Advertisement

ಮುಡಾ ನಿವೇಶನದಲ್ಲಿ ಗುಂಪು ಮನೆ ನಿರ್ಮಿಸಿ

10:10 PM Nov 08, 2019 | Lakshmi GovindaRaju |

ಮೈಸೂರು: ನರಸಿಂಹರಾಜ ಕ್ಷೇತ್ರದ ಹಲವೆಡೆ ಮುಡಾ ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ, ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ನಿವೇಶನ ಹೊಂದಿರುವವರಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅಗತ್ಯ ಅನುದಾನ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

40 ಸಾವಿರ ನಿವೇಶನ ರಹಿತರು: ಮೈಸೂರು ನಗರದಲ್ಲಿ ಸುಮಾರು 40 ಸಾವಿರ ಮಂದಿ ನಿವೇಶನ ರಹಿತರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ, ಖಾಲಿ ಉಳಿದಿರುವ ಸಿಎ ನಿವೇಶನವನ್ನು ಬಳಸಿಕೊಂಡು ಮನೆ ಕಟ್ಟಿಸಿಕೊಟ್ಟರೆ ಹೇಗೆ ಎಂದು ಪ್ರಶ್ನಿಸಿ, ಅದು ಸಾಧ್ಯವಾಗದಿದ್ದರೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮುಡಾ ಜಾಗಗಳ ಒತ್ತುವರಿ ತೆರವುಗೊಳಿಸಿ ಗುಂಪು ಮನೆ ನಿರ್ಮಿಸಿಕೊಡಿ ಎಂದರು.

ತರಾಟೆ: ನರ್ಮ್ ಯೋಜನೆಯಡಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಏಕಲವ್ಯನಗರ ಸೇರಿದಂತೆ ವಿವಿಧೆಡೆ ನಿರ್ಮಿಸಿರುವ ಮನೆಗಳನ್ನು ಇನ್ನೂ ಹಂಚಿಕೆ ಮಾಡದಿರುವ ಬಗ್ಗೆ ಮಂಡಳಿಯ ಅಧಿಕಾರಿಗಳಾದ ಕಪನಿಗೌಡ ಮತ್ತು ತೇಜಸ್ವಿನಿ ಅವರನ್ನು ತರಾಟೆಗೆ ತೆಗೆದು ಕೊಂಡ ಪ್ರತಾಪ್‌ಸಿಂಹ, ಏಕಲವ್ಯ ನಗರ ನಿವಾಸಿಗಳಿಗೆ ಮನೆ ಹಂಚಿಕೆ ಮಾಡದೆ, ಕೆಲವು ಅನಧಿಕೃತ ವ್ಯಕ್ತಿಗಳನ್ನು ನಿಯಂತ್ರಿಸುತ್ತಿದ್ದೀರಿ.

ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ನಮಗಿಂತಲೂ ಚೆನ್ನಾಗಿ ರಾಜಕೀಯ ಮಾಡಲು ಬರುತ್ತದೆ. ಇಲ್ಲಿಯೇ ಏಕೆ ಸುತ್ತಾಡುತ್ತಿದ್ದೀರಿ, ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ಸ್ಲಂನಲ್ಲಿ ವಾಸಿಸುತ್ತಿರುವವರು ಒಳ್ಳೆಯವರು. ಕೊಳಕು ನಾರುತ್ತಿರುವುದು ನಿಮ್ಮ ಇಲಾಖೆ ಎಂದು ಕಿಡಿಕಾರಿದರು.

Advertisement

ಫ‌ಲಾನುಭವಿಗಳ ಪತ್ತೆಗೆ ತಂಡ: ಈ ವೇಳೆ ಮಧ್ಯೆಪ್ರವೇಶಿಸಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಕಳೆದ ಬಾರಿ ಕೆಲವರಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಿದಾಗ ಕೆಲ ಪ್ರಭಾವಿಗಳು ಮನೆ ಪಡೆದುಕೊಂಡಿದ್ದಾರೆ. ಇದರ ಜತೆಗೆ ಅಲೆಮಾರಿಗಳಿಗೂ ಮನೆ ನೀಡಲು ತೀರ್ಮಾನಿಸಲಾಗಿತ್ತು.

ಅರ್ಹ ಫ‌ಲಾನುಭವಿಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳ ತಂಡವೊಂದು ಸರ್ವೇ ಮಾಡಿದೆ. ಬಹುಪಾಲು ಮಂದಿ ನಿರ್ಗತಿಕರೇ ಇದ್ದಾರೆ. ಹೀಗಿದ್ದರೂ, ಕೆಲವರು ಅನಧಿಕೃತ ವ್ಯಕ್ತಿಗಳು ಮತ್ತು ಅರ್ಹರಲ್ಲದವರು ಸೇರಿದ್ದಾರೆ. ಮನೆಗಾಗಿ ಹೋರಾಟ ಮಾಡುವವರಲ್ಲಿ ಮೂರ್‍ನಾಲ್ಕು ಗುಂಪು ಇರುವುದರಿಂದಲೂ ಈ ಸಮಸ್ಯೆ ಎದುರಾಗುತ್ತಿದೆ ಎಂದು ವಿವರಿಸಿದರು.

