Advertisement

ಬಜೆಟ್‌ ವರದಿಯಲ್ಲಿ ಕಾಣದ ವಾಸ್ತವ

12:05 PM Mar 27, 2017 | |

ಬೆಂಗಳೂರು: ರಾಜಧಾನಿಗೆ ಈ ಬಾರಿ ಅನುಷ್ಠಾನ ಸಾಧ್ಯ ಎನಿಸುವಂಥ ಬಜೆಟ್‌ ನೀಡಲು ಪ್ರಯತ್ನಿಸಿರುವ ಬಿಬಿಎಂಪಿ, ಕಳೆದ ವರ್ಷದ ಆಯವ್ಯಯದ ಮೇಲೆ ಕೈಗೊಂಡ ಕ್ರಮಗಳ ಕುರಿತ ವರದಿಯಲ್ಲಿ ಸಮರ್ಪಕ ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

Advertisement

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಶಿವರಾಜು ಅವರು 2016-17 ಸಾಲಿನಲ್ಲಿ 9,330 ಕೋಟಿ ರೂ. ಬಜೆಟ್‌ ಮಂಡಿಸಿ ಆರೋಗ್ಯ, ಶಿಕ್ಷಣ, ಪಾಲಿಕೆ ಸ್ವತ್ತುಗಳ ಸಂರಕ್ಷಣೆ, ಕಲ್ಯಾಣ ಸೇರಿ ನೂರಾರು ಕಾರ್ಯಕ್ರಮಗಳನ್ನು ಘೋಷಿಸಿದ್ದರು. 

ಆದರೆ, ಶನಿವಾರ ಬಿಡುಗಡೆ ಮಾಡಿರುವ 2016-17ನೇ ಸಾಲಿನ ಆಯವ್ಯಯದ ಮೇಲೆ ಕ್ರಮ ತೆಗೆದುಕೊಂಡ ವರದಿಯಲ್ಲಿ ಪಾಲಿಕೆಯಿಂದ ಕೈಗೊಳ್ಳ­ಲಾಗದ ಮತ್ತು ಜಾರಿಗೊಳಿಸಲಾಗದ ಯಾವೊಂದು ಯೋಜನೆ ಪ್ರಸ್ತಾಪಿಸಿಲ್ಲ. ಯೋಜನೆ ಜಾರಿಗೆ ಕ್ರಮ­ಕೈಗೊಳ್ಳಲಾಗಿದೆ, ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಲಾಗಿದೆಯೇ ಹೊರತು ನಿಖರವಾದ ಮಾಹಿತಿ ನೀಡಿಲ್ಲ. ಎಷ್ಟು ಪ್ರಮಾಣದ ಕಾಮಗಾರಿ ಮುಗಿದಿದೆ ಎಂಬ ಅಂಶ ವರದಿಯಲ್ಲಿ ಎಲ್ಲಿಯೂ ಇಲ್ಲ. 

ಅನುಮಾನಗಳಿಗೆ ಎಡೆಮಾಡಿದ ವರದಿ: ವರದಿ ಪ್ರಸಕ್ತ ವರ್ಷದಲ್ಲಿ ಪಾಲಿಕೆಯ ಸಾಧನೆಗಳ ಕಿರುಹೊತ್ತಿಗೆ­ಯಂತಿದ್ದು, 3 ವರ್ಷದಿಂದ ಒಂದೇ ವಲಯದಲ್ಲಿದ್ದ ಅಧಿಕಾರಿ/ನೌಕರರ ವರ್ಗಾವಣೆ, ಆನ್‌ಲೈನ್‌ ಮೂಲಕ ಪಾಲಿಕೆ ಸೇವೆಗಳ ಸರಳೀಕರಣ-­ಪಾರದರ್ಶಕ-ದಕ್ಷತೆ ತರುವ ಕಾರ್ಯಕ್ರಮ, ಜಿಐಎಸ್‌ ಮೂಲಕ ಆಸ್ತಿಗಳ ಪತ್ತೆ, 2103 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ,

