Advertisement

18 ರೂ. ಸಂಬಳ ಪಡೆಯುತ್ತಿದ್ದ ಹುಡುಗ ಇಂದು ಕೋಟ್ಯಧಿಪತಿ…ಕಾರ್ಕಳ ಮೂಲದ ಜಯರಾಮ್ ಬನಾನ್ ಯಶೋಗಾಥೆ

01:38 PM Mar 04, 2023 | ನಾಗೇಂದ್ರ ತ್ರಾಸಿ |

ಅಂದು ಮನೆಯಲ್ಲಿ ಕಡುಬಡತನ ಏನು ಮಾಡಬೇಕು ಎಂದು ಯೋಚಿಸುವಷ್ಟು ವಯಸ್ಸು ಕೂಡಾ ಅಲ್ಲ, ಆದರೆ ಬದುಕನ್ನು ಕಟ್ಟಿಕೊಳ್ಳಲೇಬೇಕು ಎಂಬ ಛಲ, ಹಂಬಲದ ಪರಿಣಾಮ ಹೋಟೆಲ್ ನಲ್ಲಿ ಪಾತ್ರೆ ತೊಳೆದು 18 ರೂಪಾಯಿ ಸಂಬಳ ಪಡೆದು ಜೀವನ ಸಾಗಿಸಿದ್ದ ಹುಡುಗ ಇಂದು ಪ್ರತಿಷ್ಠಿತ ಹೋಟೆಲ್ ಗಳ ಮಾಲೀಕ, ಕೋಟ್ಯಧಿಪತಿ, ದೋಸಾ ಕಿಂಗ್ ಎಂದು ಖ್ಯಾತಿ ಪಡೆದಿದ್ದಾರೆ. ಇವರು ಬೇರಾರು ಅಲ್ಲ, ಉಡುಪಿಯ ಕಾರ್ಕಳ ಮೂಲದ ಜಯರಾಮ್ ಬನಾನ್ ಅವರ ಯಶೋಗಾಥೆಯಾಗಿದೆ.

Advertisement

ಇದನ್ನೂ ಓದಿ:ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ; ನಟ ಶೀಜಾನ್ ಖಾನ್ ಗೆ ಜಾಮೀನು

ಉತ್ತರ ಭಾರತದಲ್ಲಿ ಸಾಗರ್ ರತ್ನ ಹೋಟೆಲ್ ಗಳನ್ನು ಸ್ಥಾಪಿಸಿ ಜನಪ್ರಿಯರಾಗಿರುವ ಜಯರಾಮ್ ಅವರು ಜಗತ್ತಿನಾದ್ಯಂತ ನೂರಕ್ಕೂ ಅಧಿಕ ರೆಸ್ಟೋರೆಂಟ್ಸ್ ಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ ಜಯರಾಮ್ ಬನಾನ್ ಅವರ ವಾರ್ಷಿಕ ವಹಿವಾಟು 300 ಕೋಟಿಗೂ ಅಧಿಕ.

13ನೇ ವರ್ಷಕ್ಕೆ ಮನೆಯಿಂದ ಓಡಿಹೋಗಿ ಮುಂಬೈ ಸೇರಿಕೊಂಡಿದ್ರು!

ಜಯರಾಮ್ ಬನಾನ್ ಅವರು ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರು. ಅವರ ತಂದೆ ಚಾಲಕರಾಗಿ ದುಡಿಯುತ್ತಿದ್ದರು. ಚಿಕ್ಕಂದಿನಿಂದಲೂ ಬಡತನದಲ್ಲೇ ಬದುಕು ಸಾಗಿಸುತ್ತಿದ್ದ ಜಯರಾಮ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಇದರಿಂದ ತಂದೆ ಹೊಡೆಯುತ್ತಾರೆಂಬ ಭಯದಿಂದ ತಂದೆಯ ಜೇಬಿನಲ್ಲಿದ್ದ ಹಣವನ್ನೇ ಕದ್ದು ತನ್ನ 13ನೇ ವಯಸ್ಸಿಗೆ ಮನೆ ಬಿಟ್ಟು ಮುಂಬೈ ಸೇರಿಕೊಂಡಿದ್ದರು.