ಪಡಿತರ ಚೀಟಿ: ಮೈಸೂರಿನಲ್ಲಿ 7.12 ಲಕ್ಷ ಬಿಪಿಎಲ್‌ ಪಡಿತರ ಚೀಟಿ ನೀಡಲಾಗಿದೆ. ಆದ್ದರಿಂದ ಮತ್ತೂಮ್ಮೆ ಪರಿಶೀಲಿಸಿ, ಯಾರು ಎಪಿಎಲ್‌ ವ್ಯಾಪ್ತಿಗೆ ಬರುತ್ತಾರೋ ಅವರನು ಮುಲಾಜಿಲ್ಲದೆ ಸೇರಿಸಿ. ಅಂತೆಯೇ ಅನಿಲ ಭಾಗ್ಯ ಯೋಜನೆಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಭೂಗತ ಕೇಬಲ್‌ ಅಳವಡಿಕೆ: ಮೈಸೂರು ನಗರದಲ್ಲಿ ಭೂಗತ ಕೇಬಲ್‌ ಅಳವಡಿಕೆಗೆ ಒಂದು ಮೀಟರ್‌ಗೆ 1,600 ರೂಪಾಯಿ ದರದಲ್ಲಿ ಟೆಂಡರ್‌ ನೀಡಲಾಗಿದೆ. ಇದನ್ನು ಎಲ್‌ ಆ್ಯಂಡ್‌ ಟಿ ಕಂಪನಿಯವರು ಬೇರೊಬ್ಬರಿಗೆ ಕೇವಲ 200 ರಿಂದ 250 ರೂಪಾಯಿಗೆ ಉಪ ಗುತ್ತಿಗೆ ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ಎಷ್ಟು ನಷ್ಟ ಆಗುತ್ತಿದೆ.

ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಇಂತಹ ಸಮಸ್ಯೆ ಎದುರಾಗುವುದಿಲ್ಲ. ಕಮೀಷನ್‌ ಆಸೆಗೆ ಬಿದ್ದಾಗ ಇಂಥದ್ದೆಲ್ಲ ಆಗುತ್ತದೆ. ಮುಲಾಜಿಲ್ಲದೆ ಕೆಲಸ ಮಾಡಿಸಿದಾಗ ಇಂತಹ ನಷ್ಟವಾಗುವುದಿಲ್ಲ ಎಂದು ಚೆಸ್ಕಾಂ ಅಧಿಕಾರಿಗಳಿಗೆ ಹೇಳಿದರು. ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಪಂ ಸಿಇಒ ಕೆ.ಜ್ಯೋತಿ ಸಭೆಯಲ್ಲಿ ಹಾಜರಿದ್ದರು.

ಆಯುಷ್ಮಾನ್‌ ಯೋಜನೆ ತಲುಪಿಸಿ: ಹುಣಸೂರು ಮತ್ತು ಮೈಸೂರಿನ ತುಳಸಿದಾಸಪ್ಪ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಪ್ರಗತಿ ಮತ್ತು ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸಂಸದರು, ಜಿಲ್ಲೆಯಲ್ಲಿ 11ವಿಧಾನಸಭಾ ಕ್ಷೇತ್ರಗಳಿವೆ. ನೀವು ಕೇವಲ 19 ಕೇಂದ್ರ ತೆರೆದರೆ ಪ್ರಯೋಜನವಿಲ್ಲ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯ ಸವಲತ್ತು ಎಲ್ಲರಿಗೂ ದೊರಕಲು ಇದನ್ನು ಆಂದೋಲನ ರೂಪದಲ್ಲಿ ನಡೆಸಬೇಕು ಎಂದು ತಾಕೀತು ಮಾಡಿದರು. ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಮಾತನಾಡಿ, ಜಿಲ್ಲೆಯ 33 ಹೋಬಳಿ ಕೇಂದ್ರದಲ್ಲೂ ಈ ಬಗ್ಗೆ ಅರಿವು ಮೂಡಿಸುವ ಮತ್ತು ಸ್ಥಳದಲ್ಲಿಯೇ ಆಯುಷ್ಮಾನ್‌ ಭಾರತ್‌ ಕಾರ್ಡ್‌ ಮಾಡಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಹೇಳಿದರು.

ಮತಾಂತರಕ್ಕೆ ಅಸ್ಪದ ಕೊಡಬೇಡಿ: ನಾಯಕ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ತೀರಾ ಕಡಿಮೆ. ಆದರೂ ಈ ಹಿಂದಿನ ತಹಶೀಲ್ದಾರ್‌ ನವೀನ್‌ ಜೋಸೆಫ್ ಎಂಬವವರು ಕ್ರಿಶ್ಚಿಯನ್ನರ ಎಲ್ಲಾ ಪಂಗಡಕ್ಕೂ ಪ್ರತ್ಯೇಕವಾಗಿ ಸ್ಮಶಾನಕ್ಕೆ ಜಾಗ ನೀಡಿದ್ದಾರೆ.

ಮೊದಲು ಅದನ್ನು ಹಿಂದಕ್ಕೆ ಪಡೆದುಕೊಂಡು ಯಾವುದಾದರೂ ಒಂದು ಜಾಗ ನೀಡಿ. ಹೆಚ್ಚು ಜಾಗ ನೀಡಿದರೆ ಅಲ್ಲಿ ಸ್ಮಶಾನದ ಬದಲಿಗೆ ಬೇರೊಂದು ಕೇಂದ್ರ ತೆರೆದು ಇನ್ನಷ್ಟು ಮಂದಿಯನ್ನು ಮತಾಂತರ ಮಾಡುತ್ತಾರೆ ಎಂದು ಸಂಸದ ಪ್ರತಾಪ್‌ ಸಿಂಹ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next