Advertisement

ಬಜೆಟ್‌ 2019 – 87ಎ ರಿಬೇಟ್‌ ಮತ್ತು ಮುಂದಿನ ಹಾದಿ

12:30 AM Feb 11, 2019 | |

ತೆರಿಗೆ ವಿನಾಯಿತಿಯ ಮಿತಿಯನ್ನು  (Tax exemption limit) ಹೆಚ್ಚಳ ಮಾಡದೆ ಇದ್ದ ಕಾರಣ ಇದು ಎಲ್ಲಾಮಟ್ಟದ ಆದಾಯದವರಿಗೂ ಅನ್ವಯವಾಗುವುದಿಲ್ಲ. ಕೇವಲ ಒಂದು ಸ್ಲಾಬ್‌ನವರೆಗೆ ಮಾತ್ರ ಅನ್ವಯಿಸುವಂತೆ ರಿಯಾಯಿತಿ ನೀಡಿದ್ದಾರೆ. ಕರ ವಿನಾಯಿತಿಗೂ ಕರ ರಿಯಾಯಿತಿಗೂ ಇರುವ ವ್ಯತ್ಯಾಸ ಇದೇ. ಆದರೆ ಈ ರೀತಿ ಏಕೆ ಮಾಡಿದರು? ಎಂದು ಯಾರಾದರೂ ಕೇಳಬಹುದು. ಸರಕಾರದ ಎಲ್ಲಾ ಸೌಲಭ್ಯಗಳೂ ಇರುವುದೇ ಹಾಗೆ. ಆದಾಯ ತೆರಿಗೆ ಕೆಳ ಮಧ್ಯಮ ವರ್ಗಕ್ಕೆ ಕಡಿಮೆ ಮತ್ತು ಹೆಚ್ಚಿನ ಆದಾಯ ಇರುವವರಿಗೆ ಜಾಸ್ತಿ. 

Advertisement

ಈ ಕೆಳಗಿನ ಟೇಬಲನ್ನು ಸರಿಯಾಗಿ ನೋಡಿ. ಇದು ಅದೇ ಟೇಬಲ್‌ – ಬಜೆಟ್‌ ಮಂಡನೆಯಾದ ಕೆಲ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಆರಂಭಿಸಿದ್ದು ಇದೇ ಟೇಬಲ್‌ ಫೇಸ್‌ ಬುಕ್‌, ವಾಟ್ಸ್‌ಆ್ಯಪ್‌ಗ್ಳಲ್ಲಿ ಇದು ಹಾಕಿದ ಸುತ್ತುಗಳಿಗೆ ಲೆಕ್ಕವಿಲ್ಲ. ಈ ಟೇಬಲನ್ನು ಹಿಡಕೊಂಡು ಕಳೆದ ಕೆಲ ದಿನಗಳಲ್ಲಿ ಒಂದು ಸಣ್ಣ ಯುದ್ಧವೇ ನಡೆದಿದೆ. ಇದರ ಹೊಸ ಬಜೆಟ್‌ ಅನುಷ್ಠಾನಕ್ಕೆ ಬಂದರೆ ರೂ. 5,00,000 ಆದಾಯ ಇರುವ ಒಬ್ಟಾತ (ಪರಿಸ್ಥಿತಿ-1) ನೂರಕ್ಕೆ ನೂರು ರಿಬೇಟ್‌ ಪಡೆದು ಕಿಂಚಿತ್ತೂ ಕರ ಕಟ್ಟದೆ ಬಚಾವಾದರೆ ಕೇವಲ ನೂರು ರೂಪಾಯಿ ಜಾಸ್ತಿ ಅಂದರೆ ರೂ. 5,00,100 ವರಮಾನ ಇರುವ ಇನ್ನೊಬ್ಟಾತ (ಪರಿಸ್ಥಿತಿ-2) ರೂ. 13,021 ಕರ ಕಟ್ಟಬೇಕು. ಅಂದರೆ ಕೇವಲ ನೂರು ರೂಪಾಯಿ ಜಾಸ್ತಿ ಸಂಪಾದನೆ ಮಾಡಿದ ತಪ್ಪಿಗೆ ಹದಿಮೂರು ಸಾವಿರ ಕಳಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿ ಕಾಣಿಸುತ್ತದೆ. ಕೆಲವರು ಇದು ಅಮಾಯಕರ ತಲೆ ಮೇಲೆ ಮೋದಿ ಹೆಣೆದ ಮೋಸ ಎಂದು ಸಾರಿದರೆ ಇನ್ನು ಕೆಲವರು ಈ ಟೇಬಲ್ಲೇ ಸರಿ ಇಲ್ಲ ಎಂದು ವಾದಕ್ಕಿಳಿದಿದ್ದಾರೆ. 

