗತಿಸಿದರು. ಬಿ. ಮಹೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next