Advertisement

ಹೀಗೆ ಮುಂಬೈನ ಹೋಟೆಲ್ ನಲ್ಲಿ ಪ್ಲೇಟ್ ಗಳನ್ನು ತೊಳೆದು, ಟೇಬಲ್ ಕ್ಲೀನ್ ಮಾಡಿ ಜಯರಾಮ್ ಜೀವನ ಸಾಗಿಸಿದ್ದರು. ಸುಮಾರು ಆರು ವರ್ಷಗಳ ಕಾಲ ಹೋಟೆಲ್ ನಲ್ಲಿ ದುಡಿದ ಜಯರಾಮ್ ನಂತರ Waiter ಆಗಿ ದುಡಿಯಲು ಆರಂಭಿಸಿದ್ದರು. ಹಂತ, ಹಂತವಾಗಿ ಮೇಲಕ್ಕೇರಿದ್ದ ಜಯರಾಮ್ ಮ್ಯಾನೇಜರ್ ಆಗಿ ಪದನ್ನೋತಿ ಪಡೆದಿದ್ದರು. ಇದರಿಂದಾಗಿ ಹೋಟೆಲ್ ವ್ಯವಹಾರದ ಎಲ್ಲಾ ವಿಷಯಗಳಲ್ಲೂ ಪರಿಣತಿ ಪಡೆದುಕೊಳ್ಳುವಂತಾಗಿತ್ತು. ದೀರ್ಘ ಪಯಣದ ಬಳಿಕ ಜಯರಾಮ್ ಬನಾನ್ ಅವರು ಮುಂಬೈನಲ್ಲಿ ದಕ್ಷಿಣ ಭಾರತೀಯ ಊಟೋಪಚಾರದ ಹೋಟೆಲ್ ಪ್ರಾರಂಭಿಸುವ ಮೂಲಕ ಮಾಲೀಕರಾಗಿ ಭಡ್ತಿ ಪಡೆದಿದ್ದರು.

1986ರ ಡಿಸೆಂಬರ್ 4ರಂದು ತಾವು ಉಳಿತಾಯ ಮಾಡಿದ ಹಣದಿಂದ ಹಾಗೂ ಗೆಳೆಯರು, ಸಂಬಂಧಿಕರ ನೆರವಿನೊಂದಿಗೆ ಡಿಫೆನ್ಸ್ ಕಾಲೋನಿಯ ಮಾರುಕಟ್ಟೆ ಪ್ರದೇಶದಲ್ಲಿ ಕೇವಲ 40 ಜನರು ಕುಳಿತುಕೊಳ್ಳುವ ಸಾಮರ್ಥ್ಯದ “ಸಾಗರ್” ಎಂಬ ಸೌತ್ ಇಂಡಿಯನ್ (ವೆಜಿಟೇರಿಯನ್) ಹೋಟೆಲ್ ಅನ್ನು ಜಯರಾಮ್ ಬನಾನ್ ಪ್ರಾರಂಭಿಸಿದ್ದರು.

ಹೋಟೆಲ್ ಗಾಗಿ ಪ್ರತಿ ವಾರ 3,250 ರೂಪಾಯಿ ಬಾಡಿಗೆ ಕಟ್ಟಬೇಕಾಗಿತ್ತು. ಹೋಟೆಲ್ ಆರಂಭಗೊಂಡ ಮೊದಲ ದಿನ ಕೇವಲ 408 ರೂಪಾಯಿ ವ್ಯಾಪಾರ ಆಗಿತ್ತು. ಆ ಸಂದರ್ಭದಲ್ಲಿ ದೆಹಲಿಯ ಜನರು ದಕ್ಷಿಣ ಭಾರತದ ಖಾದ್ಯಗಳನ್ನು ತಿನ್ನಲು ವುಡ್ ಲ್ಯಾಂಡ್ ಮತ್ತು ದಾಸ್ ಪ್ರಕಾಶ್ ರೆಸ್ಟೋರೆಂಟ್ ಗಳಿಗೆ ಹೋಗುತ್ತಿದ್ದರು. ಕೊನೆಗೆ ಅದೃಷ್ಟ ಎಂಬಂತೆ ವುಡ್ ಲ್ಯಾಂಡ್ ರೆಸ್ಟೋರೆಂಟ್ ಜಯರಾಮ್ ಬನಾನ್ ಅವರ ತೆಕ್ಕೆಗೆ ಬಿದ್ದಿತ್ತು. ತದನಂತರ ವುಡ್ ಲ್ಯಾಂಡ್ ಹೋಟೆಲ್ ಹೆಸರನ್ನು “ಸಾಗರ್ ರತ್ನ” ಎಂದು ಬದಲಾಯಿಸಿದ್ದರು.

ವರ್ಷಗಳ ನಂತರ ಕೆನಡಾ, ಸಿಂಗಾಪುರ್, ಬ್ಯಾಂಕಾಕ್ ಸೇರಿದಂತೆ ವಿದೇಶದಾದ್ಯಂತ ಸಾಗರ್ ರತ್ನ ಹೋಟೆಲ್ ಗಳನ್ನು ಜಯರಾಮ್ ಬನಾನ್ ಪ್ರಾರಂಭಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಬೆಳೆದು ಬಿಟ್ಟಿದ್ದಾರೆ.

ಅತ್ಯುತ್ತಮ ಗುಣಮಟ್ಟದ ಸಸ್ಯಹಾರಿ ಊಟವನ್ನು ನೀಡುವ ಮೂಲಕ ಉತ್ತರ ಭಾರತದಲ್ಲಿ ಸಾಗರ್ ರತ್ನ ಹೋಟೆಲ್ ಸಮೂಹ ಭಾರೀ ಜನಪ್ರಿಯತೆ ಗಳಿಸಿತ್ತು. ಅಷ್ಟೇ ಅಲ್ಲ ದಿ ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ ಸಮೂಹ ಕೂಡಾ ಜಯರಾಮ್ ಬನಾನ್ ಅವರ ಒಡೆತನಕ್ಕೆ ಸೇರಿದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next