ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿರುವ ಉನ್ನತ ಶಿಕ್ಷಣ ಮತ್ತು ಐಟಿ – ಬಿಟಿ ಸಚಿವ ಸಿ.ಎನ್. ಅಶ್ವಥ್ ನಾರಾಯಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಒತ್ತಾಯಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಜೀವ ಬೆದರಿಕೆ ಹಾಕಿದ ಸಚಿವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ಪ್ರತಿಪಕ್ಷ ನಾಯಕರ ವಿರುದ್ಧ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಖದೇ ಇರುವುದು ಕಾನೂನು ಸುವ್ಯವಸ್ಥೆ ವೈಫಲ್ಯವಾಗಿದೆ. ಪೊಲೀಸರು ಸರ್ಕಾರದ ಕೈಗೊಂಬೆಯಾಗಿರುವುದು ಸ್ಪಷ್ಟವಾಗಿದೆ ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸಚಿವ ಅಶ್ವಥ್ ನಾರಾಯಣ ಅವರು ಸಂವಿಧಾನದ ಮೂಲ ಆಶಯಗಳನ್ನು ಧಿಕ್ಕರಿಸಿದ್ದಾರೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಟಿಪ್ಪು ಸುಲ್ತಾನ್ ಅವರ ಶೌರ್ಯ, ಸಾಹಸವನ್ನು ಕೊಂಡಾಡಿದ್ದಾರೆ.
ಮತ್ತೊಂದೆಡೆ ಅಶ್ವಥ್ ನಾರಾಯಣ್ ಅವರು ಟಿಪ್ಪುವನ್ನು ಕೊಂದ ರೀತಿಯಲ್ಲೇ ಸಿದ್ದರಾಮಯ್ಯ ಅವರಿಗೆ ಗತಿ ಕಾಣಿಸಬೇಕು ಎಂದು ಬೆದರಿಕೆ ಹಾಕಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ, ಸಚಿವರು ರಾಜ್ಯದ ರಾಜಕೀಯ ಸಂಸ್ಕೃತಿಗೆ ಕೆಟ್ಟ ಹೆಸರು ತಂದಿದ್ದಾರೆ ಎಂದು ರಕ್ಷಾ ರಾಮಯ್ಯ ಟೀಕಿಸಿದ್ದಾರೆ.
ಸಚಿವರ ವಿರುದ್ದ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಸಂವಿಧಾನ ರಕ್ಷಕರಾದ ತಾವು ಸಿದ್ದರಾಮಯ್ಯ ಅವರಿಗೆ ರಕ್ಷಣೆ ನೀಡಬೇಕು. ಸಂವಿಧಾನ ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ರಕ್ಷಾ ರಾಮಯ್ಯ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಸಿಯುಕೆ ಆವರಣದಲ್ಲಿ ಭಾರಿ ಬೆಂಕಿ… ಗಿಡ ಮರ ಪ್ರಾಣಿ–ಪಕ್ಷಿಗಳು ಭಸ್ಮ