ತುಮಕೂರು: ನಗರದ ಹೃದಯ ಭಾಗವಿರುವ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಇದ್ದಕ್ಕಿದ್ದ ಹಾಗೆ ಸಮಾಧಿಯೊಂದು ನಿರ್ಮಾಣಗೊಂಡು ನಗರದ ನಾಗರಿಕರಲ್ಲಿ ಇಡೀ ದಿನ ಆತಂಕ ಸೃಷ್ಟಿಸಿತು. ಬುಧವಾರ ಬೆಳಗ್ಗೆ ವಾಯುವಿಹಾರಕ್ಕಾಗಿ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಹೋದವರು ಬೆಳ್ಳಂಬೆಳಿಗ್ಗೆಯೇ ಸಮಾಧಿಯನ್ನು ಕಂಡು ಆತಂಕಗೊಂಡರು. ಇದ್ದಕ್ಕಿದ್ದ ಹಾಗೆ ಇಲ್ಲಿ ಸಮಾಧಿಯಾಗಿದೆ ಯಲ್ಲಾ ಒಳಗಡೆ ಯಾರನ್ನೋ ಮುಚ್ಚಿ ಸಮಾಧಿ ಕಟ್ಟಿರಬಹುದು ಎನ್ನುವ ಅನುಮಾನ ಮೂಡಿತು. ಇದು ನಗರದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಜನ ತಂಡೋಪತಂಡವಾಗಿ ಮೈದಾನಕ್ಕೆ ಆಗಮಿಸಿ ಬಂದು ನೋಡಿದರು. ಕೆಲವರು ಇದು ಆರ್.ಟಿ.ಐ. ಕಾರ್ಯಕರ್ತನನ್ನು ಮುಚ್ಚಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರೆ ಮತ್ತೆ ಕಲವರು ಇಲ್ಲಾ ಇಬ್ಬರು ಪ್ರೇಮಿಗಳನ್ನು ಮುಚ್ಚಿ ಸಮಾಧಿ ಕಟ್ಟಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಕೊನೆಗೆ ಕಾಲೇಜು ಪ್ರಾಂಶುಪಾಲ ಜಯರಾಮಯ್ಯ ಹೊಸಬಡವಾಣೆ ಪೊಲೀಸ್ ಠಾಣೆ ದೂರು ನೀಡಿದರು. ಪೊಲೀಸರು. ಸ್ಥಳಕ್ಕೆ ಧಾವಿಸಿ ಸಮಾಧಿಯನ್ನು ಅಗಿಸಿ ನೋಡಿದರು. ಸಮಾಧಿ ಅಗೆದು ನೋಡಿದರೆ ಅಲ್ಲಿ ಏನು ಇರಲಿಲ್ಲ. ಸಮಾಧಿ ಮೇಲೆ ದೀಪ ಇಡುವ ಗೂಡು ಕಟ್ಟಿ ಅದರ ಮೇಲೆ ಆಂಜನೇಯ ಸ್ವಾಮಿ ಪೊಟೋ ಇಟ್ಟಿದ್ದರ ಹಿನ್ನೆಲೆಯಲ್ಲಿ ಅಲ್ಲಿದ್ದ ಜನರಲ್ಲಿ ಮತ್ತೂಂದು ಆನುಮಾನ ಮೂಡಿತು. ಕಳೆದ ಆರೇಳು ತಿಂಗಳ ಹಿಂದೆ ವಿದ್ಯುತ್ ತಂತಿ ತಗಲಿ ಕೋತಿ ಸತ್ತು ಹೋಗಿತ್ತು. ಸಮಾಧಿ ಕಟ್ಟಿದ್ದ ಜಾಗದಲ್ಲಿ ಕೋತಿಯನ್ನು ಮಣ್ಣು ಮಾಡಿದ್ದರು ಈಗ ಅದರ ಮೇಲೆ ಸಮಾಧಿ ನಿರ್ಮಿಸಿರಬಹುದು ಎಂದು ಮಾತನಾಡಿಕೊಂಡರು. ಒಟ್ಟಾರೆಯಾಗಿ ಯಾರಿಗೂ ಮಾಹಿತಿ ಇಲ್ಲದೆ ರಾತ್ರೋ ರಾತ್ರಿ ದಡೀರನೇ ಸಮಾಧಿ ನಿರ್ಮಾಣ ಮಾಡಿರುವ ಹಿನ್ನೆಲೆ ಯಲ್ಲಿ ಜನರು ಆತಂಕ ಪಟ್ಟರು. ಪೊಲೀಸರು ಅದನ್ನು ತೆರವುಗೊಳಿಸಿದರು.