Advertisement

ಸುಶಿಕ್ಷಿತ ಸಮಾಜ ನಿರ್ಮಾಣ ಗುರುವಿನ ಜವಾಬ್ದಾರಿ

10:09 AM Sep 05, 2018 | |

ಮಹಾನಗರ: ಜಗತ್ತಿನಲ್ಲಿ ಕದಿಯಲಾಗದ ಏಕೈಕ ಸಂಪತ್ತೆಂದರೆ ವಿದ್ಯೆ ಮಾತ್ರ. ಒಬ್ಬ ವ್ಯಕ್ತಿಯ ಇಡೀ ಬದುಕು ಮತ್ತು ಭವಿಷ್ಯ ನಿರ್ಧರಿತವಾಗುವುದು ಈ ವಿದ್ಯೆಯಿಂದ. ಆದರೆ, ಕಲಿತ ವಿದ್ಯೆ ಉಪಯೋಗಕ್ಕೆ ಬರಬೇಕಾದರೆ ಮತ್ತು ಆ ವ್ಯಕ್ತಿಯನ್ನು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪಿಸಬೇಕಾದರೆ ವಿದ್ಯಾದಾನಗೈದ ಗುರುವಿನ ಪಾತ್ರವೂ ಅಷ್ಟೇ ಮುಖ್ಯ.

Advertisement

ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನ (ಸೆ. 5)ವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಓರ್ವ ಒಳ್ಳೆಯ ಗುರುವಿನಿಂದ ಸಮಾಜಕ್ಕೆ ಉತ್ತಮ ವ್ಯಕ್ತಿಯೊಬ್ಬ ಸಿಗುತ್ತಾನೆ. ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿಯೂ ಗುರುವಿನ ಮೇಲಿದೆ. ಹಿಂದೆಲ್ಲ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಇತ್ತು. ಈಗ ಆಧುನಿಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಿದೆ. ಇಲ್ಲಿ ಜೀವನ ಮೌಲ್ಯಗಳ ಕಲಿಕೆಗಿಂತ ಅಂಕಗಳೇ ಶಿಕ್ಷಣದ ಮಾನದಂಡವಾಗುತ್ತಿರುವುದು ವಿಪರ್ಯಾಸವೂ ಹೌದು. ಈ ನಿಟ್ಟಿನಲ್ಲಿ ಚಿಂತನೆಗೆ ಹಚ್ಚಿದಾಗ ಮಕ್ಕಳಿಗೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಯ ಅವಶ್ಯವೂ ಇದೆ.

ಕೆಲವು ಸಮಯದ ಹಿಂದೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವುದರ ಬಗ್ಗೆ ಹಲವಾರು ರೀತಿಯ ಪರ-ವಿರೋಧ ಚರ್ಚೆಗಳು ನಡೆದವು. ಶಿಕ್ಷಣ ಸಚಿವರು ಹೀಗೊಂದು ಸದ್‌ ಚಿಂತನೆಯನ್ನು ಸಮಾಜದ ಮುಂದಿಟ್ಟಿರುವುದು ಅನೇಕ ಚರ್ಚೆಗಳಿಗೆ ಕಾರಣವಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪುಸ್ತಕ ನೋಡಿ ಪರೀಕ್ಷೆ ಬರೆಯುವುದೆಂದರೆ ನಕಲು ಮಾಡುವುದು ಎಂದರ್ಥವಲ್ಲ; ಬದಲಾಗಿ ವಿದ್ಯಾರ್ಥಿಗಳ ಯೋಚನಾಶಕ್ತಿಗೆ ಸವಾಲೆಸೆಯುವುದೇ ಆಗಿದೆ.

