Advertisement

ಫ್ಲೈಓವರ್‌ ನಿರ್ಮಿಸದೆ ಅಪಾಯಕಾರಿ ಹೆದ್ದಾರಿ ನಿರ್ಮಾಣ

07:04 AM Jan 12, 2019 | Team Udayavani |

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್‌ ಅಡ್ಡಹೊಳೆ ತನಕದ ಚತುಷ್ಪಥ ರಸ್ತೆಯಲ್ಲಿ ಫ್ಲೈಓವರ್‌ ನಿರ್ಮಿಸದೆ ಅಪಾಯಕಾರಿ ಹೆದ್ದಾರಿಯನ್ನಾಗಿ ಪ್ರಾಧಿಕಾರ ನಿರ್ಮಿಸಿದೆ. ಶಾಲಾ ಕಾಲೇಜು ಸಮೀಪದಲ್ಲಿಯೇ ಹಾದು ಹೋಗುವ ಹೆದ್ದಾರಿ ಕಾಮಗಾರಿಯ ನೀಲ ನಕಾಶೆಯನ್ನು ಬದಲಿಸಿ ಅವೈಜ್ಞಾನಿಕವಾಗಿ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ಹೆದ್ದಾರಿಯ ಪಕ್ಕದಲ್ಲಿ ಶಾಲೆ, ಕಾಲೇಜುಗಳ ಸಹಿತ ಹಿರೇಬಂಡಾಡಿ ಗ್ರಾಮಕ್ಕೆ ಸಂಪರ್ಕ ರಸ್ತೆ ಹಾಗೂ ಗಾಂಧಿ ಪಾರ್ಕ್‌ ಬಳಿಯ ಕೂಡು ರಸ್ತೆಗಳು ಹಾದು ಹೋಗುತ್ತದೆ. ಹಾಗಾಗಿ ಇಲ್ಲಿ ಫ್ಲೈ ಓವರ್‌ ಅಗತ್ಯವಾಗಿ ಆಗಬೇಕಿತ್ತು. ಇದನ್ನು ಸಂಪೂರ್ಣವಾಗಿ ಹೆದ್ದಾರಿ ಇಲಾಖೆ ನಿರ್ಲಕ್ಷಿಸಲಾಗಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

ಈ ವ್ಯಾಪ್ತಿಯಲ್ಲಿ ಸೈಂಟ್ ಮೇರಿಸ್‌ ಆಂಗ್ಲಮಾಧ್ಯಮ ಶಾಲೆ, ಸಂತ ಫಿಲೋಮಿನಾ ಕನ್ನಡ ಮಾಧ್ಯಮ ಶಾಲೆ, ಸರಕಾರಿ ಹೈಸ್ಕೂಲ್‌ ವಿಭಾಗ, ಪಿ.ಯು. ಕಾಲೇಜು, ಪ್ರಥಮ ದರ್ಜೆ ಕಾಲೇಜುಗಳು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದಿನನಿತ್ಯ ಇದೇ ಹೆದ್ದಾರಿಯ ನೂರು ಮೀಟರ್‌ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದಾಡುತ್ತಿರುತ್ತಾರೆ. ಈಗಲೇ ಸಮರ್ಪಕವಾಗಿ ಕಾಮಗಾರಿ ನಡೆಸದೇ ಇದ್ದಲ್ಲಿ ಮುಂದಿನ ದಿನದಲ್ಲಿ ಈ ಭಾಗದಲ್ಲಿ ದುರ್ಘ‌ಟನೆಗಳು ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸರಕಾರಿ ಪದವಿ ಪೂರ್ವ ಕಾಲೇಜಿನ ಅಟದ ಮೈದಾನ ಇಡೀ ಗ್ರಾಮದ ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳ ಕ್ರೀಡಾ ಮೈದಾನವಾಗಿದೆ. ಕಾಲೇಜಿನ ರಜಾ ದಿನಗಳಲ್ಲಿ ಸಾರ್ವಜನಿಕ ಕ್ರೀಡಾಕೂಟ ಮಾತ್ರವಲ್ಲದೆ ಇನ್ನಿತರ ಕಾರ್ಯಕ್ರಮ ಇಲ್ಲಿ ನಡೆಯುತ್ತದೆ. ಮೈದಾನದಲ್ಲಿ ಆಟವಾಡುತ್ತಿರುವಾಗ ಚೆಂಡು ಹೆದ್ದಾರಿಗೆ ಹೋಗಿ ಅಪಘಾತ ಸಂಭವಿಸಿದ ಉದಾಹರಣೆಗಳು ಇದೆ. ಹೀಗಿರುವಾಗ ಹೆದ್ದಾರಿ ಇಲಾಖೆ ಚತುಷ್ಪಥ ರಸ್ತೆಯಾಗಿ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಇಲ್ಲಿ ಫ್ಲೈಓವರ್‌ ನಿರ್ಮಿಸುವುದೇ ಅತ್ಯವಶ್ಯಕವಾಗಿತ್ತು. ಈ ವಿಚಾರವಾಗಿ ವಿದ್ಯಾರ್ಥಿಗಳ ಹೆತ್ತವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫ್ಲೈಓವರ್‌ ನಿರ್ಮಿಸದೇ ಇದ್ದಲ್ಲಿ ತೀವ್ರತರ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಯುತ್ತಿದೆ.