ಘನ­ತ್ಯಾಜ್ಯ ನಿರ್ವಹಣೆಯಲ್ಲಿ ಪಾಲಿಕೆಗೆ ಸಿಟಿ ಮ್ಯಾನೇಜರ್‌ ಅಸೋಸಿಯೇಷನ್‌, ಪೌರಾಡಳಿತ ನಿರ್ದೇಶ­ನಾಲಯದಿಂದ ದೊರೆತ ಪ್ರಶಸ್ತಿ,  ಕಿತ್ತೂರು ರಾಣಿ ಚೆನ್ನಮ್ಮ ಜಂಕ್ಷನ್‌ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತ ಹೀಗೆ ಬಜೆಟ್‌ನಲ್ಲಿ ಉಲ್ಲೇಖವಿಲ್ಲದ ಹಲವು ಯೋಜನೆ­ಗಳನ್ನು ವರದಿಯಲ್ಲಿ ಉಲ್ಲೇಖೀಸಿರುವುದು ವರದಿಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ. 

Advertisement

ಕೇವಲ 9 ಪುಟಗಳಲ್ಲೇ ಸಂಪೂರ್ಣ ವಿವರ: ವಿಪ­ರ್ಯಾಸ­ವೆಂದರೆ 9330 ಕೋಟಿ ರೂ. ಗಾತ್ರದ ನೂರಾರು ಯೋಜನೆಗಳನ್ನು ಒಳಗೊಂಡ ಆಯ­ವ್ಯಯದ ಮೇಲೆ ತೆಗೆದುಕೊಂಡ ಕ್ರಮಗಳ ಕುರಿತು ಅಧಿಕಾರಿಗಳು ಕೇವಲ 9 ಪುಟಗಳಲ್ಲಿ ಮಾಹಿತಿ ನೀಡಿದ್ದಾರೆ. ಜತೆಗೆ 2017-18ನೇ ಸಾಲಿನಲ್ಲಿ ಘೋಷಣೆ ಮಾಡಲಾಗಿರುವ ಹಲವು ಘೋಷಣೆಗಳು ಇಲ್ಲಿಯೂ ಮುಂದುವರಿದಿದ್ದು, ಆಸ್ತಿ ತೆರಿಗೆ ಹೊರತು ಪಡಿಸಿ ಜಾಹೀರಾತು, ಒಎಫ್ಸಿ, ಸುಧಾರಣ ಶುಲ್ಕ, ವಾಣಿಜ್ಯ ಪರವಾನಗಿ ಹೀಗೆ ಇತರೆ ಆದಾಯ ಮೂಲಗಳಿಂದ ಪಾಲಿಕೆಗೆ ಬಂದ ಆದಾಯದ ಕುರಿತು ಪ್ರಸ್ತಾಪವಿಲ್ಲ.

ಇಂದಿನಿಂದ ಬಜೆಟ್‌ ಚರ್ಚೆ
ಬಿಬಿಎಂಪಿಯಲ್ಲಿ ಸೋಮವಾರದಿಂದ 2017-18ನೇ ಸಾಲಿನ ಆಯವ್ಯಯದ ಮೇಲೆ ಚರ್ಚೆ ನಡೆಯ­ಲಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಆಡಳಿತ ವಿರುದ್ಧ ಪ್ರತಿಪಕ್ಷ ಬಿಜೆಪಿ ಟೀಕಾಪ್ರಹಾರ ನಡೆಸುವ ಸಾಧ್ಯತೆಯಿದೆ.  ಅನುದಾನ ಹಂಚಿಕೆ, ಯಾವುದೇ ಬೃಹತ್‌ ಕಾಮಗಾರಿಗಳಿಲ್ಲದೆ, ನಗರದ ಅಭಿವೃದ್ಧಿಗೆ ಒತ್ತು ನೀಡದ ಬಜೆಟ್‌ ಮಂಡನೆ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರು ಬಜೆಟ್‌ ಮಂಡನೆಯಾದ ದಿನದಿಂದಲೇ ಆರೋಪಿಸಿದ್ದಾರೆ. ಇದನ್ನೇ ಮುಂದಿಟ್ಟು­ಕೊಂಡು ಸೋಮವಾರದಿಂದ ಆರಂಭ­ ವಾಗಲಿರುವ ಬಜೆಟ್‌ ಮೇಲಿನ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. 