ಸಾಮಾಜಿಕ ತಾಣ ಸದ್ಬಳಕೆ ಕಲಿಸಿ
ಈಗೇನಿದ್ದರೂ ಸಾಮಾಜಿಕ ತಾಣಗಳ ಯುಗ. ವಿದ್ಯಾರ್ಥಿಗಳು ಸಾಮಾಜಿಕ ತಾಣಗಳ ಬಳಕೆಯೊಂದಿಗೆ ಯೋಚನಾಶಕ್ತಿಯನ್ನು ಸಂಕುಚಿತಗೊಳಿಸಿ ಕೊಳ್ಳುತ್ತಿದ್ದಾರೆಂಬ ಕೂಗೂ ನಾಗರಿಕ ಸಮಾಜದ ವಲಯದಲ್ಲಿದೆ. ಆದರೆ ಅದೇ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಕಲಿಕಾಸೂಕ್ತ ವಾತಾವರಣ ನಿರ್ಮಿಸುವಲ್ಲಿ ಶಿಕ್ಷಕರು ಮುಂದಾಗಬೇಕು. ವಾಟ್ಸಾಪ್‌ ಗ್ರೂಪ್‌ ಗಳನ್ನು ರಚನೆ ಮಾಡಿಕೊಂಡು ಪಠ್ಯಪೂರಕ ಚರ್ಚೆ ನಡೆಸುವಂತದ್ದು, ಕೆಲವೊಂದು ಟಾಸ್ಕ್ ಗಳನ್ನು ಕೊಡು ವಂತದ್ದು.. ಈ ಮೂಲಕ ಕಲಿಕೆ ಮತ್ತು ಮನೋರಂಜನೆ ಎರಡನ್ನೂ ಮಕ್ಕಳಿಗೆ ಒದಗಿಸಬೇಕು.

ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಾಣವಾಗಲಿ
ಕ್ಲಾಸ್‌ರೂಂನ ಪಠ್ಯ ಬೋಧನೆಗಿಂತ ಪ್ರಾಯೋಗಿಕ ಚಟುವಟಿಕೆ, ಸೃಜನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವುದರಿಂದ ಮತ್ತು ವಿದ್ಯಾರ್ಥಿಸ್ನೇಹಿ ವಾತಾವರಣವನ್ನು ಶಾಲೆಗಳಲ್ಲಿ ಕಲ್ಪಿಸಿಕೊಡುವುದರಿಂದ ಶಾಲೆ ಸಹಜವಾಗಿಯೇ ವಿದ್ಯಾರ್ಥಿಗಳ ಮಿತ್ರನಾಗುತ್ತಾನೆ.

Advertisement

ಶಾಲೆ ಸುಂದರಗೊಳಿಸಿ 
ಇತ್ತೀಚೆಗೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದನ್ನು ಕಾಣಬಹುದು. ಶಾಲೆಗೆ ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಶಾಲೆಯನ್ನು ಸುಂದರಗೊಳಿಸುವುದು, ಆಂಗ್ಲ ಶಿಕ್ಷಕರನ್ನು ನಿಯೋಜಿಸಿ ಇಂಗ್ಲಿಷ್‌ ಶಿಕ್ಷಣವನ್ನೂ ಕೊಡಿಸುವಂತದ್ದು ಮುಂತಾದವುಗಳನ್ನು ಮಾಡಿದರೆ ಮಕ್ಕಳಿಗೂ ಕನ್ನಡ ಶಾಲೆಗಳ ಬಗ್ಗೆ ಒಲವು ಮೂಡುತ್ತದೆ. ಉದಾಹರಣೆಗೆ ಇತ್ತೀಚೆಗೆ ಪಂಜಿಮೊಗರು ಸರಕಾರಿ ಶಾಲೆಯನ್ನು ರೈಲು ಬಂಡಿ ಮಾದರಿಯಲ್ಲಿ ಚಿತ್ರಿಸಲಾಯಿತು. ಮಣ್ಣಗುಡ್ಡ ಸರಕಾರಿ ಶಾಲೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆಯೇ ಮಕ್ಕಳಿಗೆ ವಿಜ್ಞಾನ ಬೋಧನ ಕೊಠಡಿ ತೆರೆದು ವಿಜ್ಞಾನವನ್ನು ಪ್ರಾಯೋಗಿಕವಾಗಿಯೇ ಕಲಿಸಲಾಯಿತು. ಇಂತಹ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಿಂದ ದೂರ ಸರಿಯಲಾರರು ಎಂಬುದು ಒಂದು ಅಭಿಪ್ರಾಯ. 

Advertisement

Udayavani is now on Telegram. Click here to join our channel and stay updated with the latest news.

Next