ಬೀದಿಗಿಳಿದು ಹೋರಾಟ
ಕಳೆದ ಐದು ವರ್ಷಗಳ ಹಿಂದೆಯೇ ನೀಲ ನಕಾಶೆ ತಯಾರಿಸಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಅಧಿಕಾರಿಗಳು ಫ್ಲೈಓವರ್‌ ಅನ್ನು ಸೇರ್ಪಡೆಗಳಿಸಬೇಕಾಗಿತ್ತು. ಆದರೆ ಅಧಿಕಾರಿಗಳ ಬೇಜವಬ್ದಾರಿಯಿಂದ ಇಲ್ಲಿ ಫ್ಲೈಓವರ್‌ ನಡೆಸಲಾಗಿಲ್ಲ. ಇದನ್ನು ಸರಿಪಡಿಸದಿದ್ದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತವರ ಹೆತ್ತವರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಪಿ.ಯು. ಕಾಲೇಜಿನ ಕಾರ್ಯಧ್ಯಕ್ಷ ಸುರೇಶ ಅತ್ರಮಜಲು ಹೇಳಿದ್ದಾರೆ.

Advertisement

ವಿದ್ಯಾರ್ಥಿಗಳ ಕಾಳಜಿಯೂ ಮುಖ್ಯ
ಈಗಾಗಲೇ ಸರಕಾರಿ ಹೈಸ್ಕೂಲ್‌ನ ಆಟದ ಮೈದಾನದ ಜಾಗವನ್ನು ಹೆದ್ದಾರಿ ಇಲಾಖೆ ವಿಸ್ತರಣೆಗೆ ಪಡೆದುಕೊಂಡಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ವಿಸ್ತರಿಸಲಿ. ಆದರೆ ವಿದ್ಯಾರ್ಥಿಗಳ ಕುರಿತು ಕಾಳಜಿ ವಹಿಸುವುದೂ ಅಷ್ಟೇ ಮುಖ್ಯವಾಗಿದೆ. ಇಲ್ಲಿ ಭವಿಷ್ಯಕ್ಕೆ ಫ್ಲೈಓವರ್‌ ಅಗತ್ಯವಾಗಿದೆ. ಈ ಬಗ್ಗೆ ಗಮನ ಹರಿಸಬೇಕು.
– ದಿವಾಕರ ಆಚಾರ್ಯ,
ಉಪ್ಪಿನಂಗಡಿ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲರು

ಕಾಳಜಿ ವಹಿಸಬೇಕಿತ್ತು
ಅಧಿಕಾರಿಗಳು, ಎಂಜಿನಿಯರ್‌ ಸಹಿತ ಹೆದ್ದಾರಿ ಪ್ರಾಧಿಕಾರ ಸ್ಥಳೀಯ ವಿಚಾರವನ್ನು ಗಮನಿಸಿ ಕಾಳಜಿ ವಹಿಸಬೇಕಿತ್ತು. ಇಲ್ಲಿ ಎರಡು ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ರಸ್ತೆ ತುಂಬ ಅಪಾಯಕಾರಿ. ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳು ಮೇಲಾಧಿಕಾರಿ ಗಳಿಗೆ ಮನವರಿಕೆ ಮಾಡಿ ಫ್ಲೈಓವರ್‌ ಅಗತ್ಯವೆಂಬುದನ್ನು ಮನವರಿಕೆ ಮಾಡಿಕೊಡಬೇಕು.
– ಎನ್‌. ಉಮೇಶ್‌ ಶೆಣೈ,
 ಹೈಸ್ಕೂಲ್‌ ವಿಭಾಗದ ಅಭಿವೃದ್ಧಿ ಸಮಿತಿ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next