Advertisement

ಬುಡೋಳಿ-ನೇರಳಕಟ್ಟೆ ರಸ್ತೆ: ಭಾರೀ ಭೂಕುಸಿತ ಸಾಧ್ಯತೆ

09:31 PM Jun 11, 2019 | mahesh |

ವಿಟ್ಲ: ಮಾಣಿ ಸಮೀಪದ ಬುಡೋಳಿ – ನೇರಳಕಟ್ಟೆ ಸಂಪರ್ಕ ರಸ್ತೆ ಕುಸಿತಕ್ಕೊಳಗಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಸುಮಾರು 2 ಕಿ.ಮೀ. ದೂರದ ಈ ಜಿ.ಪಂ. ರಸ್ತೆಯ ಕೂಡೋಲು ಎಂಬಲ್ಲಿ ಕಳೆದ ಮಳೆಗಾಲ ದಲ್ಲಿ ಭಾರೀ ಭೂಕುಸಿತ ಉಂಟಾಗಿತ್ತು. ಸುಮಾರು ನೂರು ಮೀ. ಅಗಲಕ್ಕೆ ಭೂಮಿ ಕುಸಿದಿತ್ತು. ಕಾಂತಪ್ಪ ಗೌಡ ಅವರ ಫಲಭರಿತ ತೋಟಕ್ಕೆ ಹಾನಿಯಾಗಿತ್ತು. ಪ್ರಸ್ತುತ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿದ್ದರೂ ಆಮೆ ಗತಿಯಲ್ಲಿ ಸಾಗುತ್ತಿದೆ.

Advertisement

ಕೆಳಗಡೆ ಮಳೆಗಾಲ ಸಂದರ್ಭ ತೋಡು ಹರಿಯುತ್ತದೆ. ಈ ರಸ್ತೆಗೆ ಶೀಘ್ರ ತಡೆಗೋಡೆ ನಿರ್ಮಾಣವಾಗಬೇಕು. ಎಚ್ಚರಿಕೆ ಫಲಕ ಹಾಕಬೇಕು, ಈ ಜಾಗದಲ್ಲಿ ದಾರಿದೀಪ ಅಳವಡಿಸ ಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಈ ರಸ್ತೆಯಲ್ಲಿ ವಾಹನ ಸಂಚಾರ ಅಪಾಯ. ಸ್ವಲ್ಪ ಎಚ್ಚರ ತಪ್ಪಿದರೂ ಅವಘಡ ಸಂಭವಿಸುವ ಸಾಧ್ಯತೆಯಿದೆ. ರಸ್ತೆ ಕುಸಿತ ಕ್ಕೊಳಗಾಗಿ ಸಂಚಾರ ಸ್ಥಗಿತಗೊಂಡಲ್ಲಿ ಬುಡೋಳಿಯಿಂದ ಮಾಣಿ ಮುಖಾಂತರ 5 ಕಿ.ಮೀ. ದೂರ ಕ್ರಮಿಸಿ ನೇರಳಕಟ್ಟೆಯನ್ನು ತಲುಪಬೇಕಾಗುತ್ತದೆ. ಅಲ್ಲದೆ ಪೆರಾಜೆ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗಲಿದೆ.

ಈ ರಸ್ತೆಯು ಮಾಣಿ- ಮೈಸೂರು ಹೆದ್ದಾರಿಯ ನೇರಳಕಟ್ಟೆ ಮತ್ತು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬುಡೋಳಿ ಯಲ್ಲಿ ಸಂಪರ್ಕಿಸುತ್ತದೆ. ಆ ಮೂಲಕ ಬಂಟ್ವಾಳ ಹಾಗೂ ಪುತ್ತೂರು ತಾಲೂಕನ್ನು ಸಂಪರ್ಕಿಸಿದಂತಾಗುತ್ತದೆ. ಜತೆಗೆ ಮಾಣಿ, ಪೆರಾಜೆ, ನೇರಳಕಟ್ಟೆ ಗ್ರಾಮ ಗಳನ್ನು ನೇರವಾಗಿ ಸಂಪರ್ಕಿಸುವ ಸುಲಭ ಮಾರ್ಗ. ಸಾವಿರಾರು ಮಂದಿ ಉಪಯೋಗಿಸುವ ಈ ರಸ್ತೆಗೆ ಕೂಡೋಲು ಎಂಬಲ್ಲಿ ತಡೆಗೋಡೆ ನಿರ್ಮಾಣ ಮಾಡಿ ತತ್‌ಕ್ಷಣ ಅಭಿವೃದ್ಧಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

10 ಲಕ್ಷ ರೂ. ಅನುದಾನ
ಜಿ.ಪಂ., ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ ಅನಂತರ ಕಾಮಗಾರಿ ಆರಂಭವಾಗಿದೆ. 2018-19ನೇ ಸಾಲಿನ ಪ್ರಾಕೃತಿಕ ವಿಕೋಪದ ಅನುದಾನದಲ್ಲಿ 10 ಲಕ್ಷ ರೂ. ಮಂಜೂರಾಗಿದೆ. ಜಿ.ಪಂ. ಕಾಮಗಾರಿ ಕೈಗೆತ್ತಿಕೊಂಡಿದೆ. ಹಲವು ತಿಂಗಳು ಕಳೆದರೂ ಕಾಮಗಾರಿ ಪೂರ್ತಿಯಾಗುವುದು ಕಂಡುಬರುತ್ತಿಲ್ಲ. ಧಾರಾಕಾರ ಮಳೆ ಸಂದರ್ಭ ರಸ್ತೆ ಕಾಮಗಾರಿ ಪೂರ್ತಿಯಾಗದೇ ಇದ್ದಲ್ಲಿ ಸಂಪೂರ್ಣ ಕುಸಿದು ಬೀಳುವ ಸಂಭವವಿದೆ.

Advertisement

ಶೀಘ್ರ ಕಾಮಗಾರಿ ಪೂರ್ತಿ ಭರವಸೆ
ಜಿ.ಪಂ. ಎಂಜಿನಿಯರ್‌ ನೀಡಿದ ವಿವರ ಪ್ರಕಾರ 20 ದಿನಗಳೊಳಗೆ ಕಾಮಗಾರಿ ಪೂರ್ತಿಯಾಗಲಿದೆ. ಇದಕ್ಕೆ 10 ಲಕ್ಷ ರೂ. ಅನುದಾನ ಸಾಲದು. 1 ಕೋಟಿ ರೂ. ಅನುದಾನ ಅವಶ್ಯ. ಈಗ ಬಿಡುಗಡೆಯಾದ 10 ಲಕ್ಷ ರೂ. ಅನುದಾನದಲ್ಲಿ ಪಂಚಾಂಗ ನಿರ್ಮಿಸಿ, ಮತ್ತೆ ಭೂಮಿ ಕುಸಿಯದಂತೆ ರಕ್ಷಣೆ ಕಾರ್ಯ ಮಾಡುತ್ತೇವೆ ಎಂದಿದ್ದಾರೆ. ಈ ಸಂಪರ್ಕ ರಸ್ತೆ ಅಗತ್ಯವಾಗಿ ಅಭಿವೃದ್ಧಿಯಾಗಬೇಕು. ಪಂ.ನಿಂದ ಅನುದಾನ ಸಾಲದು. ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ವಿನಂತಿಸಬಹುದು. ಅದನ್ನು ಮಾಡಲಾಗಿದೆ.
 - ಶಂಭು ಕುಮಾರ್‌ ಶರ್ಮ, ಪಿಡಿಒ, ಪೆರಾಜೆ ಗ್ರಾ.ಪಂ.

 ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next