ಈ ಬಗ್ಗೆ ಸ್ಪಷ್ಟೀಕರಣ ಕೇಳುತ್ತಾ ನನಗೆ ಬಂದ ಕರೆಗಳಿಗೆ, ಸಂದೇಶಗಳಿಗೆ ಲೆಕ್ಕವಿಲ್ಲ. ಆದ ಕಾರಣ ಈ ಬಗ್ಗೆ ಕಳೆದ ವಾರವೇ ಮೂಲಭೂತ ವಿವರಣೆ ನೀಡಿದ್ದರೂ ಸಹ ಇನ್ನೊಮ್ಮೆ ಈ ವಿಚಾರವನ್ನು ಸ್ಪಷ್ಟವಾಗಿ ಕೊರೆಯಬೇಕು ಅಂತ ಅನಿಸಿತು. ಅಂತೆಯೇ ಈ ಕೊರೆತ; ಒಪ್ಪಿಸಿಕೊಳ್ಳಿ.

ಪ್ರಪ್ರಥಮವಾಗಿ ನಾನು ಹೇಳಬಯಸುವುದು ಏನೆಂದರೆ ಈ ಟೇಬಲ್‌ ಸರಿಯಾಗಿಯೇ ಇದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಇದು ಯಾಕೆ ಹೀಗೆ ಅಂದರೆ ಸೆಕ್ಷನ್‌ 87ಎ ಇರುವುದೇ ಹಾಗೆ. ರೂ 5 ಲಕ್ಷದವರೆಗಿನ ಆದಾಯ ಇರುವವರು ಮಾತ್ರ ಈ ರಿಯಾಯಿತಿ ಅಥವಾ ರಿಬೇಟಿಗೆ ಅರ್ಹರು. ಅವರಿಗೆ ಸಂಪೂರ್ಣ ಕರ ವಿನಾಯಿತಿ ಸಿಗುತ್ತದೆ. ಹಾಗಾಗಿ ತಾವು ಕಟ್ಟ ತಕ್ಕ ರೂ. 12,500 ಕರ ಸಂಪೂರ್ಣವಾಗಿ ಮನ್ನಾ ಆಗಿ ಅವರು ಒಂದೇ ಒಂದು ಪೈಸೆ ಕರ ಕಟ್ಟದೆ ಪಾರಾಗುತ್ತಾರೆ. ಆದರೆ ರೂ 5 ಲಕ್ಷದ ಮೇಲಿನ ಆದಾಯ ಇರುವವರಿಗೆ ಈ 87ಎ ಸೆಕ್ಷನ್‌ ಸೌಲಭ್ಯ ಇಲ್ಲ. ಹಾಗಾಗಿ ಅವರು ಯಥಾ ಪ್ರಕಾರ ರೂ. 2.5 ಲಕ್ಷದಿಂದ ಆರಂಭಿಸಿ ಸಂಪೂರ್ಣ ಕರ ಕಟ್ಟಬೇಕು. ಯಾವುದೇ ಮನ್ನಾ ಇಲ್ಲದ ಕಾರಣ ಅದು ರೂ. 13,021 ಕ್ಕೆ ಬಂದು ನಿಲ್ಲುತ್ತದೆ. 


