ದೇಶದ ಅರ್ಥ ವ್ಯವಸ್ಥೆ ಮತ್ತು ಖರ್ಚು ವೆಚ್ಚಗಳನ್ನು ಸರಿತೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2023-24ನೇ ವಿತ್ತೀಯ ವರ್ಷದಲ್ಲಿ 15.4 ಲಕ್ಷ ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಮಾ.31ಕ್ಕೆ ಮುಕ್ತಾಯವಾಗಲಿರುವ ಹಾಲಿ ವಿತ್ತ ವರ್ಷದಲ್ಲಿ ಸರ್ಕಾರ ಮಾಡಿರುವ ಸಾಲಕ್ಕಿಂತ ಇದು ಹೆಚ್ಚಿನ ಪ್ರಮಾಣದ್ದೇ ಆಗಿದೆ ಎನ್ನುವುದು ಗಮನಾರ್ಹ.
ಹಾಲಿ ವಿತ್ತ ವರ್ಷಕ್ಕಾಗಿ ಕೇಂದ್ರ ಸರ್ಕಾರ 14.21 ಲಕ್ಷ ಕೋಟಿ ರೂ.ಗಳನ್ನು ಸಾಲವಾಗಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಳೆದ ಬಜೆಟ್‌ನಲ್ಲಿ ಪ್ರಸ್ತಾಪ ಸಲ್ಲಿಸಿತ್ತು.
ಸೆಕ್ಯುರಿಟಿಗಳಿಂದ 11.8 ಲಕ್ಷ ಕೋಟಿ ರೂ. ಸಾಲ ಪಡೆದುಕೊಂಡು 2023-24ನೇ ಸಾಲಿನಲ್ಲಿ ಉಂಟಾಗಲಿರುವ ವಿತ್ತೀಯ ಕೊರತೆಯನ್ನು ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಉಳಿದ ಮೊತ್ತವನ್ನು ಸಣ್ಣ ಉಳಿತಾಯ ಮತ್ತು ಇತರ ಆದಾಯದ ಮೂಲಗಳಿಂದ ಹೊಂದಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಒಟ್ಟು 15.4 ಲಕ್ಷ ಕೋಟಿ ರೂ. ಸಾಲದ ಮೊತ್ತವನ್ನು ಪಡೆಯಲಿದೆ.
ಜ.27ರ ವರೆಗೆ ಕೇಂದ್ರ ಸರ್ಕಾರ 12.93 ಲಕ್ಷ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಈಗಾಗಲೇ ಜಮೆ ಮಾಡಿದೆ. ಅದು 2022-23ನೇ ಸಾಲಿನ ಒಟ್ಟು 14.21 ಲಕ್ಷ ಕೋಟಿ ರೂ. ಮೊತ್ತದ ಪೈಕಿ ಶೇ.91 ಆಗಿದೆ ಎಂದು ಬಜೆಟ್ ದಾಖಲೆಗಳಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿದೆ. 2022-23ನೇ ಸಾಲಿನಲ್ಲಿ ಡೇಟೆಡ್ ಸೆಕ್ಯುರಿಟಿಗಳ ಮೂಲಗಳಿಂದ 14,95,000 ಕೋಟಿ ರೂ. ಸಂಗ್ರಹಿಸಿದೆ.