ಹಿಂದಿನ ಬಜೆಟ್‌ನ ಕುರಿತ ವರದಿಯಲ್ಲಿ ಉಲ್ಲೇಖೀಸಿದ ಅಂಶಗಳು 
ಆಡಳಿತ:

* 702 ಹುದ್ದೆಗಳ ನೇರ ನೇಮಕಾತಿಗೆ ಕ್ರಮ
* ರಾಷ್ಟ್ರೀಯ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ಕ್ರಮ 
* 500 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ
* ಬಟವಾಡೆ ಅಧಿಕಾರಿಗಳ ಸಂಖ್ಯೆ 685 ರಿಂದ 15 ಕ್ಕೆ ಇಳಿಕೆ
* 742 ವಿವಿಧ ವೃಂದದ ಅಧಿಕಾರಿ/ಸಿಬ್ಬಂದಿಗೆ ಮುಂಬಡ್ತಿ

ಮಾಹಿತಿ ತಂತ್ರಜ್ಞಾನ
* ಆನ್‌ಲೈನ್‌ ಮೂಲಕ ರಸ್ತೆ ಕತ್ತರಿಸಲು ಅನುಮತಿ ನೀಡುವ ವ್ಯವಸ್ಥೆ ಜಾರಿ 
* ಶವಾಗಾರವನ್ನು ಆನ್‌ಲೈನ್‌ ಮೂಲಕ ಕಾಯ್ದಿರಿಸುವ ವ್ಯವಸ್ಥೆಗೆ ಚಾಲನೆ 
* ಪಾಲಿಕೆಯಲ್ಲಿರುವ ಮಾಹಿತಿ­ಗಳನ್ನು ಡಿಜಿಟಲೀಕರಣ  ಮಾಡುವ ಕಾರ್ಯ ಪ್ರಗತಿಯಲ್ಲಿದೆ. 

ಆರ್ಥಿಕ ವಿಭಾಗ
* 622 ಕೋಟಿ ಸಾಲ ಮರುಪಾವತಿ ಮತ್ತು ಜಾನ್‌ಸನ್‌ ಮಾರುಕಟ್ಟೆ ಹಿಂಪಡೆಯಲಾಗಿದೆ
* ಸಾಲದ ಮೊತ್ತಕ್ಕೆ ಪಾವತಿಸುತ್ತಿದ್ದ ಬಡ್ಡಿಯಲ್ಲಿ 112 ಕೋಟಿ ಉಳಿತಾಯ 
* ಸಂಯೋಜಿತ ಲೆಕ್ಕಪತ್ರ ಪದ್ಧತಿ ಅಳವಡಿಸಲು ಯೋಜನೆ 
* 7067 ಬಾಕಿ ಬಿಲ್ಲುಗಳ ಪೈಕಿ 1167 ಕೋಟಿ ರೂ. ಮೊತ್ತ ಗುತ್ತಿಗೆದಾರರಿಗೆ ಪಾವತಿ 
* ಲೆಕ್ಕ ಪತ್ರಗಳ ವ್ಯವಹಾರ ಪಾಲಿಕೆಯ ವೆಬ್‌ಸೈಟ್‌ನಲ್ಲಿ 

ಕಂದಾಯ
* ನಗರದಲ್ಲಿನ ಮಾಲ್‌, ಟೆಕ್‌ಪಾಕ್‌, ಕೈಗಾರಿಕೆಗಳ ಪರಿಶೀಲನೆ ಟೋಟಲ್‌ ಸ್ಟೇಷನ್‌ ಸರ್ವೆಗೆ ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ
* ಪ್ರಸಕ್ತ ಸಾಲಿನಲ್ಲಿ ದಾಖಲೆಯ 2103 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ 