ಇಲ್ಲಿ  ತೆರಿಗೆ ವಿನಾಯಿತಿಯ ಮಿತಿಯನ್ನು  (Tax exemption limit) ಹೆಚ್ಚಳ ಮಾಡದೆ ಇದ್ದ ಕಾರಣ ಇದು ಎಲ್ಲಾ ಮಟ್ಟದ ಆದಾಯದವರಿಗೂ ಅನ್ವಯವಾಗುವುದಿಲ್ಲ. ಕೇವಲ ಒಂದು ಸ್ಲಾಬ್‌ನವರೆಗೆ ಮಾತ್ರ ಅನ್ವಯಿಸುವಂತೆ ರಿಯಾಯಿತಿ ನೀಡಿದ್ದಾರೆ. ಕರ ವಿನಾಯಿತಿಗೂ ಕರ ರಿಯಾಯಿತಿಗೂ ಇರುವ ವ್ಯತ್ಯಾಸ ಇದೇ. ಆದರೆ ಈ ರೀತಿ ಏಕೆ ಮಾಡಿದರು? ಎಲ್ಲರಿಗೂ ಏಕೆ ಈ ಲಾಭ ನೀಡಿಲ್ಲ? ಎಂದು ಯಾರಾದರೂ ಕೇಳಬಹುದು. ಸರಕಾರದ ಎಲ್ಲಾ ಸೌಲಭ್ಯಗಳೂ ಇರುವುದೇ ಹಾಗೆ. ಆದಾಯ ತೆರಿಗೆ ಯಾವತ್ತೂ ಕೆಳ ಮತ್ತು ಕೆಳ ಮಧ್ಯಮ ವರ್ಗಕ್ಕೆ ಕಡಿಮೆ ಮತ್ತು ಹೆಚ್ಚಿನ ಆದಾಯ ಇರುವವರಿಗೆ ಜಾಸ್ತಿ. ಮೀಸಲಾತಿ ಕೂಡಾ ಒಂದು ನಿರ್ದಿಷ್ಟ ವರಮಾನದ ಕೆಳಗಿನವರಿಗೆ ಮಾತ್ರವೇ ಇದೆ. ಅದರಿಂದ ಮೇಲಿನ ಕ್ರೀಮಿಲೇಯರ್‌ಗೆ ಇಲ್ಲ. ವಿದ್ಯಾರ್ಥಿ ವೇತನಗಳಲ್ಲಿಯೂ, ಗ್ಯಾಸ್‌ ಸಬ್ಸಿಡಿಯಲ್ಲೂ, ರೇಶನ್‌ ಕಾರ್ಡಿನಲ್ಲೂ ವರಮಾನದ ಮಾನದಂಡ ಇದ್ದೇ ಇದೆ. ಈಗ ತಾನೆ ಬಿಡುಗಡೆಯಾದ ಮೇಲ್ಜಾತಿಯ ರಿಸರ್ವೇಶನ್‌ನಲ್ಲೂ ಕೂಡಾ ಆರ್ಥಿಕ ನಿರ್ಬಂಧ ಇದೆ. ಹಾಗಾಗಿ ಈ ರೀತಿಯ ಒಂದು ಆರ್ಥಿಕ ಮಟ್ಟದವರಿಗೆ ಮಾತ್ರ ಸೀಮಿತವಾದ ರಿಯಾಯಿತಿ ಲಾಗಾಯ್ತಿನಿಂದ ನಡೆದುಕೊಂಡು ಬಂದ “ಸಾಮಾಜಿಕ ನ್ಯಾಯ’ದ ಇನ್ನೊಂದು ಮುಖವೇ ಆಗಿದೆ ಮತ್ತು ಆ ಬಗ್ಗೆ ಯಾರದ್ದೂ ತಕರಾರು ಇರಲಿಕ್ಕಿಲ್ಲ ಎಂದು ನನ್ನ ಭಾವನೆ. 

