Advertisement

ಶೌಚಾಲಯ ಬಳಸಿ ಸ್ವತ್ಛ ವಾತಾವರಣ ನಿರ್ಮಿಸಿ

10:41 AM Nov 20, 2018 | Team Udayavani |

ಕಲಬುರಗಿ: ಜಿಲ್ಲೆಯ ನಾಗರಿಕರೆಲ್ಲರೂ ಕಡ್ಡಾಯವಾಗಿ ಶೌಚಾಲಯ ಬಳಸುವ ಮೂಲಕ ಗ್ರಾಮಗಳಲ್ಲಿ ಸ್ವತ್ಛ ವಾತಾವರಣ ನಿರ್ಮಿಸಿ ಆರೋಗ್ಯವಂತ ಜಿಲ್ಲೆಯನ್ನಾಗಿಸಬೇಕು ಎಂದು ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮನವಿ ಮಾಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಶೌಚಾಲಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವತ್ಛ ಭಾರತ ಮಿಷನ್‌ ಕಾರ್ಯಕ್ರಮದಡಿ ಶೌಚಾಲಯ ನಿರ್ಮಿಸಲಾಗಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನೂತನವಾಗಿ ನಿರ್ಮಿಸಲಾಗಿರುವ ಮನೆಗಳಿಗೂ ಶೌಚಾಲಯ ನಿರ್ಮಿಸಲು ಗುರಿ ಹೊಂದಲಾಗಿದ್ದು, ಮುಂದಿನ ತಿಂಗಳಿನಿಂದ ಶೌಚಾಲಯ ನಿರ್ಮಿಸುವುದನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು. 

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ ಮಾತನಾಡಿ, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಿಸಲು 2012ರಲ್ಲಿ ಕೈಗೊಂಡ ಸಮೀಕ್ಷೆಯಂತೆ 2,14,564 ಶೌಚಾಲಯ ನಿರ್ಮಿಸಬೇಕಾಗಿತ್ತು. ಗ್ರಾಪಂ, ತಾಪಂ, ಜಿಪಂ, ವಿವಿಧ ಇಲಾಖೆಗಳ ಹಾಗೂ ಜನಪ್ರತಿನಿಧಿಗಳ ಸಹಾಯದೊಂದಿಗೆ ಶೌಚಾಲಯ ನಿರ್ಮಿಸುವ ಗುರಿ ಪೂರ್ಣಗೊಳಿಸಲಾಗಿದೆ. ಇದರಿಂದ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಹೇಳಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೊಸ ಮನೆಗಳು ಕಟ್ಟಿರುವುದರಿಂದ ಸುಮಾರು 68,000 ಶೌಚಾಲಯ ನಿರ್ಮಿಸಬೇಕಾಗಿದೆ. ಈ ಕುಟುಂಬಗಳಿಗೂ ಶೌಚಾಲಯ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. 

ಶೌಚಾಲಯ ಬಳಕೆ ನಿಟ್ಟಿನಲ್ಲಿ ಶಾಲಾ ಮಕ್ಕಳಲ್ಲಿ ನಡುವಳಿಕೆ ಬದಲಾವಣೆ ತರಲು ಶಾಲಾ ಮಕ್ಕಳನ್ನು ಸ್ವತ್ಛ ಭಾರತ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಕ್ಕಳು ತಮ್ಮ ಕುಟುಂಬ ಸದಸ್ಯರಿಗೂ ಕಡ್ಡಾಯವಾಗಿ ಶೌಚಾಲಯ ಬಳಸುವುದನ್ನು ಹೇಳಬೇಕು ಎಂದು ತಿಳಿಸಲಾಗುತ್ತಿದೆ. ಶೌಚಾಲಯ ಬಳಕೆಯಿಂದ ಹಾಗೂ ಘನ-ದ್ರವ ತ್ಯಾಜ್ಯಗಳ ಸಮರ್ಪಕ ವಿಲೇವಾರಿಯಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬಹುದಾಗಿದೆ.

ಮಕ್ಕಳಲ್ಲಿ ಶೌಚಾಲಯ ಬಳಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ರಂಗೋಲಿ, ಚಿತ್ರಕಲೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶರಬಯ್ಯ ಗಾದಾ, ಕನ್ಯಾಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ರೇವಣಸಿದ್ದಪ್ಪ ತಮ್ಮ ಅನಿಸಿಕೆ ಹಂಚಿಕೊಂಡರು.

Advertisement

ಇದೇ ಸಂದರ್ಭದಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್‌ ಶೌಚಾಲಯ ಬಳಕೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ವತ್ಛ ಭಾರತ ಮಿಷನ್‌ ಅಡಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಂಡಿದ ಭಾಷಣ, ರಂಗೋಲಿ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಉಪ ಕಾರ್ಯದರ್ಶಿ ಸಂಪತ್ತ ಪಾಟೀಲ, ಸ್ವತ್ಛ ಭಾರತ ಮಿಷನ್‌ ಜಿಲ್ಲಾ ಸಂಯೋಜಕಿ ಗುರುಬಾಯಿ ಪಾಟೀಲ ಪಾಲ್ಗೊಂಡಿದ್ದರು.
 
ಇದಕ್ಕೂ ಮುನ್ನ ನಗರದ ರಂಗಮಂದಿರದಿಂದ ಜಿಪಂ ಸಭಾಂಗಣದವರೆಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಶೌಚಾಲಯ ದಿನದ ಜಾಥಾಕ್ಕೆ ಕಲಬುರಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಶೃಂಗೇರಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next