ಘನತ್ಯಾಜ್ಯ ನಿರ್ವಹಣೆ
* ಪೌರಕಾರ್ಮಿಕರಿಗೆ ಬಿಸಿಯೂಟ ವಿತರಣೆ ಕಾರ್ಯಕ್ರಮ ಜಾರಿ 
* ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಮನೆಗಳಲ್ಲಿ ಸಂಸ್ಕರಿಸಲು ಪ್ರೋತ್ಸಾಹ. ಒಟ್ಟು ಸಂಸ್ಕರಣಾ ಮಟ್ಟ ಶೇ.55ರಷ್ಟು ತಲುಪಿದೆ
* ಎಲ್ಲ ವಾರ್ಡ್‌ಗಳಲ್ಲಿ ಸಾವಯವ ಗೊಬ್ಬರ ಸಂತೆಗಳ ಆಯೋಜನೆ 
* ಪ್ರತಿ 750 ಮನೆಗಳಂತೆ ಬ್ಲಾಕ್‌ಗಳಾಗಿ ವಿಂಗಡಿಸಿ ಸಂಗ್ರಹಣೆ ಸಾಮರ್ಥಯ ಹೆಚ್ಚಿಸಲಾಗಿದೆ
* 14 ಭಾಗಗಳಲ್ಲಿ ಸ್ಮಾಟ್‌ ಬಿನ್‌ ಇರಿಸಲಾಗಿದ್ದು, ಮುಂದಿನ ದಿನಗಳಲ್ಲಿ 250 ಹೆಚ್ಚುವರಿ ಬಿನ್‌ ಇರಿಸಲಾಗುವುದು 

ಶಿಕ್ಷಣ
* ಜಿಯೋ ಕೋ ಆರ್ಡಿನೆಂಟ್ಸ್‌ ಕೇಂದ್ರಿಯ ಸರ್ವರ್‌ಗೆ ಶಾಲೆಗ­ಳನ್ನು ಒಳಪಡಿಸಿ ಆಡಳಿತ ವ್ಯವಸ್ಥೆ ಪರಿಣಾಮಕಾರಿಗೊಳಿಸಲಾಗಿದೆ 
* ವಿದ್ಯಾರ್ಥಿಗಳಿಗೆ ಪಾಲಿಕೆಯಿಂದ ನೀಡುವ ಸವಲತ್ತುಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ 
* ಸಿಎಸ್‌ಆರ್‌ ಅನುದಾನದ ಅಡಿಯಲ್ಲಿ ಬಿಬಿಎಂಪಿ ಶಾಲೆಗ­ಳಲ್ಲಿ 80 ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ
* ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೂ ಬಿಸಿಯೂಟ ವಿಸ್ತರಣೆ 
* ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರೋಗ್ಯ ಕಿಟ್‌ ಒದಗಿಸಲಾಗಿದೆ

ಕಲ್ಯಾಣ
* ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಶೇ.24.10 ಅಡಿಯಲ್ಲಿ ಯೋಜನೆಗಳಿಗೆ ಹಣ ವರ್ಗಾವಣೆಗೆ ಪ್ರತ್ಯೇಕ ಖಾತೆ ಆರಂಭ 
* ಎಸ್‌ಸಿ-ಎಸ್‌ಟಿ ಮತ್ತು ಬಿಸಿಎಂ ವರ್ಗಗಳ ಮನೆಗಳ ನಿರ್ಮಾಣಕ್ಕೆ 356.40 ಕೋಟಿ ರೂ. ಮೊತ್ತದಲ್ಲಿ 8190 ಮನೆಗಳನ್ನು ನಿರ್ಮಿಸಲು ಗುರುತಿಸಲಾಗಿದೆ
* ರಾತ್ರಿ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಸತಿ ಒದಗಿಸಲಾಗುವುದು|

ಕೆರೆಗಳು
* 11 ಕೆರೆಗಳಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಾಗುತ್ತಿದೆ 
* ಬಿಡಿಎಯಿಂದ ಪಾಲಿಕೆಗೆ ವರ್ಗವಾದ 22 ಕೆರೆಗಳ 
* ಪೈಕಿ 16 ಕೆರೆಗಳನ್ನು 106 
* ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಕ್ರಮ
* ಕೆರೆಗಳ ಅಭಿವೃದ್ಧಿಗೆ ಸರ್ಕಾರ 156 ಕೋಟಿ ನೀಡಿದ್ದು, ಕಾಮಗಾರಿಗಳಿಗೆ ಟೆಂಡರ್‌

Advertisement

Udayavani is now on Telegram. Click here to join our channel and stay updated with the latest news.

Next