ಆದರೆ ಇಲ್ಲಿ ಒಂದು ರೀತಿಯ ವಿಪರ್ಯಾಸ ಅನಿಸುವುದು ಒಬ್ಟಾತ ಐದು ಲಕ್ಷದ ಗಡಿಯನ್ನು “ಜಸ್ಟ್‌ ಪಾಸ್‌’ ಆದಾಗ. ಒಂದು ವರ್ಷ 5 ಲಕ್ಷ ವರಮಾನ ಇದ್ದುಕೊಂಡು ಮುಂದಿನ ವರ್ಷ ಕಷ್ಟ ಪಟ್ಟು ನೂರು ರೂಪಾಯಿ ಜಾಸ್ತಿ ಸಂಪಾದನೆ ಮಾಡಿದವನು ಭಾರಿ ದೊಡ್ಡ ಮೊತ್ತ (ರೂ.13,021) ಕಳಕೊಳ್ಳಬೇಕಾಗುತ್ತದೆ. ಈ ವಿಪರ್ಯಾಸ ಒಂಥರಾ ಮುಖಕ್ಕೆ ರಾಚುತ್ತದೆ. ಆದರೆ ಸೀಮಿತ ಕೆಳ ವರ್ಗಕ್ಕೆ ಮಾತ್ರ ಸೌಲಭ್ಯ ಕೊಡಬೇಕು ಎಂದು ಹೊರಟರೆ ಈ ರೀತಿಯ ಗಡಿರೇಖೆ ಅನಿವಾರ್ಯವೂ ಹೌದು.

Advertisement

ಹಾಗೆ ನೋಡುವುದಾದರೆ ಈ ಸೆಕ್ಷನ್‌ 87ಎ ಹೊಸತೇನಲ್ಲ. ಇದನ್ನು ಪ್ರಥಮ ಬಾರಿಗೆ ಭರತ ಖಂಡದಲ್ಲಿ ಜಾರಿ ಮಾಡಿದ್ದು 2013 ರ ಬಜೆಟ್ಟಿನಲ್ಲಿ ಆಗಿನ ವಿತ್ತ ಸಚಿವರಾಗಿದ್ದ ಚಿದಂಬರಂ ಅವರು. ಆದರೆ ಅದು ಚಿಕ್ಕ ಪ್ರಮಾಣದಲ್ಲಿತ್ತು. ರೂ. 30,000 ಕರ ಕಟ್ಟುವವರಿಗೆ ಕೇವಲ ರೂ. 2,000ದ ರಿಬೇಟ್‌ ನೀಡಿದ್ದರು. ಹಾಗಾಗಿ ಅದನ್ನು ಯಾರೂ ಒಂದು ಇಶ್ಯೂ ಮಾಡಲಿಲ್ಲ. ಆ ಬಳಿಕ 2014ರಲ್ಲಿ ಬಂದ ಜೈಟಿÉಯವರು ಮುಂದಿನ ಎರಡು ವರ್ಷ ಅದೇ ಪದ್ಧತಿಯನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಿಕೊಂಡು ಹೋದರು. ಮುಂದೆ ಮೂರನೆಯ ವರ್ಷ (2016-17) ರಿಬೇಟ್‌ ಮಿತಿಯನ್ನು ರೂ. 2000 ದಿಂದ ರೂ. 5000ಕ್ಕೆ ಏರಿಸಿದರು. ಬಳಿಕ 2017-18 ರಲ್ಲಿ ಕರ ದರವನ್ನು ಶೇ.5ಕ್ಕೆ ಇಳಿಸಿದಾಗ 87ಎ ಮಿತಿಯನ್ನೂ ಕೂಡಾ ರೂ. 3.5 ಲಕ್ಷಕ್ಕೆ ಇಳಿಸಿದರು. ಮರು ವರ್ಷವೂ ಅದೇ ಮುಂದುವರಿದು ಆ ಪದ್ಧತಿ ರೂ. 5 ಲಕ್ಷದ ಮಿತಿಯೊಡನೆ ಇದೀಗ ಬರೋಬ್ಬರಿ ರೂ. 12,500 (ಸೆಸ್‌ ಸಹಿತ ರೂ. 13,000)ರ ರಿಯಾಯಿತಿಗೆ ಬಂದು ನಿಂತಿದೆ. ಈ ರೀತಿ ದೊಡ್ಡ ಮೊತ್ತದಲ್ಲಿ ಒಂದು ಸ್ಲಾಬಿಗೆ ಸಂಪೂರ್ಣ ಕರಭಾರವನ್ನು ಮನ್ನಾ ಮಾಡಿದ್ದು ಇದೇ ಮೊದಲ ಬಾರಿ. ಈ ಸೆಕ್ಷನ್‌ ಇಷ್ಟು ಪ್ರಭಾವಶಾಲಿಯಾಗಿ ಬಳಕೆಯಾಗಿದ್ದು ಇದೇ ಪ್ರಥಮ ಹಾಗೂ ಬಹುತೇಕ ಜನರು 6 ವರ್ಷಗಳಿಂದ ಜಾರಿಯಲ್ಲಿದ್ದ ಈ ಸೆಕ್ಷನ್ನನ್ನು ಗಮನಿಸಿದ್ದೂ ಕೂಡಾ ಇದೇ ಮೊದಲ ಬಾರಿ. ಈ ಸೆಕ್ಷನ್‌ ಮಟ್ಟಿಗೆ ಹೇಳುವುದಾದರೆ ಆದಾಯ ಅಂದರೆ ಕರಾರ್ಹ ಆದಾಯ; ಒಟ್ಟು ಆದಾಯ ಅಲ್ಲ. ಒಟ್ಟು ಆದಾಯದಿಂದ ಕಳೆಯುವುದನ್ನೆಲ್ಲಾ ಕಳೆದು ಅಂತಿಮವಾಗಿ ಕರಕಟ್ಟಲು ಸಿಗುವ ಮೊತ್ತವೇ ಕರಾರ್ಹ ಆದಾಯ. ಈ ರೀತಿ ಸಿಗುವ ಆದಾಯ ರೂ. 5 ಲಕ್ಷದ ಮೇಲೆ ಇದ್ದರೆ ಅಂತವರಿಗೆ ಈ ಸೆಕ್ಷನ್‌ ಅನ್ವಯವಾಗುವುದೇ ಇಲ್ಲ; ಅದರ ಒಳಗಿನವರಿಗೆ ಮಾತ್ರ ಇದರ ಲಾಭ ಇರುತ್ತದೆ.

ಆದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನ ಕರಾರ್ಹ ಆದಾಯವನ್ನು ರೂ. 5 ಲಕ್ಷದ ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಹೇಗಾದರೂ ಮಾಡಿ ಕರಾರ್ಹ ಆದಾಯವನ್ನು ರೂ. 5 ಲಕ್ಷಕ್ಕಿಂತ ಕಡಿಮೆ ಮಾಡಬೇಕು ಎಂದು ಯೋಚಿಸುತ್ತಾರೆ. ವಿವಿಧ ಹೂಡಿಕೆಗಳಲ್ಲಿ ತೊಡಗಿಸಿಕೊಂಡು ನಿಮ್ಮ ಕರಾರ್ಹ ಆದಾಯ ರೂ. 5 ಲಕ್ಷದ ಒಳಗೆ ಬರುವಂತೆ ನೋಡಿಕೊಂಡು ಕರ ಮುಕ್ತ ಜೀವನ ನಡೆಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next